ರಾಜ್ಯದಲ್ಲಿ ಶೀಘ್ರ ಬಿಜೆಪಿ ಸರ್ಕಾರ ತನ್ನ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿಯಲಾಗಿದೆ. 

 ತುಮಕೂರು (ಅ.14):  ವಿಧಾನಸೌಧದಲ್ಲೇ ಭ್ರಷ್ಟಾಚಾರ ಡ್ಯಾನ್ಸ್‌ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ಆರೋಪಿಸಿದ್ದಾರೆ.

ಅವರು ಶಿರಾದಲ್ಲಿ ನಡೆದ ಕಾಡುಗೊಲ್ಲ ಸಮುದಾಯದ ಸಭೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೊಟೇಲ್‌ನಲ್ಲಿ ಒಂದೊಂದು ತಿಂಡಿಗೆ ಒಂದೊಂದು ರೇಟ್‌ ಫಿಕ್ಸ್‌ ಮಾಡಿದ ಹಾಗೆ ವರ್ಗಾವಣೆ ರೇಟ್‌ ಫಿಕ್ಸ್‌ ಆಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ಮೋದಿ ಅವರು ಇದು 10 ಪರ್ಸೆಂಟ್‌ ಸರ್ಕಾರ ಅಂತ ಹೇಳಿದ್ದರು. ಈಗ ಇರುವುದು ಎಷ್ಟುಪರ್ಸೆಂಟ್‌ ಸರ್ಕಾರ ಅಂತಾ ಹೇಳಬೇಕು ಎಂದು ತಿರುಗೇಟು ನೀಡಿದರು.

ಭಾರತೀಯ ಜನತಾ ಪಕ್ಷದ ವಿದ್ಯಮಾನಗಳನ್ನು ನೋಡಿದರೆ ಈ ಸರ್ಕಾರ ಹೆಚ್ಚು ದಿನ ಇರುತ್ತದೆ ಎಂಬ ವಿಶ್ವಾಸ ನನಗಿಲ್ಲ ಎಂದ ಅವರು ನಮ್ಮವರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಕಳೆದ 11 ತಿಂಗಳಿನಿಂದ ವಯಸ್ಸಾದವರಿಗೆ ಪೆನ್ಷನ್‌ ಕೂಡ ಕೊಡುತ್ತಿಲ್ಲ ಎಂದರು.

ಬೈ ಎಲೆಕ್ಷನ್‌ ಮಧ್ಯೆ ಶರುವಾಯ್ತು ಗ್ರಾಮ ಪಂಚಾಯಿತಿ ಚುನಾವಣೆ ಗದ್ದಲ..! .

ಕಾಂಗ್ರೆಸ್‌ ಪಕ್ಷ ತಳಸಮುದಾಯ, ಶೋಷಿತ, ಅಲ್ಪಸಂಖ್ಯಾತ ಸಮುದಾಯಕ್ಕೆ ಬಲ ನೀಡಿದೆ. ಭಾರತೀಯ ಜನತಾ ಪಕ್ಷದ ಚರಿತ್ರೆ ನಿಮಗೆ ಗೊತ್ತಿದೆ. ತಳ ಸಮುದಾಯಗಳಿಗೆ ಬಿಜೆಪಿ ಯಾವಾಗ ಶಕ್ತಿ ತುಂಬಿದೆ ಹೇಳಿ ಎಂದು ಪ್ರಶ್ನಿಸಿದರು. ರಾಜಕೀಯವಾಗಿ ಕಾಡುಗೊಲ್ಲರಿಗೆ ಶಕ್ತಿಯನ್ನು ಇನ್ನು ಮುಂದೆ ನೀಡುತ್ತೇವೆ. ಮುಂದೆ ನಮ್ಮ ಜಿಲ್ಲೆಯಿಂದ ಕಾಡುಗೊಲ್ಲ ಸಮುದಾಯದ ಮುಖಂಡರು ಶಾಸಕರಾಗಬಹುದು ಎಂದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಪಡೆದದ್ದು 16300 ಮತಗಳನ್ನು. ಅದಾದ ಬಳಿಕ ಈಗ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡುತ್ತೇವೆಂದು ಬಂದಿದ್ದಾರೆ ಎಂದ ಅವರು ಒಂದು ವರ್ಷದಿಂದ ಬಿಜೆಪಿಯವರಿಗೆ ಇದು ನೆನಪಿಗೆ ಬರಲಿಲ್ಲವೇ ಎಂದು ವ್ಯಂಗ್ಯವಾಡಿದರು. ಯಾವ ಉದ್ದೇಶದಿಂದ ನಿಗಮ ಮಾಡಿದಿರಿ ಎಂದ ಅವರು ಒಂದು ರೂಪಾಯಿ ಹಣ ನೀಡದೆ ನಿಗಮ ಮಾಡಿದ್ದೀರ ಎಂದು ಛೇಡಿಸಿದರು.

ಕಳೆದ ಬಾರಿ ಜಯಚಂದ್ರ ಶಿರಾಕ್ಕೆ 2500 ಕೋಟಿ ಅನುದಾನ ತಂದಿದ್ದರು. ಅಷ್ಟೊಂದು ಕಾರ್ಯಕ್ರಮ ಮಾಡಿ ಜಯಚಂದ್ರ ಸೋತಿದ್ದಕ್ಕೆ ನಾವು ಅಚ್ಚರಿ ಪಟ್ಟಿದ್ದೆವು ಕೂಡ. ಈಗ ಶಿರಾದ ಜನತೆ ಮನಸು ಬದಲಾವಣೆ ಮಾಡಿಕೊಂಡಿದ್ದಾರೆ. ಜಯಚಂದ್ರ ನೂರಕ್ಕೆ ನೂರಷ್ಟುಗೆಲ್ಲುತ್ತಾರೆ. ಇದೇ ತಿಂಗಳ 15 ರಂದು ಜಯಚಂದ್ರ ನಾಮಪತ್ರ ಸಲ್ಲಿಸಲಿದ್ದು, ಆಗ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಬರುತ್ತಾರೆ ಎಂದರು.

ಸಿಬಿಐಗೆ ಕ್ಲಾರಿಫಿಕೇಷನ್‌ ನೀಡಿದ್ದೇನೆ: ಯೋಗೇಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನವರು ವಿಚಾರಣೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು ಇಲಾಖೆಯವರು ಅವರ ಕೆಲಸವನ್ನು ಮಾಡಿದ್ದಾರೆ. ವಿಚಾರಣೆ ಏನಿಲ್ಲ, ಅವರಿಗೆ ಕ್ಲಾರಿಫಿಕೇಷನ್‌ ಬೇಕಿತ್ತು ಅದನ್ನು ಕೇಳಿದರು ಅಷ್ಟೇ ಎಂದರು.

ಡಿಸಿಸಿ ಹಾಗೂ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಮಾತನಾಡಿ, ತುಮಕೂರು ಜಿಲ್ಲೆಯಿಂದ ಜಿ. ಪರಮೇಶ್ವರ್‌ ಹಾಗೂ ಟಿ.ಬಿ. ಜಯಚಂದ್ರ ಅವರಿಗೆ ಮಾತ್ರ ಮುಖ್ಯಮಂತ್ರಿಯಾಗುವ ಅರ್ಹತೆ ಇರುವುದು ಎಂದರು. ನಾವೆಲ್ಲಾ ಮುಖ್ಯಮಂತ್ರಿಯಾಗಲು ಆಗುತ್ತಾ ಎಂದ ಅವರು ಜಿ. ಪರಮೇಶ್ವರ್‌ ಮೃದು ಸ್ವಭಾವ ಅವರಿಗೆ ಡ್ಯಾಶಿಂಗ್‌ ನೇಚರ್‌ ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಜಯಚಂದ್ರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರನ್ನು ಜನತೆ ಈ ಬಾರಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಚುನಾವಣಾ ಗಿಮಿಕ್‌ಗಾಗಿ ಯಡಿಯೂರಪ್ಪ ಸರ್ಕಾರ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಿದೆ ಎಂದರು. ಕಾಡುಗೊಲ್ಲರಿಗೆ ರಾಜಕೀಯ ಪ್ರಾತಿನಿಧ್ಯ ಕಡಿಮೆ ಇದೆ ಎಂಬುದನ್ನು ಒಪ್ಪಿಕೊಂಡ ರಾಜಣ್ಣ ಕಾಡುಗೊಲ್ಲರನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು. ಜಯಚಂದ್ರ ಅವರ ಗೆಲುವು ನಮ್ಮೆಲ್ಲರ ಗೆಲುವು ಎಂದರು.