ಹುಬ್ಬಳ್ಳಿ (ಡಿ.03): ಕಳೆದ 16 ವರ್ಷಗಳಿಂದ ನಾನಾ ಕಾರಣಗಳಿಂದ ತನ್ನ ಉತ್ಪಾದನೆ ಸ್ಥಗಿತಗೊಳಿಸಿದ್ದ ಕೋಲಾರ ಚಿನ್ನದ ಗಣಿಗೆ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದೆ. ಬಳಿಕ ಮಿನರಲ್‌ ಎಕ್ಸ್‌ಪೋರೇಷನ್‌ ಕಾರ್ಪೊರೇಷನ್‌ನ ಅಧಿಕಾರಿಗಳಿಗೆ ಭಾರತ ಗೋಲ್ಡ್‌ ಮೈನ್ಸ್‌ನ ಗುತ್ತಿಗೆ ಭೂಮಿಯಲ್ಲಿ ಪರಿಶೋಧನೆ ಮಾಡಲು ನಿರ್ದೇಶಿಸಲಾಗಿತ್ತು. ಅದರಂತೆ ಕೋಲಾರ ಚಿನ್ನದ ಗಣಿ ಭೂಮಿಯಲ್ಲಿ ಪರಿಶೋಧನೆ ಕಾರ್ಯವೂ ಆರಂಭವಾಗಿತ್ತು. ಚಿನ್ನದ ಮೇಲಿನ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ಕೆಜಿಎಫ್‌ನ ಚಿನ್ನದ ಗಣಿಯನ್ನು ಪುನಾರಂಭ ಮಾಡುವುದು ಅನಿವಾರ್ಯ ಎಂದು ಕೇಂದ್ರ ಖನಿಜ ಸಚಿವಾಲಯದ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದರು. 

ಈ ಎಲ್ಲ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ಮತ್ತೆ ಕೆಜಿಎಫ್‌ ಚಿನ್ನದ ಗಣಿಯನ್ನು ಪುನಾರಂಭಿಸಲು ಮುಂದಾಗಿದೆ. ಗಣಿಯಲ್ಲಿ ಈಗಲೂ ಚಿನ್ನ ಹಾಗೂ ಗಣಿಯಿಂದ ಹೊರ ತೆಗೆದಿರುವ ಮಣ್ಣಿನಲ್ಲಿ (ಸಯನೈಡ್‌ ಗುಡ್ಡ) ಚಿನ್ನ ಇದೆ ಎಂದು ಸರ್ಕಾರ ಅಂದಾಜಿಸಿದೆ. ಹಾಗಾಗಿ ಈ ಎಲ್ಲ ಬೆಳವಣಿಗೆಗಳು ಕೆಜಿಎಫ್‌ ಭಾಗದ ಜನರಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ. ಈ ಗಣಿಗಾರಿಕೆ ಮತ್ತೆ ಆರಂಭವಾಗುದರಿಂದ ‘ಕನ್ನಡ ನಾಡು ಚಿನ್ನದ ಬೀಡು’ ಎಂಬುದನ್ನು ಸತ್ಯವಾಗಲಿಸಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದ ಬಿಜಿಎಂಎಲ್‌ 1980ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿತ್ತು. ಸತತ ನಷ್ಟದಿಂದಾಗಿ 2001ರ ಫೆ. 28ರಂದು ಗಣಿಯನ್ನು ಮುಚ್ಚುವ ಮೂಲಕ ಆಗಿನ ಕೇಂದ್ರ ಸರ್ಕಾರವು ಬಿಜಿಎನ್‌ಎಲ್‌ ಕಂಪನಿಗೆ ಬೀಗಮುದ್ರೆ ಹಾಕಿತ್ತು.