*  ಆ್ಯಸಿಡ್ ಸಂತ್ರಸ್ತೆಗೆ ಚರ್ಮ ಅಳವಡಿಸಿದ ಸೇಂಟ್ ಜಾನ್ಸ್ ಆಸ್ಪತ್ರೆ ವೈದ್ಯರು*  ದೇಹದ ಚರ್ಮವೆಲ್ಲಾ ತೆಗೆಯುವುದಿಲ್ಲ, ತಪ್ಪು ತಿಳುವಳಿಕೆ ಬೇಡ*  ಚರ್ಮಕ್ಕೆ ಬೇಡಿಕೆ ಹೆಚ್ಚು ದಾನಿಗಳು ಕಡಿಮೆ

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಮೇ.05): ಆ್ಯಸಿಡ್ ದಾಳಿಗೆ(Acid Attack) ತುತ್ತಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ವಿಕ್ಟೋರಿಯಾ ಆಸ್ಪತ್ರೆಯ ಚರ್ಮ ಬ್ಯಾಂಕ್‌ನಿಂದ ಚರ್ಮ ರವಾನಿಸಲಾಗಿದೆ. ಅಲ್ಲದೇ ಆ್ಯಸಿಡ್ ಸಂತ್ರಸ್ತೆಗೆ ಚರ್ಮ ಸೇಂಟ್ ಜಾನ್ಸ್ ಆಸ್ಪತ್ರೆ ವೈದ್ಯರು ಚರ್ಮ ಕೂಡ ಅಳವಡಿಸಿದ್ದಾರೆ. ಯುವತಿಗೆ ಚರ್ಮ ಅಳವಡಿಸಿದ ಬಳಿಕ ಯುವತಿ ಚೇತರಿಕೆ ಬಗ್ಗೆ ವೈದ್ಯರು ಎಚ್ಚರ ವಹಿಸಲಿದ್ದಾರೆ‌. ಸದ್ಯ ಯುವತಿ ಆರೋಗ್ಯ ಸ್ಥಿರವಾಗಿದ್ದು ಚೇತರಿಕೆ ಕಾಣ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. 

ಆ್ಯಸಿಡ್ ಸಂತ್ರಸ್ತೆಗೆ ಚರ್ಮ ಅಳವಡಿಕೆ ಸಂಬಂಧ ವಿಕ್ಟೋರಿಯಾದ(Victoria Hospital) ಚರ್ಮ ಬ್ಯಾಂಕ್‌ಗೆ(Skin Bank) ಸೇಂಟ್ ಜಾನ್ಸ್ ಆಸ್ಪತ್ರೆ ಬೇಡಿಕೆ ಇಟ್ಟಿತ್ತು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ವಿಕ್ಟೋರಿಯಾ ಆಸ್ಪತ್ರೆ ಸುಟ್ಟಗಾಯ ಹಾಗೂ ಪ್ಲಾಸ್ಟಿಕ್ ಸರ್ಜರಿ(Plastic Surgery) ವಿಭಾಗದ ಮುಖ್ಯಸ್ಥ ಡಾ.‌ ರಮೇಶ್ ಪ್ರತಿಕ್ರಿಯಿಸಿದ್ದಾರೆ. ಆ್ಯಸಿಡ್ ಸಂತ್ರಸ್ತೆಗೆ ಚರ್ಮಕ್ಕಾಗಿ ಸೇಂಟ್ ಜಾನ್ಸ್ ಆಸ್ಪತ್ರೆ ‌ಇಂದ ಬೇಡಿಕೆ ಬಂದಿತ್ತು. ನಮ ಸ್ಕಿನ್ ಬ್ಯಾಂಕ್‌ಗೆ 4000 ಸ್ಕೈಯರ್ ಸೆಂಟಿ‌ ಮೀಟರ್ ಚರ್ಮಕ್ಕೆ ಮನವಿ ಮಾಡಿದ್ರು. ನಮ್ಮಲ್ಲಿ ಸಂಗ್ರಹಿಸಿಟ್ಟಿದ್ದ ಎಲ್ಲಾ ಸ್ಕಿನ್ ಕೊಟ್ಟಿದ್ದೇವೆ.‌ 100 ಸ್ಕೈಯರ್ ಸೆಂಟಿಮೀಟರ್ ನಷ್ಟು ಕಡಿಮೆ ಇತ್ತು ಅಂತ ಡಾ.‌ಕೆಟಿ ರಮೇಶ್ ಹೇಳಿದ್ದಾರೆ. 

Bengaluru: ಯುವತಿ ಮೇಲೆ ಆ್ಯಸಿಡ್ ದಾಳಿ: 5 ದಿನ ಕಳೆದರೂ ಸಿಕ್ಕಿಲ್ಲ ಸೈಕೋ ಪ್ರೇಮಿ ನಾಗೇಶ್‌ ಸುಳಿವು

ಆ್ಯಸಿಡ್ ಅಟ್ಯಾಕ್‌ನಿಂದಾಗಿ ಚರ್ಮ ಆಳವಾಗಿ ಸುಟ್ಟಿರತ್ತೆ. ಆಳವಾದ ಗಾಯ ಕೂಡ ಆಗುವುದರಿಂದ ಹೊರಗಿನಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತೆ. ದೇಹದಲ್ಲಿನ ನೀರಿನಂಶ ಕೂಡ ಕಡಿಮೆಯಾಗ್ತಿರತ್ತೆ. ಈ ವೇಳೆ ದಾನಿಗಳ ನೀಡಿರುವ ಚರ್ಮವನ್ನ ಅಳವಡಿಸಿದಾಗ ದೇಹಕ್ಕೆ ರಕ್ಷಣೆ ಸಿಗುತ್ತದೆ. ಆಗ ರೋಗಿ(Patient) ಗುಣಮುಖ ಆಗ್ತಾರೆ, ನೋವು ಕಡಿಮೆ ಆಗುತ್ತದೆ. ರೋಗಿಗೆ ಅಳವಡಿಸಿದ ಚರ್ಮ ಕನಿಷ್ಟ ನಾಲ್ಕರಿಂದ ಆರು ವಾರಗಳ ಕಾಲ ಇರುತ್ತದೆ. ಅಷ್ಟರೊಳಗೆ ಗುಣಮುಖ ಹೊಂದಲು ಚರ್ಮ ಸಹಕಾರಿ ಆಗತ್ತೆ ಅಂತ ಕೆ.ಟಿ ರಮೇಶ್(KT Ramesh) ಹೇಳಿದರು. 

ಚರ್ಮಕ್ಕೆ ಬೇಡಿಕೆ ಹೆಚ್ಚು ದಾನಿಗಳು ಕಡಿಮೆ

ಪ್ರತಿ ವರ್ಷ ಕನಿಷ್ಟ ಒಂದು ಸಾವಿರ ಮಂದಿ ಸುಟ್ಟಗಾಯಗಳಿಂದ ಸಾವನ್ನಪ್ಪುತ್ತಿದ್ದಾರೆ(Death) ಎಂದು ವರದಿ ಹೇಳುತ್ತಿದೆ.‌ ಸುಟ್ಟ ಗಾಯಗಳಾದ ಚರ್ಮಕ್ಕೆ ಬೇಡಿಕೆ ಹೆಚ್ಚುತ್ತದೆ. ಆದರೆ ಚರ್ಮ ದಾನ(Skin Donate) ಮಾಡುವ ಪ್ರಕರಣಗಳು ಕಡಿಮೆ ಇವೆ. ಕೋವಿಡ್ ಸಂದರ್ಭದಲ್ಲಂತೂ ಚರ್ಮ ದಾನ ಅಕ್ಷರಶಃ ಇಲ್ಲದಂತಾಗಿತ್ತು ಅಂತ ಡಾ. ರಮೇಶ್ ಹೇಳಿದರು. ನೇತ್ರದಾನ(Eye Donation), ರಕ್ಷದಾನಕ್ಕೆ ಇದ್ದಷ್ಟು ಜಾಗೃತಿ ಚರ್ಮದಾನಕ್ಕೆ ಇಲ್ಲ. ಈಗೀಗ ಜಾಗೃತಿ ಹೆಚ್ಚುತ್ತಿದೆ ಅಂತಾ ವೈದ್ಯರು. ಆರೋಗ್ಯ ಇಲಾಖೆಯ(Health Department) ಜೀವ ಸಾರ್ಥಕತೆ ಜೊತೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಈಗೀಗ ಅಂಗಾಂಗ ದಾನ ಮಾಡುವ ವೇಳೆ ಚರ್ಮದಾನ ಕೂಡ ಆಗುತ್ತಿದೆ. ಆದರೂ ಬೇಡಿಕೆ ಅಂತೂ ಹೆಚ್ಚಾಗೇ ಇದೆ. ಹೊರ ರಾಜ್ಯದಿಂದಲೂ ವಿಕ್ಟೋರಿಯಾದ ಸ್ಕಿನ್ ಬ್ಯಾಂಕ್ ಗೆ ಬೇಡಿಕೆಗಳು ಬರುತ್ತವೆ‌. ಹೀಗಾಗಿ ಚರ್ಮದಾನ ಜಾಗೃತಿ ಹೆಚ್ಚಾಗಬೇಕು ಅಂತಾರೆ ವೈದ್ಯರು. 

ದೇಹದ ಚರ್ಮವೆಲ್ಲಾ ತೆಗೆಯುವುದಿಲ್ಲ, ತಪ್ಪು ತಿಳುವಳಿಕೆ ಬೇಡ

ವ್ಯಕ್ತಿ ಮೃತಪಟ್ಟು 6 ಗಂಟೆಯ ಒಳಗೆ ಚರ್ಮವನ್ನ(Skin) ತೆಗೆಯಬೇಕಾಗುತ್ತದೆ. ಸಾಕಷ್ಟು ಜನ ದೇಹದ ಚರ್ಮವನ್ನೆಲ್ಲಾ ತೆಗೆಯುತ್ತಾರೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಮೃತ ವ್ಯಕ್ತಿಯ ತೊಡೆ ಹಾಗೂ ಕಾಲಿನ ಭಾಗದಿಂದ ಮಾತ್ರ ಚರ್ಮವನ್ನ ತೆಗೆಯಲಾಗುತ್ತದೆ. ಇದರಿಂದ ದೇಹ ವಿಕಾರವಾಗುವುದಿಲ್ಲ. ಹೀಗಾಗಿ ಚರ್ಮದಾನ ಮಾಡಲು ಯಾವುದೇ ಸಮಸ್ಯೆ ಇಲ್ಲ ಅಂತಿದ್ದಾರೆ ವೈದ್ಯರು.