Sirsi Haveri Road: ಶಿರಸಿ-ಹಾವೇರಿ ರಸ್ತೆಯನ್ನು ಮೇ 30 ರೊಳಗಡೆ ಮುಗಿಸಿಕೊಡೋದಾಗಿ ಹೇಳಿದ್ದಾರೆ, ಆದರೆ ಈಗ ಒಂದು ಮಳೆಗೆ ರಸ್ತೆ ಮಾತ್ರ ಕೆಸರುಗದ್ದೆಯಾಗಿದೆ. ಈ ಬಾರಿ ರಸ್ತೆ ಕಂಪ್ಲೀಟ್‌ ಆಗಿಲ್ಲ ಅಂದ್ರೆ ಮಾತ್ರ ಜನರು ಸುಮ್ಮನೆ ಇರೋದಿಲ್ಲ. ಆದರೆ ಈಗ ಬಂದ ಒಂದು ಮಳೆಗೆ ರಸ್ತೆ ಮಾತ್ರ ಗದ್ದೆಯಾಗಿದೆ. 

ಹೆಲೋ.. ಇದು ಶಿರಸಿ ಹಾವೇರಿ ರಸ್ತೆ..ದಯವಿಟ್ಟು ಕೆಸರು ಗದ್ದೆ ಅಂತ ಮಾತ್ರ ತಪ್ಪು ತಿಳಿಬೇಡು. ಹೌದು, ರಸ್ತೆಯಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಯಲ್ಲೇ ರಸ್ತೆಯಿದೆಯೋ ತಿಳಿಯುತ್ತಿಲ್ಲ. ಇನ್ನೊಂದು ಕಡೆ ಕಂಬಳಕ್ಕೆ ರೆಡಿಯಾದ ಗದ್ದೆಯಾ ಅಂತಕೂ ಅನಿಸಿರಬಹುದು. ಹೌದು, ನಿಮಗೂ ಇದೇ ಡೌಟ್‌ ಬಂದಿದೆ ಎಂದು ಅರ್ಥ ಆಗ್ತಿದೆ. ತೆರಿಗೆ ಕಟ್ಟುವ ಜನರಿಗೆ 'ಯಮಲೋಕದ ಟಿಕೆಟ್' ಕೊಡುವಂತೆ ಕಾಣ್ತಿದೆ.

Add Asianetnews Kannada as a Preferred SourcegooglePreferred

ಸಾರ್ವಜನಿಕರಿಗೆ ನಿತ್ಯ ನರಕ ದರ್ಶನ

ನಿಜಕ್ಕೂ ಇದು ಶಿರಸಿ-ಹಾವೇರಿ ರಸ್ತೆಯಲ್ಲ, ಮೃತ್ಯುಕೂಪಕ್ಕೆ ತೆರೆದ ಹೆಬ್ಬಾಗಿಲು! ಐದು ವರ್ಷಗಳ ಆಮೆಗತಿಯ ಕಾಮಗಾರಿ ಈ ಹಂತದಲ್ಲಿದೆ. ಸರ್ಕಾರದ ಪಾಲಿಗೆ ಇದು ಕೇವಲ ರಸ್ತೆ ಕಾಮಗಾರಿ ಇರಬಹುದು, ಗುತ್ತಿಗೆದಾರರಿಗೆ ಇದು ಟೆಂಡರ್‌ ಆಗಿರಬಹುದು. ಆದರೆ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತಿರುತ್ತವೆ. ಇಲ್ಲಿಯ ಸಾರ್ವಜನಿಕರಿಗೆ ಇದು ನಿತ್ಯ ನರಕ ದರ್ಶನ. ಶಿರಸಿ ಹಾವೇರಿ ರಸ್ತೆ ಈಗ ಗದ್ದೆಯೂ ಹೌದು, ಯಮಲೋಕದ ಹಾದಿಯೂ ಹೌದು!

ಧೂಳಿನಲ್ಲಿ ರಸ್ತೆ ಕಾಣಿಸೋದಿಲ್ಲ!

ಮಳೆಗಾಲ ಹತ್ತಿರ ಬರುತ್ತಿದ್ದಂತೆ ರಸ್ತೆ ಅಗಲೀಕರಣ ಮಾಡಲಾಗಿದೆ, ಎಲ್ಲೆಲ್ಲೂ ಧೂಳು, ಜಲ್ಲಿಕಲ್ಲು. ನಿತ್ಯ ಇಲ್ಲಿ ಬಸ್‌ಗಳು, ಕಾರ್‌ಗಳು, ಲಾರಿ, ಟ್ರ್ಯಾಕ್ಟರ್‌ಗಳು ಓಡಾಡುತ್ತವೆ. ಚಳಿಗಾಲದಲ್ಲಿ ಇಬ್ಬನಿಯಿಂದ ರಸ್ತೆ ಕಾಣಿಸೋದಿಲ್ಲ, ಈಗ ಬೇಸಿಗೆಕಾಲದಲ್ಲಿ ಧೂಳಿನಿಂದ ರಸ್ತೆ ಕಾಣಿಸುತ್ತಿಲ್ಲ. ಶಿರಸಿ-ಹಾವೇರಿ ರಸ್ತೆಯ ಕಾಮಗಾರಿ ನಿಧಾನ ಆಗಲು ಗುತ್ತಿಗೆದಾರರು ಕಾರಣ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ. ಆದರೆ ಇಷ್ಟುದಿನ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎನ್ನೋದು ಈಗ ಇರುವ ಪ್ರಶ್ನೆ.

ಮಳೆಗಾಲ ಶುರು ಆದಾಗ ಕೆಲಸ ಮಾಡೋದು ಟ್ರಿಕ್

ಮಳೆಗಾಲ ಹತ್ತಿರ ಇದೆ ಎಂದಾಗ ರಸ್ತೆ ಕೆಲಸ ಶುರು ಮಾಡೋದು, ಆಮೇಲೆ ಮಳೆಗಾಲ ಎಂದು ಕೆಲಸ ನಿಲ್ಲಿಸೋದು ರೂಢಿಯಾಗಿಬಿಟ್ಟಿದೆ. ಆದರೆ ಜನರು ಮಾತ್ರ ನಿತ್ಯ ಶಾಪ ಹಾಕುತ್ತಲೇ ದಿನ ಕಳೆಯುತ್ತಿದ್ದಾರೆ. ಇಲ್ಲಿ ಓಡಾಡುವ ವಾಹನಗಳು ವರ್ಷದಲ್ಲಿ ಆರು ತಿಂಗಳು ಗ್ಯಾರೇಜ್‌ನಲ್ಲಿ ಬಿದ್ದಿರುತ್ತವೆ. ಇನ್ನು ಇಲ್ಲಿನ ಜನರಂತೂ ತಿಂಗಳಲ್ಲಿ ಹತ್ತು ದಿನ ಆಸ್ಪತ್ರೆ ಮುಂದೆ ನಿಂತಿರುತ್ತಾರೆ.

ಜನರ ಆಕ್ರೋಶ

ಈ ಬಾರಿ ರಸ್ತೆ ಮಾಡಿಕೊಟ್ಟಿಲ್ಲ ಅಂದ್ರೆ ರಸ್ತೆಯನ್ನು ಬಂದ್‌ ಮಾಡ್ತೀವಿ, ದೊಡ್ಡ ದೊಡ್ಡ ಹೊಂಡ ಹೊಡೆದು ಇಡ್ತೀವಿ, ಜೈಲಿಗೆ ಹೋದರೂ ಚಿಂತೆ ಇಲ್ಲ ಎಂದು ಜನರು ಹೇಳುತ್ತಿದ್ದಾರೆ ಎಂದರೆ ತಪ್ಪು, ಅಕ್ಷರಶಃ ರೊಚ್ಚಿಗೆದ್ದಿದ್ದಾರೆ. ಒಟ್ಟಿನಲ್ಲಿ ಜನರಿಗೂ ಈ ಸರ್ಕಾರದ ಭರವಸೆ ಮಾತು ಕೇಳಿ ಸಾಕಾಗಿದೆ.

ಕುಂಟು ನೆಪಗಳು

ಗುತ್ತಿಗೆದಾರರು ಸರಿ ಇಲ್ಲ, ಇವರಿಂದಲೇ ರಸ್ತೆ ಕಾಮಗಾರಿ ಆಗುತ್ತಿಲ್ಲ ಎಂದು ಸಂಸದರು ಕಾರಣ ಕೊಡ್ತಾರೆ, ಇನ್ನೊಂದು ಕಡೆ ಇರಾನ್‌ ಇಸ್ರೇಲ್ ಯುದ್ಧದಿಂದ‌ ಡಾಂಬರು ಇಲ್ಲ ಎನ್ನುತ್ತಾರೆ.

ಪಂಚವಾರ್ಷಿಕ ಯೋಜನೆಗಳು ಮುಗಿದರೂ ಕೂಡ ಈ ರಸ್ತೆ ಮುಗಿದಿಲ್ಲ. ಮಳೆಗೆ ಕೆಸರುಮಯವಾಗಿರುವ ಈ ಹಾದಿಯಲ್ಲಿ ಓಡಾಡುವುದು ಸಾಹಸವಲ್ಲ, ಸಾವಿನೊಂದಿಗೆ ಸರಸವಾಗಿದೆ. ಅಧಿಕಾರಿಗಳೇ ಕಣ್ಣು ಬಿಡಿ! ಮಳೆಯ ನೀರಲ್ಲಿ ರಸ್ತೆ ಮುಳುಗಿಲ್ಲ, ಜನರ ನಂಬಿಕೆ ಮುಳುಗಿದೆ. ಇನ್ನು ಜನರು ಮಾತ್ರ ಸುಮ್ಮನೆ ಇರೋದಿಲ್ಲ, ಇದು ಪ್ರಜಾಪ್ರಭುತ್ವದ ಪ್ರಭುಗಳ ವಿನಂತಿ ಅಲ್ಲ, ಆರ್ಡರ್.‌