Asianet Suvarna News Asianet Suvarna News

ಜಾತಿ, ಧರ್ಮದ ಹೆಸರಿನಲ್ಲಿ ಮಕ್ಕಳನ್ನು ಕೆಲವರು ದಾರಿ ತಪ್ಪಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ವಸತಿ ಶಾಲೆಯ ಶಿಕ್ಷಕರು ಮಕ್ಕಳಲ್ಲಿ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಕೆಲವರು ದಾರಿ ತಪ್ಪಿಸುತ್ತಾರೆ. ಇಂತಹವರ ಬಗ್ಗೆ ಮಕ್ಕಳು ಹುಷಾರಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. 

Some are leading children astray in the name of caste and religion Says CM Siddaramaiah gvd
Author
First Published Jun 20, 2024, 5:10 PM IST | Last Updated Jun 20, 2024, 5:10 PM IST

ಬೆಂಗಳೂರು (ಜೂ.20): ವಸತಿ ಶಾಲೆಯ ಶಿಕ್ಷಕರು ಮಕ್ಕಳಲ್ಲಿ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಕೆಲವರು ದಾರಿ ತಪ್ಪಿಸುತ್ತಾರೆ. ಇಂತಹವರ ಬಗ್ಗೆ ಮಕ್ಕಳು ಹುಷಾರಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಶ್ರಯದಲ್ಲಿ ವಸಂತನಗರದ ಅಂಬೇಡ್ಕರ್‌ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುಸ್ಕಾರ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಶಿಕ್ಷಕರು ಕಂದಾಚಾರ, ಮೌಢ್ಯಗಳಿಂದ ಹೊರಬಂದು ಮಕ್ಕಳಿಗೆ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಕೆಲವರು ಸ್ವಾರ್ಥದ ವ್ಯಾಖ್ಯಾನ ಮಾಡಿ ದಾರಿ ತಪ್ಪಿಸುತ್ತಾರೆ. ಇಂತಹವರ ಬಗ್ಗೆ ಮಕ್ಕಳು ಹುಷಾರಾಗಿರಬೇಕು. ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ. ಎಂಬಿಬಿಎಸ್‌ ಅಭ್ಯಸಿಸಿದವರೂ ಇನ್ನೂ ಮೌಡ್ಯ ಬಿಟ್ಟಿಲ್ಲ. ಹಣೆಬರಹ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಚನ್ನಪಟ್ಟಣದಿಂದ ಸ್ಪರ್ಧಿಸ್ತಾರಾ ಡಿಕೆಶಿ?: ಇಬ್ಬರು ಸಿಎಂ ಆದ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ!

ಎಮ್ಮೆ ಕಾಯಬೇಕಾಗಿತ್ತು: ಬುದ್ದ, ಬಸವಣ್ಣನವರು ಶತಮಾನಗಳ ಹಿಂದೆಯೇ ಜಾತಿ ವ್ಯವಸ್ಥೆ ಅಳಿಸಲು ಶ್ರಮಿಸಿದರು. ಆದರೆ ಇನ್ನೂ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಜಾತಿ ವ್ಯವಸ್ಥೆಯಿಂದಾಗಿ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದ್ದು, ಇದನ್ನು ಹೋಗಲಾಡಿಸಬೇಕಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮಾನತೆ ಉಂಟಾದರೆ ಜಾತಿ ವ್ಯವಸ್ಥೆ ನಾಶವಾಗುತ್ತದೆ. ಶಿಕ್ಷಣದಿಂದಲೇ ನನಗೆ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು. ಇಲ್ಲದಿದ್ದರೆ ನಾನೂ ಎಮ್ಮೆ, ಹಸು ಮೇಯಿಸುತ್ತಾ ಅಷ್ಟಕ್ಕೇ ಸೀಮಿತ ಆಗಬೇಕಾಗಿತ್ತು ಎಂದು ವಿವರಿಸಿದರು.

ದಲಿತ ಸಂಘರ್ಷ ಸಮಿತಿಯು ‘ನಮಗೆ ಸರಾಯಿ ಅಂಗಡಿ ಬೇಡ-ವಸತಿ ಶಾಲೆ ಬೇಕು’ ಎಂದು ನಡೆಸಿದ ಹೋರಾಟದಿಂದ ಪ್ರೇರಿತನಾಗಿ ನಾನು ಮೊದಲ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಮೊರಾರ್ಜಿ ಶಾಲೆಗಳನ್ನು ಆರಂಭಿಸಿದೆ. ಈಗ ಸಮಾಜ ಕಲ್ಯಾಣ ಇಲಾಖೆ ಅಡಿ 833 ವಸತಿ ಶಾಲೆಗಳಿವೆ. ಅಲ್ಪಸಂಖ್ಯಾತ ಇಲಾಖೆಯವೂ ಸೇರಿ ಒಟ್ಟು 946 ವಸತಿ ಶಾಲೆಗಳಿವೆ ಎಂದು ಅಂಕಿ ಅಂಶ ನೀಡಿದರು.ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಬಾಗಲಕೋಟೆಯ ಅಂಕಿತ ಬಸಪ್ಪ ಕೊನ್ನೂರು ಅವರಿಗೆ ಸಿದ್ದರಾಮಯ್ಯ ಅವರು ಸನ್ಮಾನಿಸಿ ₹5 ಲಕ್ಷ ಬಹುಮಾನ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಹಲವು ವಿದ್ಯಾರ್ಥಿಗಳು, ವಸತಿ ಶಾಲೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ, ಶಾಸಕರಾದ ರಿಜ್ವಾನ್‌ ಹರ್ಷದ್‌, ಸುದಾಮ ದಾಸ್‌ ಮತ್ತಿತರರು ಹಾಜರಿದ್ದರು.

ಪ್ರತಿ ಹೋಬಳಿಯಲ್ಲೂ ವಸತಿ ಶಾಲೆ ಸ್ಥಾಪನೆ: ಕೆಲವು ಹೋಬಳಿಯಲ್ಲಿ ಒಂದಕ್ಕಿಂತ ಹೆಚ್ಚು ವಸತಿ ಶಾಲೆಗಳಿವೆ. ಆದರೆ ಕೆಲವು ಹೋಬಳಿಗಳಲ್ಲಿ ಶಾಲೆಯೇ ಇಲ್ಲ. ಆದ್ದರಿಂದ ಶಾಲೆಗಳಿಲ್ಲದ ಕಡೆ ಪ್ರಸಕ್ತ ಸಾಲಿನಲ್ಲಿ 20 ವಸತಿ ಶಾಲೆ ಆರಂಭಿಸಲಾಗುವುದು. ಹೋಬಳಿಗೊಂದು ವಸತಿ ಶಾಲೆ ಆರಂಭಿಸುವುದು ಸರ್ಕಾರದ ಗುರಿಯಾಗಿದೆ. ಸರ್ಕಾರಿ ವಸತಿ ಶಾಲೆಗಳ ಮಕ್ಕಳು ಈ ಬಾರಿ ಶೇಕಡ 96 ರಷ್ಟು ಫಲಿತಾಂಶ ಪಡೆದಿದ್ದು, ಮುಂದಿನ ಬಾರಿ ಶೇ.100 ರಷ್ಟು ಅಂಕ ಪಡೆಯಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಕೇಂದ್ರ ಸರ್ಕಾರ ತಕ್ಷಣ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಬೇಕು: ಸಿಎಂ ಸಿದ್ದರಾಮಯ್ಯ ಒತ್ತಾಯ

ಸಿದ್ದರಾಮಯ್ಯ ಹಿಡಿದ ಕೆಲಸಮಾಡದೇ ಬಿಡಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನಾದರೂ ಕೆಲಸ ಮಾಡಬೇಕು ಎಂದುಕೊಂಡರೆ ಹರಿಬ್ರಹ್ಮ ಬಂದರೂ ಅದನ್ನು ಮಾಡದೇ ಬಿಡುವುದಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ಎಷ್ಟೇ ಅಡ್ಡಿ ಉಂಟಾದರೂ ಅಂದುಕೊಂಡಿದ್ದನ್ನು ಸಾಧಿಸದೇ ಬಿಡುವುದಿಲ್ಲ. ಸಿದ್ದರಾಮಯ್ಯನವರು ಬಸವಣ್ಣನವರ ತತ್ವ ಪಾಲಿಸುತ್ತಿದ್ದು, ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಲು ಕ್ರಮ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios