Asianet Suvarna News Asianet Suvarna News

ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆಗೆ ಡೇಟ್ ಫಿಕ್ಸ್

ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವ ದಿನಾಂಕ ಪ್ರಕಟವಾಗಿದೆ. ದೇವಸ್ಥಾನ ಆಡಳಿತ ಮಂಡಳಿಯವರು, ಬಾಬುದಾರರು, ಅಧಿಕಾರಿಗಳು ಹಾಗು ಸಾರ್ವಜನಿಕರ ಸಮ್ಮುಖದಲ್ಲಿ ವಿದ್ವಾನ್‌ ಶರಣ ಆಚಾರ್ಯ ಸಂಪ್ರದಾಯಂತೆ ಜಾತ್ರಾ ದಿನಾಂಕ ಪ್ರಕಟಿಸಿದರು.

Sirsi Marikamba Fest Date Announced
Author
Bengaluru, First Published Dec 30, 2019, 8:27 AM IST

ಶಿರಸಿ [ಡಿ.30]:  ದಕ್ಷಿಣ ಭಾರತದ ಶಕ್ತಿಪೀಠಗಳಲ್ಲಿ ಒಂದಾದ ಇಲ್ಲಿಯ ಶ್ರೀ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವ ದಿನಾಂಕ ಪ್ರಕಟವಾಗಿದೆ. ವಿಕಾರಿ ಸಂವತ್ಸರದ ಫಾಲ್ಗುಣ ಶುಕ್ಲ ಅಷ್ಟಮಿಯ ದಿನವಾದ 2020ರ ಮಾ. 3ರಿಂದ ಮಾ. 11ರ ವರೆಗೆ ಜಾತ್ರೆ ನೆರವೇರಲಿದೆ.

ಭಾನುವಾರ ಸಂಜೆ ದೇವಸ್ಥಾನ ಆಡಳಿತ ಮಂಡಳಿಯವರು, ಬಾಬುದಾರರು, ಅಧಿಕಾರಿಗಳು ಹಾಗು ಸಾರ್ವಜನಿಕರ ಸಮ್ಮುಖದಲ್ಲಿ ವಿದ್ವಾನ್‌ ಶರಣ ಆಚಾರ್ಯ ಸಂಪ್ರದಾಯಂತೆ ಜಾತ್ರಾ ದಿನಾಂಕ ಪ್ರಕಟಿಸಿದರು. ಸೇರಿದ್ದವರೆಲ್ಲ ಚಪ್ಪಾಳೆ ತಟ್ಟುವ ಮೂಲಕ ಅನುಮೋದಿಸಿದರು. ಈ ಸಂದರ್ಭದಲ್ಲಿ ಬಾಬದಾರ ಪ್ರಮುಖ ಅಜಿತ ನಾಡಿಗ ಸಭಾಮಂಟಪದ ಮಧ್ಯದಲ್ಲಿ ದೀಪ ಬೆಳಗಿ ವಿಧ್ಯುಕ್ತಗೊಳಿಸಿದರು. ತದನಂತರ ಜಾತ್ರಾ ರಾಯಸವನ್ನು ದೇವಿಯ ಸನ್ನಿಧಿಯಲ್ಲಿ ಇಟ್ಟು ಜಾತ್ರಾ ಮಹೋತ್ಸವ ಸಾಂಗವಾಗಿ ನೇರವೇರುವಂತಾಗಲಿ ಎಂದು ಪ್ರಾರ್ಥಿಸಿ ಪೂಜಿಸಲಾಯಿತು.

ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಪರಂಪರೆ, ಸಂಸ್ಕೃತಿ, ಕಾನೂನಿಗೆ ಒಳಪಟ್ಟು ಜಾತ್ರಾಮಹೋತ್ಸವ ನಡೆಸಲಾಗುತ್ತದೆ. ಜಾತ್ರೆಯ ಯಶಸ್ಸಿಗೆ ಸಾರ್ವಜನಿಕ ಅಭಿಪ್ರಾಯಕ್ಕೂ ಮನ್ನಣೆ ನೀಡಲಾಗುತ್ತದೆ. ಜಾತ್ರಾ ಸಲಹಾ ಪೆಟ್ಟಿಗೆಯನ್ನಿಟ್ಟಿದ್ದು, ಅದರಲ್ಲಿ ಸಲಹೆ ನೀಡಬಹುದು. ಜಾತ್ರಾಮಹೋತ್ಸವ ಮಾದರಿ, ಸೌಹಾರ್ದಯುತ ಹಾಗೂ ವ್ಯವಸ್ಥಿತವಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯ ಎಂದರು.

ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಸಂಪ್ರದಾಯದಂತೆ ಜಾತ್ರೆ ದಿನಾಂಕ ನಿಗದಿಯಾಗಿದೆ. ಜಾತ್ರಾಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ, ಎಲ್ಲ ಇಲಾಖೆಗಳ ಸಹಕಾರ ನೀಡಲಾಗುತ್ತದೆ. ಜಾತ್ರೆಯ ಯಶಸ್ಸಿಗೆ ಅಧಿಕಾರಿಗಳ, ಬಾಬದಾರರ ಸಭೆ ನಡೆಸಲಾಗುತ್ತದೆ. ಎಲ್ಲರ ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇವಸ್ಥಾನದ ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ ಭಂಡಿಮನೆ, ಶಶಿಕಲಾ ಚಂದ್ರಾಪಟ್ಟಣ, ಬಾಬದಾರಗಳಾದ ಅಜಿತ ನಾಡಿಗ, ಜಗದೀಶ ಗೌಡ, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ, ತಹಸೀಲ್ದಾರ್‌ ಎಂ.ಆರ್‌. ಕುಲಕರ್ಣಿ, ಸಿಪಿಐ ಗಿರೀಶ ಮುಂತಾದವರು ಪಾಲ್ಗೊಂಡಿದ್ದರು.

ಜಾತ್ರಾ ಪೂರ್ವ ವಿಧಿ, ಹೊರಬೀಡು

ಜಾತ್ರಾ ಮಹೋತ್ಸವ ಪೂರ್ವಭಾವಿಯಾಗಿ ಶ್ರೀ ದೇವಿಯ ಪ್ರತಿಷ್ಠಾ ಮಂಟಪ ಕಳಚುವ ಕಾರ್ಯ ಜ. 22ರ ಬೆಳಗ್ಗೆ 10.11ರ ನಂತರ ನೆರವೇರಲಿದೆ. ಮೊದಲನೇ ಹೊರಬೀಡು ಪೂರ್ವದಿಕ್ಕಿಗೆ ಫೆಬ್ರವರಿ 11ಕ್ಕೆ, ಎರಡನೇ ಹೊರಬೀಡು ಉತ್ತರದಿಕ್ಕಿಗೆ ಫೆ. 14ಕ್ಕೆ, ಮೂರನೇ ಹೊರಬೀಡು ಪೂರ್ವದಿಕ್ಕಿಗೆ ಫೆ. 18ಕ್ಕೆ ಹಾಗೂ ನಾಲ್ಕನೇ ಹೊರಬೀಡು ಫೆ. 21ರ ರಾತ್ರಿ 9ರ ಆನಂತರ ನಡೆಯಲಿದೆ.

ಫೆ. 21ರ ಮಧ್ಯಾಹ್ನ 12.33ಕ್ಕೆ ವೃಕ್ಷಪೂಜೆ, ಫೆ. 25ರಂದು ದೇವಿಯ ರಥದ ಮರ ತರುವ ಕಾರ್ಯ ನಡೆಯಲಿದೆ. ಅಂಕೆಯ ಹೊರಬೀಡು ಪೂರ್ವದಿಕ್ಕಿಗೆ ಫೆ. 25ರ ರಾತ್ರಿ 9.45ಕ್ಕೆ ನೆರವೇರಲಿದೆ. ಶ್ರೀ ದೇವಿಯ ವಿಗ್ರಹ ವಿಸರ್ಜನೆ ಕಾರ್ಯ ಫೆ. 26ರ ಬೆಳಗ್ಗೆ 11.58ರಿಂದ 12.11ರ ವರೆಗೆ ನಡೆಯಲಿದೆ ಎಂದು ಘೋಷಿಸಲಾಯಿತು.

ರಥಾರೋಹಣ, ಶೋಭಾಯಾತ್ರೆ...

ದೇವಿಯ ರಥದ ಕಲಶ ಪ್ರತಿಷ್ಠೆ ಮಾ. 3ರ ಮಧ್ಯಾಹ್ನ 12.43ಕ್ಕೆ ನೆರವೇರಲಿದ್ದು, ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ರಾತ್ರಿ 11.11ರಿಂದ 11.18ರೊಳಗೆ ನೆರವೇರುವುದು. ಶ್ರೀ ದೇವಿಯ ರಥಾರೋಹಣ ಮಾ. 4ರ ಬೆಳಗ್ಗೆ 7.5ರಿಂದ 7.26ರ ಒಳಗೆ ನಡೆಯಲಿದ್ದು, ಬೆಳಗ್ಗೆ 8.19ಕ್ಕೆ ದೇವಿಯ ಶೋಭಾಯಾತ್ರೆ ಆರಂಭವಾಗಲಿದೆ. ಮಧ್ಯಾಹ್ನ 12.43ಕ್ಕೆ ಜಾತ್ರಾ ಗದ್ದುಗೆಯಲ್ಲಿ ದೇವಿಯನ್ನು ಸ್ಥಾಪಿಸಲಾಗುತ್ತದೆ. ಮಾ. 5ರ ಮುಂಜಾನೆ 5ರಿಂದ ಸೇವೆ, ಹರಕೆ ಆರಂಭವಾಗಲಿದೆ. ಮಾ. 11ರಂದು ಜಾತ್ರೆ ಮುಕ್ತಾಯವಾಗಲಿದೆ.

ಜ. 4ಕ್ಕೆ ಸಾರ್ವಜನಿಕ ಸಲಹಾ ಸಭೆ

ಪೇಜಾವರ ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಸಭೆಯನ್ನು ಸಾಂಕೇತಿಕವಾಗಿ ನಡೆಸಲಾಯಿತು. ದೇವಸ್ಥಾನದ ಬಾಬದಾರ ಪ್ರಮುಖ ಜಗದೀಶ ಗೌಡ ಹಾಗೂ ಸಾರ್ವಜನಿಕರ ಆಗ್ರಹದ ಮೇರೆಗೆ ಜಾತ್ರಾ ಸಲಹೆ, ಚರ್ಚೆಗೆ ಪುನಃ ದೇವಸ್ಥಾನದಲ್ಲಿ ಜ. 4ರ ಸಂಜೆ 3.30ಕ್ಕೆ ಸಭೆ ನಡೆಸಲು ನಿರ್ಧರಿಸಲಾಯಿತು.

Follow Us:
Download App:
  • android
  • ios