ಬೆಂಗಳೂರು(ಜ.18): ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಬ್ಬನ್‌ ಉದ್ಯಾನದಲ್ಲಿ ಪಾದಚಾರಿ ಮಾರ್ಗ ಮತ್ತು ಜಾಗಿಂಗ್‌ ಪಥಗಳ ನವೀಕರಣ ಕಾಮಗಾರಿ ಆರಂಭವಾಗಿದೆ.

ಕಬ್ಬನ್‌ ಉದ್ಯಾನದ ಅಭಿವೃದ್ಧಿಗಾಗಿ ಎರಡು ಹಂತಗಳಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಮೊದಲ ಹಂತದಲ್ಲಿ 17 ಕೋಟಿ ರು.ವೆಚ್ಚದ ಕಾಮಗಾರಿಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊದಲ ಹಂತದಲ್ಲಿ ವಾಯುವಿಹಾರಿಗಳಿಗಾಗಿ ಪಾದಚಾರಿ ಮಾರ್ಗ, ಜಾಗಿಂಗ್‌ ಪಥಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಜೊತೆಗೆ, ಉದ್ಯಾನದಲ್ಲಿ ಖಾಲಿಯಿರುವ ಭಾಗಗಳಲ್ಲಿ ವಿವಿಧ ಆಕರ್ಷಕ ಗಿಡಗಳನ್ನು ನೆಟ್ಟು ಹಸಿರುಕರಣ ಮಾಡಲಾಗುತ್ತಿದ್ದು, ವರ್ಷಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿವರಿಸಿದ್ದಾರೆ.

ಕಬ್ಬನ್‌ ಪಾರ್ಕ್ ಒಳಗೆ ವಾಹನ ಸಂಚಾರ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕಾಮಗಾರಿಗಳ ವಿವರ:

ಉದ್ಯಾನದಲ್ಲಿ ಸದ್ಯ 4 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳ ಕಾಮಗಾರಿ ಆರಂಭಿಸಲಾಗಿದೆ. ಜೊತೆಗೆ ತ್ಯಾಜ್ಯ ಮತ್ತು ಪಾಚಿ ತುಂಬಿಕೊಂಡಿದ್ದ ತಾವರೆಕೊಳದ (ಲೋಟಸ್‌ ಪಾಂಡ್‌) ನವೀಕರಣ ಕಾರ್ಯವನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಹಲವು ಕಾಮಗಾರಿಗಳು ನಡೆಯುತ್ತಿವೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ(ಕಬ್ಬನ್‌ಪಾರ್ಕ್) ಜೆ.ಗುಣವಂತ ತಿಳಿಸಿದರು.

ಕಳೆದ ಮಾರ್ಚ್‌ನಲ್ಲೇ ಕಾಮಗಾರಿಗಳು ಆರಂಭವಾಗಿದ್ದವು. ಈ ವೇಳೆಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಮೊದಲ ಹಂತದ ಕಾಮಗಾರಿಗಳು ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ಉದ್ಯಾನವನ್ನು ಮತ್ತಷ್ಟುಸುಂದರಗೊಳಿಸಲು ಸಾರ್ವಜನಿಕರು, ಪಾದಚಾರಿಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಹಲವು ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ. ಜನಸ್ನೇಹಿ ಕಾಮಗಾರಿಗಳನ್ನು ನಡೆಸುವ ಉದ್ದೇಶದಿಂದ ಅವರಿಂದಲೇ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದರು.

2 ಹಂತದಲ್ಲಿ ಕಾಮಗಾರಿ

ಕಬ್ಬನ್‌ ಉದ್ಯಾನದ ಕಾಮಗಾರಿಗಳನ್ನು ಎ ಮತ್ತು ಬಿ ಎಂಬುದಾಗಿ ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಕಬ್ಬನ್‌ ಉದ್ಯಾನದ ರಕ್ಷಣೆ. ಜೊತೆಗೆ 4 ಕಿ.ಮೀ. ಉದ್ದದ ಫುಟ್‌ಪಾತ್‌ಗಳ ಮರು ಅಭಿವೃದ್ಧಿ, ಹಾಳಾದ ಕಲ್ಲುಗಳನ್ನು ತೆಗೆದು ಹಾಕುವುದು, ನಾಲ್ಕು ಕಿ.ಮೀ.ನಷ್ಟುಜಾಗಿಂಗ್‌ ಪಥವನ್ನು ಅಭಿವೃದ್ಧಿ ಪಡಿಸುವುದು, ಲೋಟಸ್‌ ಪಾಂಡ್‌ನ ಆಧುನೀಕರಿಸುವ ಕಾಮಗಾರಿಗಳನ್ನು ಪಟ್ಟಿಮಾಡಲಾಗಿದೆ. ಇದಕ್ಕೆ 17.55 ಕೋಟಿ ರು. ಅನುದಾನ ಮೀಸಲಿಡಲಾಗಿದೆ ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡನೇ ಹಂತದಲ್ಲಿ ‘ಕರಗ’ದ ಕುಂಟೆ ಅಭಿವೃದ್ಧಿ, ಮಕ್ಕಳ ಆಟದ ಉದ್ಯಾನ, ಉದ್ಯಾನದ ಆಯ್ದ ಸ್ಥಳಗಳಲ್ಲಿ ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ, ಆಯುರ್ವೇದ ಗಾರ್ಡನ್‌ ನಿರ್ಮಿಸುವುದು, ಡಸ್ಟ್‌ ಬಿನ್‌ಗಳನ್ನು ಅಳವಡಿಸುವುದು, ಸೈಕಲ್‌ ಸ್ಟ್ಯಾಂಡ್‌ ನಿರ್ಮಿಸ ಕೆಲಸಗಳನ್ನು ನಡೆಸಲು 17.80 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದಿದ್ದಾರೆ.