Asianet Suvarna News Asianet Suvarna News

ಬೆಂಗ್ಳೂರಿಗೆ ‘ಸ್ಕೈ, ಟ್ರಾಲಿ ಬಸ್‌’ ಸೇವೆ: ಕೇಂದ್ರ ಸಚಿವ ಗಡ್ಕರಿ

ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡುವ ಸೌಲಭ್ಯವಿರುವ ಟ್ರಾಲಿ ಬಸ್‌ ಬಳಕೆಗೂ ಆಲೋಚನೆ: ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ 

Sky Trolley Bus Service to Bengaluru Says Union Minister Nitin Gadkari grg
Author
First Published Sep 10, 2022, 5:44 AM IST

ಬೆಂಗಳೂರು(ಸೆ.10):  ನಗರದ ಸಂಚಾರಿ ದಟ್ಟಣೆ ಸಮಸ್ಯೆಯ ಪರಿಹಾರಕ್ಕೆ ಸಾರ್ವಜನಿಕ ಸಾರಿಗೆ ಬಲಪಡಿಸಲು ನಿರ್ಧರಿಸಿದ್ದು, ಸ್ಕೈಬಸ್‌, ಟ್ರಾಲಿ ಬಸ್‌ ಆರಂಭ ಮತ್ತು ಬಹು ಅಂತಸ್ತು ಸಾರಿಗೆ ಕಾರಿಡಾರ್‌ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಮೂರು ದಿನಗಳ ಮಂಥನ್‌ ರಾಷ್ಟ್ರೀಯ ಸಮ್ಮೇಳನ ಸಮಾರೋಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ ಒಳಭಾಗದಲ್ಲಿನ ರಸ್ತೆಗಳ ವಿಸ್ತೀರ್ಣ ಹೆಚ್ಚಿಸುವುದಕ್ಕೆ, ಹೊಸ ಕಾರಿಡಾರ್‌ ನಿರ್ಮಿಸುವುದಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತವೆ. ಖಾಸಗಿ ವಾಹನ ದಟ್ಟಣೆಯನ್ನು ತಗ್ಗಿಸಲು ಸದ್ಯ ಇರುವ ಸಾರಿಗೆ ವ್ಯವಸ್ಥೆ ಬಲಪಡಿಸುವ ಜತೆಗೆ ಸುಸಜ್ಜಿತ, ಆಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಪಡಿಸಬೇಕು. ಈ ನಿಟ್ಟಿನಲ್ಲಿ ಸ್ಕೈಬಸ್‌, ಟ್ರಾಲಿ ಬಸ್‌ಗಳ ಸೇವೆಯನ್ನು ಆರಂಭಿಸಲು ಮುಖ್ಯಮಂತ್ರಿಗಳೊಂದಿಗೆ ಚಿಂತನೆ ನಡೆಸಲಾಗಿದೆ ಎಂದರು.

ಮೂರು ತಿಂಗಳಲ್ಲಿ ವರದಿ:

ಸ್ಕೈಬಸ್‌ಗಳು ಮೆಟ್ರೋ ಪ್ಲೈ ಓವರ್‌ಗಳನ್ನು ಬಳಸಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನರನ್ನು ತಲುಪಿಸುತ್ತವೆ. ಮೆಟ್ರೋ ಮೇಲ್ಸೇತುವೆಯ ಕೆಳ ಭಾಗದಲ್ಲಿ ಜೋತು ಬಿದ್ದಂತೆ ಸಂಚರಿಸುವ ಈ ಸ್ಕೈಬಸ್‌ ಸೇವೆಯನ್ನು ವಾರಣಾಸಿ ಸೇರಿ ಹಲವು ನಗರಗಳಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಈ ಸಾರಿಗೆ ಸಾಧ್ಯವೇ ಎಂಬ ಬಗ್ಗೆ ಅಧ್ಯಯನ ನಡೆಸಲು ಚಿಂತಿಸಲಾಗಿದೆ.

ನಿತಿನ್ ಗಡ್ಕರಿ-ಬೊಮ್ಮಾಯಿ ಸಭೆ: ಬೆಂಗಳೂರಿನ ರಸ್ತೆ, ಟ್ರಾಫಿಕ್ ಬಗ್ಗೆ ಮಹತ್ವದ ಚರ್ಚೆ

ವಿಶ್ವದಲ್ಲಿ ಆಸ್ಟ್ರಿಯಾ ಮತ್ತು ಫ್ರಾನ್ಸ್‌ನ ಎರಡು ಕಂಪನಿಗಳು ಮಾತ್ರ ಸ್ಕೈಬಸ್‌ ಸೇವೆ ನೀಡುತ್ತಿದ್ದು, ಆ ಸಂಸ್ಥೆಗಳ ತಂಡವು ಬೆಂಗಳೂರಿಗೆ ಆಗಮಿಸಿ ಸ್ಕೈಬಸ್‌ ಓಡಾಟಕ್ಕೆ ಪೂರಕ ವಾತಾವರಣ ಇದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಿ ಮುಂದಿನ ಮೂರು ತಿಂಗಳಲ್ಲಿ ವರದಿ ನೀಡಲಿವೆ. ಆ ನಂತರ ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ರಾಜ್ಯ ಸರ್ಕಾರವು ಯೋಜನೆ ಚಾರಿಗೊಳಿಸಲಿದೆ ಎಂದು ಮಾಹಿತಿ ನೀಡಿದರು.

ಟ್ರಾಲಿ ಬಸ್‌ ಮೂಲಕ ಹೆಚ್ಚುವರಿ ಸೌಕರ್ಯ

ಒಂದು ಮನೆಯಲ್ಲಿ ನಾಲ್ಕು ಜನ ಇದ್ದರೂ ಆರು ಖಾಸಗಿ ವಾಹನಗಳಿರುತ್ತವೆ. ವೇಗವಾಗಿ, ಕೆಲಸ ನಿರ್ವಹಿಸುತ್ತಾ ತಲುಪಲು ಖಾಸಗಿ ವಾಹನ ಅವಲಂಭಿಸುತ್ತಾರೆ. ಹೀಗಾಗಿ, ನಗರದ ಟ್ರಾಲಿ ಸೌಲಭ್ಯ ಬಸ್‌ಗಳನ್ನು ಆರಂಭಿಸಿ ಅವುಗಳಲ್ಲಿ ಪ್ರಯಾಣದ ಜತೆಗೆ ಲ್ಯಾಪ್‌ಟಾಪ್‌ ಇಟ್ಟುಕೊಂಡು ಕೆಲಸವನ್ನು ಮಾಡುವ ಸೌಲಭ್ಯ ಕಲ್ಪಿಸಲಾಗುವುದು. ಈ ಸೌಲಭ್ಯದಿಂದ ಸಾರಿಗೆ ಬಸ್‌ಗಳ ಅವಲಂಬನೆ ಕೂಡಾ ಹೆಚ್ಚಳವಾಗುತ್ತದೆ ಎಂದು ಹೇಳಿದರು.

ಸೀಟ್‌ಬೆಲ್ಟ್ ಅಲಾರಂ ನಿಷ್ಕ್ರಿಯಗೊಳಿಸುವ ಸಾಧನಗಳ ಮಾರಾಟ ನಿಲ್ಲಿಸಲು Amazonಗೆ ಕೇಂದ್ರ ಸರ್ಕಾರ ಸೂಚನೆ

ಬಹು ಸಾರಿಗೆ ಕಾರಿಡಾರ್‌

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಗರದ ಬೆಳೆದಿದ್ದು, ಹೊಸ ರಸ್ತೆ ನಿರ್ಮಾಣ, ಇರುವ ರಸ್ತೆಗಳ ವಿಸ್ತೀರ್ಣ ಹೆಚ್ಚಿಸಲು ಕಷ್ಟಸಾಧ್ಯ. ಹೀಗಾಗಿ, ಮೂರು ಅಂತಸ್ತಿನ ಬಹು ಸಾರಿಗೆ ಕಾರಿಡಾರ್‌ ನಿರ್ಮಿಸಲು ನಿರ್ಧರಿಸಲಾಗಿದೆ. ಕಾರಿಡಾರ್‌ನ ಕೆಳಭಾಗದಲ್ಲಿ ರಸ್ತೆ ಅದರ ಮೇಲೆ ಪ್ಲೈಓವರ್‌ ಅದರ ಮೇಲ್ಭಾಗದಲ್ಲಿ ಮೆಟ್ರೋ ಓಡಾಟ ನಡೆಸಬಹುದು. ಈ ಬಗ್ಗೆ ಸರ್ಕಾರ ಕೂಡಾ ಸಮ್ಮತಿಸಿದೆ ಎಂದರು.

ಇನ್ನು ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬೈಯಪ್ಪನಹಳ್ಳಿ ರೈಲ್ವೆ ನಿರ್ಮಾಣ ಯೋಜನೆಯಲ್ಲಿ ಬಳಸಲಾಗುವುದು. ಯಶಸ್ವಿಯಾದರೆ ಅನಂತರ ಬೇರೆಡೆಯೂ ನಿರ್ಮಾಣ ಮಾಡುವ ಚಿಂತನೆಯಿದೆ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ.
 

Follow Us:
Download App:
  • android
  • ios