ಮೋಹನ ಹಂಡ್ರಂಗಿ

ಬೆಂಗಳೂರು [ಜು.30]:  ಪ್ರಯಾಣಿಕರ ಸುರಕ್ಷತೆ ಅದರಲ್ಲೂ ಮುಖ್ಯವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ಮಹಾನಗರ ಸಾರಿಗೆ ನಿಗಮವು (ಬಿಎಂಟಿಸಿ) ತನ್ನ ಒಂದು ಸಾವಿರ ಬಸ್‌ಗಳು ಹಾಗೂ ನಗರದ 38 ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ.

ನಗರದ ಮೆಜೆಸ್ಟಿಕ್‌, ಶಾಂತಿನಗರ, ವಿಜಯನಗರ, ಜಯನಗರ, ಯಶವಂತಪುರ ಸೇರಿದಂತೆ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ನಗರದ ಪ್ರಮುಖ 38 ಬಸ್‌ ನಿಲ್ದಾಣಗಳು ಹಾಗೂ ನಿಗಮದ ಒಂದು ಸಾವಿರ ಬಸ್‌ಗಳಲ್ಲಿ ಸಿಸಿಟಿವಿ ಅಳಡಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಪೂರೈಕೆ, ಅಳವಡಿಕೆ ಹಾಗೂ ನಿರ್ವಹಣೆ ಸಂಬಂಧ ಟೆಂಡರ್‌ ಆಹ್ವಾನಿಸಲಾಗಿದೆ ಎಂದು ಬಿಎಂಟಿಸಿ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕ ಡಾ.ಅನುಪಮ್‌ ಅಗರವಾಲ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿ 2018-19ನೇ ಸಾಲಿನಲ್ಲಿ ಬಿಎಂಟಿಸಿಗೆ .56 ಕೋಟಿ ಅನುದಾನ ದೊರೆತಿದೆ. ಈ ಅನುದಾನವನ್ನು ಮಹಿಳಾ ಪ್ರಯಾಣಿಕರ ಸುರಕ್ಷತೆ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಲು ಬಳಸಬೇಕು. ಈ ನಿಟ್ಟಿನಲ್ಲಿ ಪಿಂಕ್‌ ಸಾರಥಿ ವಾಹನ, ಮಹಿಳೆಯರಿಗೆ ಲಘು ಹಾಗೂ ಭಾರಿ ವಾಹನ ಚಾಲನಾ ತರಬೇತಿ, ಬಸ್‌ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿ ನಿರ್ಮಾಣ ಮೊದಲಾದ ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿದೆ. ಇದೀಗ ಬಸ್‌ಗಳು ಹಾಗೂ ಬಸ್‌ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೂ ನಿರ್ಭಯಾ ಯೋಜನೆಯ ಅನುದಾನ ಬಳಸಿಕೊಳ್ಳಲಾಗುತ್ತಿದೆ.

ಐದು ವರ್ಷ ನಿರ್ವಹಣೆ : ಬಿಎಂಟಿಸಿಯು ಸಿಸಿಟಿವಿ ಪೂರೈಕೆ, ಅಳವಡಿಕೆ ಹಾಗೂ ನಿರ್ವಹಣೆ ಸಂಬಂಧ ಕರೆದಿರುವ ಟೆಂಡರ್‌ನಲ್ಲಿ ಹಲವು ಷರತ್ತುಗಳನ್ನು ವಿಧಿಸಿದೆ. ಬಿಡ್‌ ಪಡೆದುಕೊಳ್ಳುವ ಕಂಪನಿ ಸಿಸಿಟಿವಿ ಕ್ಯಾಮೆರಾ ಪೂರೈಕೆ, ಅಳವಡಿಕೆ ಜತೆಗೆ ಐದು ವರ್ಷಗಳ ನಿರ್ವಹಣೆ ಮಾಡಬೇಕು. ಪ್ರತಿ ಬಸ್‌ಗೆ ಮೂರು ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಮೊಬೈಲ್‌ ಡಿಜಿಟೆಲ್‌ ವಿಡಿಯೋ ರೆಕಾರ್ಡರ್‌(ಎಂಡಿವಿಆರ್‌) ಇರಬೇಕು. 15 ದಿನಗಳ ಡಾಟಾ ಸ್ಟೋರೇಜ್‌ ಸಾಮರ್ಥ್ಯ, ವೈಫೈ ಮೂಲಕ ದತ್ತಾಂಶ ಟ್ರಾನ್ಸ್‌ಫರ್‌ ವ್ಯವಸ್ಥೆ, ಜಿಪಿಆರ್‌ಎಸ್‌ 3ಜಿ/4ಜಿ ಪ್ರೊವೈಡಿಂಗ್‌ ಸಿಮ್‌ ಕಾರ್ಡ್‌ ಮತ್ತು ರೆಕ್ಯೂರಿಂಗ್‌ ಚಾರ್ಜಸ್‌ ವ್ಯವಸ್ಥೆ ಇರಬೇಕು ಎಂದು ಷರತ್ತು ವಿಧಿಸಿದೆ.

ವಿಡಿಯೋ ಮ್ಯಾನೇಜ್‌ಮೆಂಟ್‌ ಸಾಫ್ಟ್‌ವೇರ್‌ನಲ್ಲಿ ವಿಡಿಯೋ ಮಾನಿಟರಿಂಗ್‌ ರಿಯಲ್‌ ಟೈಂ ಪೊಸಿಷನಿಂಗ್‌, ವಾಹನದ ಸಂಖ್ಯೆ ಆಧರಿಸಿ ವಿಡಿಯೋ ಟ್ರ್ಯಾಕಿಂಗ್‌ ಆ್ಯಂಡ್‌ ಪ್ಲೇ ಬ್ಯಾಕ್‌, ತುರ್ತು ಸಂದರ್ಭಗಳಲ್ಲಿ ವಿಡಿಯೋ ಡಿಸ್‌ಪ್ಲೇ ಲೈವ್‌ ಸ್ಟ್ರೀಮಿಂಗ್‌ ತಂತ್ರಜ್ಞಾನವೂ ಇರಬೇಕು ಎಂದು ಬಿಎಂಟಿಸಿ ಷರತ್ತುಗಳಲ್ಲಿ ಸೂಚಿಸಿದೆ.

ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ನಿಗಮದ ಒಂದು ಸಾವಿರ ಬಸ್‌ಗಳು ಹಾಗೂ 38 ಬಸ್‌ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಟೆಂಡರ್‌ ಆಹ್ವಾನಿಸಲಾಗಿದೆ. ಕೇಂದ್ರದ ನಿರ್ಭಯಾ ಯೋಜನೆಯ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ.

-ಡಾ.ಅನುಪಮ್‌ ಅಗರವಾಲ್‌, ನಿರ್ದೇಶಕ, ಬಿಎಂಟಿಸಿ ಭದ್ರತೆ ಮತ್ತು ಜಾಗೃತ ದಳ.