ಕೊರೋನಾ ಭೀತಿಯಿಂದ ಅವಾಂತರ: ತಾಯಿ ಅಂತ್ಯಕ್ರಿಯೆಗೆ ಪರದಾಡಿದ ಯೋಧ
ಕೊರೋನಾ ಭೀತಿ: ಶವಸಂಸ್ಕಾರಕ್ಕೆ ಸ್ಥಳೀಯರ ವಿರೋಧ| ಶವ ಪರೀಕ್ಷೆ ನಡೆಸದ ವೈದ್ಯರು: ಶವ ಪಡೆಯಲು ಕುಟುಂಬಸ್ಥರ ಗೋಳಾಟ| ಶವ ಪಡೆಯಲಾಗದೆ ಕುಟುಂಬಸ್ಥರ ಗೋಳಾಟ|
ಮಂಡ್ಯ(ಜು.09): ಸಾಲಬಾಧೆಗೆ ಬೇಸತ್ತು ವಿಷಸೇವಿಸಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬನ ಶವಪರೀಕ್ಷೆ ನಡೆಸದೆ ಮಿಮ್ಸ್ ವೈದ್ಯರು ಹಾಗೂ ಸಿಬ್ಬಂದಿ ಕೊರೋನಾ ನೆಪವೊಡ್ಡಿ ವಿಳಂಬ ಮಾಡುತ್ತಿರುವುದಕ್ಕೆ ಕುಟುಂಬದವರು ಗೋಳಾಡುವಂತಾಗಿದೆ.
ಜು.26ರಂದು ವಿಷ ಸೇವಿಸಿದ್ದ ನಗರದ ನಾರಾಯಣರಾವ್(51) ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ವೈದ್ಯರಿಲ್ಲ, ಕೊರೊನಾ ಎಂಬಿತ್ಯಾದಿ ನೆಪವೊಡ್ಡಿ ಶವಪರೀಕ್ಷೆಗೆ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಕಳೆದೆರಡು ದಿನಗಳಿಂದ ಕುಟುಂಬಸ್ಥರು ಶವಾಗಾರದ ಮುಂದೆ ಶವ ಹಸ್ತಾಂತರಕ್ಕಾಗಿ ಕಾಯುತ್ತಿದ್ದಾರೆ. ಶವಾಗಾರದ ಪಕ್ಕದಲ್ಲೇ ಕೋವಿಡ್-19 ಸೋಂಕಿತರನ್ನು ಕರೆತಂದು ಚಿಕಿತ್ಸೆ ನೀಡಲಾಗುತ್ತಿದ್ದು, ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.
ಜಾಗ್ರತೆ ವಹಿಸಿ..! ಕೊರೊನಾ ಮಧ್ಯೆ ಸಾಂಕ್ರಾಮಿಕ ರೋಗಗಳ ಭೀತಿ ಶುರು
ಕೋವಿಡ್ ಟೆಸ್ಟ್‌ಗೆ ಗ್ರಾಮಸ್ಥರ ಒತ್ತಾಯ
ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವಸಂಸ್ಕಾರಕ್ಕೆ ಮೊದಲು ಕೋವಿಡ್-19 ಪರೀಕ್ಷೆ ನಡೆಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲೂಕಿನ ಮುಸಕನಕೊಪ್ಪಲು ಗ್ರಾಮದಲ್ಲಿ ಬುಧವಾರ ನಡೆದಿದೆ.
ಟಿ.ನರಸೀಪುರ ತಾಲೂಕಿನ ಮುಸಕನಕೊಪ್ಪಲು ನಿವಾಸಿ ನಾಗರಾಜು(50) ಹೊನಗನಹಳ್ಳಿಯ ಮಾವನ ಮನೆಗೆ ಬಂದಿದ್ದರು. ಬುಧವಾರ ಬೆಳಗಿನ ಜಾವ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅವರ ಶವಸಂಸ್ಕಾರಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಕೋವಿಡ್ ಪರೀಕ್ಷೆ ನಡೆಸುವಂತೆ ಪಟ್ಟುಹಿಡಿದಿದ್ದರು. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಕುಟುಂಬಸ್ಥರು ಪಿಪಿಇ ಕಿಟ್ ಧರಿಸಿ ಮೃತರ ಸ್ವಗ್ರಾಮ ಟಿ.ನರಸೀಪುರ ತಾಲೂಕಿನ ಮುಸಕನಕೊಪ್ಪಲುಗೆ ಶವವನ್ನು ಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋದರು.
ತಾಯಿ ಅಂತ್ಯಕ್ರಿಯೆಗೆ ಪರದಾಡಿದ ಯೋಧ
ಕೋವಿಡ್-19 ಸೋಂಕಿನ ಅನುಮಾನದಿಂದ ಸ್ಥಳೀಯರು ವಿರೋಧಿಸಿದ ಕಾರಣ ಮೃತಪಟ್ಟತಾಯಿ ಅಂತ್ಯಸಂಸ್ಕಾರಕ್ಕೂ ಯೋಧನೊಬ್ಬ ಪರದಾಡಿ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಸುಮಿತ್ ಕುಮಾರ ಸೆಹೆಗಲ್ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ತಾಯಿ ಅನಿತಾದೇವಿ ಕಿಡ್ನಿ ವೈಫಲ್ಯದಿಂದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ, ಕೋವಿಡ್-19 ಸೋಂಕಿನಿಂದಾಗಿ ತಮ್ಮ ಊರಿಗೆ ತೆಗೆದುಕೊಂಡು ಹೋಗುವುದು ಕಷ್ಟಎಂದು ಇಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ಯೋಧ ನಿರ್ಧರಿಸಿದ್ದರು.
ಸ್ಥಳೀಯ ಚೆಂಡಿಯಾ ಗ್ರಾಪಂನಿಂದ ಅಂತ್ಯಸಂಸ್ಕಾರಕ್ಕೆ ಅನುಮತಿ ಪಡೆದಿದ್ದರು. ಆದರೆ ಕೋವಿಡ್-19 ಸೋಂಕಿನ ಆತಂಕ ಇರುವುದರಿಂದ ತಮ್ಮೂರಿನ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಬಾರದು ಎಂದು ಅರಗಾ, ಚೆಂಡಿಯಾದ ಗ್ರಾಮಸ್ಥರು ವಿರೋಧಿಸಿದರು. ಕೋವಿಡ್-19 ಸೋಂಕಿನ ಪರೀಕ್ಷೆ ಮಾಡಿಸಲಾಗಿದೆ. ಸೋಂಕು ಇಲ್ಲ ಎಂದು ಸುಮಿತ್ ಹೇಳಿದರೂ ಸ್ಥಳೀಯರು ಒಪ್ಪಿಗೆ ನೀಡಿಲ್ಲ. ನಂತರ ತಾಲೂಕಾಡಳಿತ, ಪೊಲೀಸರು ನಗರದ ಸರ್ವೋದಯ ನಗರದ ಬಳಿಯ ಸ್ಮಶಾನದಲ್ಲಿ ಸ್ಥಳೀಯರ ಸಹಕಾರ ಪಡೆದು ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸಿದರು.