ಉಡುಪಿ (ಸೆ.25):  ಕೋಟ ಶಿವರಾಮ ಕಾರಂತರು ಹುಟ್ಟಿದ ಕೋಟತಟ್ಟು ಪಂಚಾಯತ್‌ ಹಾಗೂ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ನೀಡುವ 2020ನೇ ಸಾಲಿನ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತ ಡಾ. ಎಸ್‌.ಎಲ್ ಭೈರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಕಾರಂತರ ಜನ್ಮದಿನ ಅ.10 ರಂದು ಕೋಟದ ಕಾರಂತ ಥೀಮ್‌ ಪಾರ್ಕ್ನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೋಟತಟ್ಟು ಗ್ರಾ.ಪಂ. ಆಡಳಿತಾಧಿಕಾರಿ ಡಾ. ಅರುಣ್‌ ಕುಮಾರ್‌ ಶೆಟ್ಟಿಹಾಗೂ ಆಯ್ಕೆ ಸಮಿತಿ ಸದಸ್ಯ ಯು.ಎಸ್‌. ಶೆಣೈ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತ ಅವರ ಹೆಸರಿನಲ್ಲಿ ಗ್ರಾಮ ಪಂಚಾಯತ್‌ ಒಂದು ವಿವಿಧ ಕ್ಷೇತ್ರಗಳ ಸಾಧಕರಿಗೆ ರಜತ ಪ್ರಶಸ್ತಿಯನ್ನು ನೀಡುತ್ತಿರುವುದು ಇಡೀ ದೇಶದಲ್ಲಿ ಪ್ರಥಮ. ಕಳೆದ 15 ವರ್ಷಗಳಿಂದ ಅಂದರೆ 2005ರಿಂದ ವೀರಪ್ಪ ಮೊಯ್ಲಿ, ನ್ಯಾ. ವೆಂಕಟಾಚಲಯ್ಯ, ಬಿ.ಜಯಶ್ರೀ, ಗಿರೀಶ್‌ ಕಾಸರವಳ್ಳಿ, ರವಿ ಬೆಳಗೆರೆ, ಡಾ. ಮೋಹನ್‌ ಆಳ್ವ, ಸಾಲುಮರದ ತಿಮ್ಮಕ್ಕ ಸಹಿತ 15 ಮಂದಿ ಸಾಧಕರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಈ ಬಾರಿ ಕಾರಂತ ಜನ್ಮ ದಿನೋತ್ಸವದ ಅಂಗವಾಗಿ ಆನ್ಲೈನ್‌ ಸಾಂಸ್ಕೃತಿಕ-ಸಾಹಿತ್ಯಿಕ ಸುಗ್ಗಿ ಆಲ್ಮೋರ -2020 ನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷ-ಗಾನ-ನೃತ್ಯ ವೈಭವದಂತಹ ಕಾರ್ಯಕ್ರಮಗಳನ್ನು ಕೋವಿಡ್‌ ಮುಂಜಾಗ್ರತಾ ಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೋಟ ಕಾರಂತ ಪ್ರತಿಷ್ಠಾನದ ಟ್ರಸ್ಟಿಸುಬ್ರಾಯ ಆಚಾರ್ಯ, ಕೋಟತಟ್ಟು ಪಂಚಾಯತ್‌ ಪಿಡಿಒ ಶೈಲಾ ಎಸ್‌. ಪೂಜಾರಿ, ಕೋಟ ಕಾರಂತ ಥೀಮ್‌ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್‌ ಉಪಸ್ಥಿತರಿದ್ದರು.