ಹೊಸಪೇಟೆ(ನ.09): ವಿಶ್ವಪರಂಪರೆ ತಾಣ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಶನಿವಾರ ಹಾಗೂ ಭಾನುವಾರ ವೀಕೆಂಡ್‌ಗೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ಎರಡು ದಿನಗಳಲ್ಲಿ 6 ಸಾವಿರ ಪ್ರವಾಸಿಗರು ಬಂದಿದ್ದಾರೆ.

ಚಳಿಗಾಲ ಆರಂಭಗೊಂಡಿರುವುದರಿಂದ ಹಂಪಿ ಸ್ಮಾರಕಗಳ ವೀಕ್ಷಣೆಗೆ ಇದು ಸಕಾಲ ಎಂದು ದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅದರಲ್ಲೂ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಬೆಂಗಳೂರಿನ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹಂಪಿ ಸ್ಮಾರಕಗಳನ್ನು ವೀಕ್ಷಿಸುವ ಪ್ರವಾಸಿಗರು ಅವುಗಳ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ಇದು ಸೆಕ್ಯೂರಿಗಾರ್ಡ್‌ಗಳಿಗೆ ಪೀಕಲಾಟ ತಂದಿಟ್ಟಿದೆ. ಸ್ಮಾರಕಗಳ ಬಳಿ ಸೆಲ್ಫಿ ತೆಗೆದುಕೊಳ್ಳುವಂತಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳುತ್ತಿದ್ದರೂ ಪ್ರವಾಸಿಗರು ಮಾತ್ರ ಸೆಲ್ಫಿ ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುತ್ತಿಲ್ಲ.

ಹಂಪಿ ಉತ್ಸವ ಒಂದು ದಿನಕ್ಕೆ ಸೀಮಿತ: ಕಲಾವಿದರ ಆಕ್ರೋಶ

ಇದರಿಂದ ಕೆಲ ಬಾರಿ ಭದ್ರತಾ ಸಿಬ್ಬಂದಿ ಹಾಗೂ ಪ್ರವಾಸಿಗರ ನಡುವೆ ವಾಗ್ವಾದ ಕೂಡ ನಡೆಯುತ್ತಿದೆ. ಪ್ರಮುಖ ಸ್ಮಾರಕಗಳನ್ನು ಮುಟ್ಟುವಂತಿಲ್ಲ ಎಂದು ಹೇಳಿದರೂ ಪ್ರವಾಸಿಗರು ಮಾತು ಕೇಳುವುದಿಲ್ಲ ಎಂದು ಬೇಸರಿಸುತ್ತಾರೆ ಹೆಸರು ಹೇಳಲಿಚ್ಛಿಸಿದ ಭದ್ರತಾ ಸಿಬ್ಬಂದಿಯೊಬ್ಬರು.

ಹಂಪಿಯಲ್ಲಿ ದಿನೇ ದಿನೇ ಪ್ರವಾಸಿಗರ ಸಂಖ್ಯೆ ಏರುತ್ತಿದೆ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ವಿದೇಶಿ ಪ್ರವಾಸಿಗರು ಹಂಪಿಯತ್ತ ಇನ್ನೂ ಸುಳಿಯುತ್ತಿಲ್ಲ.