ಬೆಂಗಳೂರು [ಅ.03]:  ಗುಜರಿಗೆ ಹಾಕಿದ್ದ ಕಾರುಗಳ ಚಾಸಿಯನ್ನು ಕದ್ದ ಕಾರುಗಳಿಗೆ ಹಾಕಿ ಮಾರಾಟ ಮಾಡುತ್ತಿದ್ದ ಜಾಲವೊಂದು ಬಾಗಲಗುಂಟೆ ಪೊಲೀಸರ ಬಲೆಗೆ ಬಿದ್ದಿದೆ.

ಕೇರಳ ಮೂಲದ ದಿಲೀಶ್‌ (38 ), ಶಾಜಿ ಕೇಶವನ್‌ ( 47), ಮಂಗಳೂರು ಮೂಲದ ಅಲಿ ಅಹಮ್ಮದ್‌ (39) ಬಂಧಿತರು. ಆರೋಪಿಗಳಿಂದ .40 ಲಕ್ಷ ಮೌಲ್ಯದ 9 ಕಾರು ಜಪ್ತಿ ಮಾಡಲಾಗಿದೆ.

ಅಲಿ ಅಹಮ್ಮದ್‌ ಮಂಗಳೂರಿನ ಸುರತ್ಕಲ್‌ನಲ್ಲಿ ಕಾರು ಗ್ಯಾರೇಜ್‌ ಇಟ್ಟುಕೊಂಡಿದ್ದಾನೆ. ದಿಲೀಶ್‌ ಮತ್ತು ಶಾಜಿ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕದ್ದ ಕಾರುಗಳನ್ನು ಮಾರಿ ಬಂದ ಹಣದಲ್ಲಿ ಮೋಜು ಮಾಡುತ್ತಿದ್ದರು. ಅಲಿ ಅಹಮ್ಮದ್‌ ಕೂಡ ಮೂಲತಃ ಕೇರಳದವನೇ ಆಗಿದ್ದು, ಹಲವು ವರ್ಷಗಳ ಹಿಂದೆಯೇ ಸುರತ್ಕಲ್‌ಗೆ ಬಂದು ನೆಲೆಸಿದ್ದ.

ಮೂವರು ಆರೋಪಿಗಳು ಹಳೆಯ ಕಾರುಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದರು. ಅಲಿ ಅಹಮ್ಮದ್‌ ಗುಜರಿ ಮತ್ತು ಅಪಘಾತವಾದ ಕಾರುಗಳನ್ನು ಖರೀದಿ ಮಾಡುತ್ತಿದ್ದ. ಅದೇ ಮಾಡೆಲ್‌ನ ಗಾಡಿಯನ್ನು ಕಳವು ಮಾಡುವಂತೆ ದಿಲೀಶ್‌ ಮತ್ತು ಶಾಜಿಗೆ ಸೂಚಿಸುತ್ತಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಗರಕ್ಕೆ ಬರುತ್ತಿದ್ದ ದಿಲೀಶ್‌ ಮತ್ತು ಶಾಜಿ ಹಗಲು ವೇಳೆ ಹಲವು ಕಡೆ ಸುತ್ತಾಡಿ ಹಳೆಯ ವಾಹನವನ್ನು ಪತ್ತೆ ಮಾಡಿ ರಾತ್ರಿ ವೇಳೆ ಕಾರು ಕಳವು ಮಾಡಿ ಪರಾರಿಯಾಗುತ್ತಿದ್ದರು. ಕದ್ದ ಕಾರನ್ನು ಮಂಗಳೂರಿನ ಸುರತ್ಕಲ್‌ ತೆಗೆದುಕೊಂಡು ಹೋಗಿ ಅಲಿ ಅಹಮ್ಮದ್‌ಗೆ ನೀಡುತ್ತಿದ್ದರು. ನಂತರ ಅಲಿ ಗ್ಯಾರೇಜ್‌ನಲ್ಲಿ ಗುಜರಿ ಸೇರಿದ್ದ ವಾಹನಗಳ ಚಾಸಿಯನ್ನು ಕದ್ದ ವಾಹನಗಳಿಗೆ ಹಾಕಿ, ದಾಖಲೆ ಸೃಷ್ಟಿಸಿ ಐದಾರು ಲಕ್ಷಕ್ಕೆ ಮಾರಾಟ ಮಾಡುತ್ತಿದ್ದ. ಒಂದು ಕಾರಿಗೆ ತಲಾ .80 ಸಾವಿರವನ್ನು ಅಲಿ ಇಬ್ಬರಿಗೂ ನೀಡುತ್ತಿದ್ದ. ಒಂದು ಕಾರು ಕದ್ದ ಬಳಿಕ ಒಂದು ತಿಂಗಳು ಆರೋಪಿಗಳು ಬೆಂಗಳೂರಿಗೆ ಬರುತ್ತಿರಲಿಲ್ಲ.

ಹಳೆಯ ಕಾರುಗಳ ಕೀಯನ್ನು ಸುಲಭವಾಗಿ ತೆಗೆಯಲು .35 ಸಾವಿರಕ್ಕೆ ಕೀ ಪ್ರೊಗ್ರಾಮರ್‌ ಖರೀದಿ ಮಾಡಿದ್ದರು. ಈ ಕೀ ಪ್ರೊಗ್ರಾಮರ್‌ ಬಳಸಿ ಕಳವು ಮಾಡುತ್ತಿದ್ದರು. ಅಲ್ಲದೆ, ಟೋಲ್‌ ಹಾಗೂ ಹೆದ್ದಾರಿಗಳಲ್ಲಿ ಹೋದರೆ ಸಿಸಿಟಿವಿಗಳನ್ನು ಸೆರೆಯಾಗುತ್ತದೆ ಎಂಬ ಕಾರಣಕ್ಕೆ ಆರೋಪಿಗಳು ಅಡ್ಡದಾರಿಯಲ್ಲಿ ಸುರತ್ಕಲ್‌ ತಲುಪುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಜೈಲು ಸೇರಿದ್ದ ಆರೋಪಿಗಳು: 2011ರಲ್ಲಿ ದಿಲೀಶ್‌ ಮತ್ತು ಶಾಜಿ ಕಾರು ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ಜೈಲಿಗೆ ಹೋಗಿ ಬಂದರೂ ಆರೋಪಿಗಳ ಬದಲಾಗಿರಲಿಲ್ಲ. ಕಳೆದ ಫೆಬ್ರವರಿಯಲ್ಲಿ ಕದ್ದ ಕಾರು ಪಡೆದ ಪ್ರಕರಣದಲ್ಲಿ ಸೋಲದೇವನಹಳ್ಳಿ ಪೊಲೀಸರು ಅಲಿ ಅಹಮ್ಮದ್‌ನನ್ನು ಬಂಧಿಸಿದ್ದರು. ಈ ವೇಳೆ ಶಾಜಿ ಹೆಸರನ್ನು ಆರೋಪಿ ಬಾಯ್ಬಿಟ್ಟಿದ್ದ. ಆದರೆ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಗಳು ಕಳ್ಳತನ ಮಾಡಿ ಮತ್ತೆ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸರು ವಿವರಿಸಿದರು.

ಕಾರು ಕಳ್ಳತನಕ್ಕೆ ಕದ್ದ ಕಾರನ್ನೇ ತಂದು ಸಿಕ್ಕಿಬಿದ್ದರು!

ಆರೋಪಿಗಳು ಬಾಗಲಗುಂಟೆಯಲ್ಲಿ ಆ.28ರಂದು ರವಿಕುಮಾರ್‌ ಎಂಬುವವರು ಮನೆ ಮುಂದೆ ನಿಲ್ಲಿಸಿದ್ದ ಮಾರುತಿ-800 ಕಾರು ಕದೊಯ್ದಿದ್ದರು. ಮನೆ ಬಳಿಯ ಸಿಸಿಟಿವಿಯಲ್ಲಿ ಆರೋಪಿಗಳ ಕೃತ್ಯ ಬಯಲಾಗಿತ್ತು. ಈ ಕಾರು ಕಳವು ಮಾಡಲು ಬಂದಿದ್ದ ಆರೋಪಿಗಳು ಕಳವು ಮಾಡಿದ್ದ ಮತ್ತೊಂದು ಕಾರನ್ನು ತಂದಿದ್ದರು. ಈ ಕಾರಿನ ಸಂಖ್ಯೆ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಾರಿನ ಸಂಖ್ಯೆ ಆಧಾರಿಸಿ ತನಿಖೆ ನಡೆಸಿದಾಗ ಆರೋಪಿಗಳು ಬಲೆಗೆ ಬಿದ್ದರು.

ಯೂ ಟ್ಯೂಬ್‌ ನೋಡಿ ಕೃತ್ಯ!

ಆರೋಪಿ ದಿಲೀಶ್‌ ಯೂ ಟ್ಯೂಬ್‌ನಲ್ಲಿ ಕೀ ಆಪರೇಟಿಂಗ್‌ ಪ್ರೋಗ್ರಾಮ್‌ ವಿಡಿಯೋದ ಮೂಲಕ ನಕಲಿ ಕೀ ಬಳಸಿ ಕಾರನ್ನು ಕಳ್ಳತನ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಂಡಿದ್ದ. ಇದರಲ್ಲಿ ಬರುವ ಮಾಹಿತಿಯಂತೆ ಕಾರಿನ ಚಾಲಕನ ಸೀಟಿನ ಪಕ್ಕದಲ್ಲಿರುವ ಕಿಟಕಿಯ ಗ್ಲಾಸನ್ನು ಒಡೆದು ನಕಲಿ ಕೀ ಬಳಸಿ ಕಾರು ಕಳ್ಳತನ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದರು.