ಬೆಂಗಳೂರು(ಜ.08): ಮೈಸೂರು ರಸ್ತೆಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ (ಸಿರ್ಸಿ ಫ್ಲೈಓವರ್‌) ಮೈಸೂರು ರಸ್ತೆಯಿಂದ ಪುರಭವನ ಕಡೆಗೆ ಹೋಗುವ ಮಾರ್ಗದ ಎರಡನೇ ಹಂತದ ಕಾಮಗಾರಿ ಗುರುವಾರದಿಂದ ಆರಂಭಗೊಳ್ಳಲಿದ್ದು, ಮತ್ತೆ ವಾಹನ ಸಂಚಾರಿ ಮಾರ್ಗ ಬದಲಾವಣೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿರ್ಸಿ ಫ್ಲೈಓವರ್‌ ಅರ್ಧ ಬಂದ್‌!

ಎರಡನೇ ಹಂತದ ಕಾಮಗಾರಿಗೆ ಸಂಚಾರಿ ಪೊಲೀಸರು ಅನುಮತಿ ನೀಡಿದ್ದಾರೆ. ಅದರಂತೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಗುರುವಾರ ಬೆಳಗ್ಗೆಯಿಂದ ರಸ್ತೆಯ ಮೇಲ್ಪದರ ತೆಗೆಯುವ ಕಾರ್ಯ ಆರಂಭವಾಗಲಿದೆ. 15 ದಿನದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಬಿಬಿಎಂಪಿಯ ಎಂಜಿನಿಯರ್‌ ಸುರೇಶ್‌ ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ

*ಪುರಭವನದ ಕಡೆಯಿಂದ ಮೈಸೂರು ರಸ್ತೆ ಕಡೆ ಸಾಗುವ ವಾಹನಗಳು ಮೇಲ್ಸೇತುವೆ ಕೆಳಭಾಗದಲ್ಲಿಯೇ ಸಂಚಾರ ನಡೆಸಬೇಕು.

*ಮೈಸೂರು ರಸ್ತೆಯಿಂದ ನಗರದ ಒಳಭಾಗಕ್ಕೆ ಬರುವ ವಾಹನಗಳು ಮೇಲ್ಸೇತುವೆ ಬಳಸಿ ಪುರಭವನದ ಕಡೆ ಸಂಚಾರ ನಡೆಸಬೇಕು.

ಸಂಜೆ 4 ರಿಂದ ರಾತ್ರಿ 11ರ ವರೆಗೆ

*ಪುರಭವನ ಕಡೆಯಿಂದ ಹೋಗುವ ವಾಹನಗಳು ಮೇಲ್ಸೇತುವೆ ಬಳಸಿ ಮೈಸೂರು ರಸ್ತೆ ಕಡೆ ಸಂಚಾರ ಮಾಡಬೇಕು.

*ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಮೇಲ್ಸೇತುವೆಯ ಈಗಾಗಲೇ ಮೊದಲ ಹಂತದ ಕಾಮಗಾರಿ ಮುಗಿದಿರುವ ಮಾರ್ಗದಲ್ಲಿ ಸಂಚರಿಸಿ ಡಾ.ಟಿಸಿಎಂ ರಾಯಲ್‌ ರಸ್ತೆ ಹಾಗೂ ಗೂಡ್‌ಶೆಡ್‌ ರಸ್ತೆಗೆ ಎಡ ತಿರುವು ಪಡೆದು ಮುಂದೆ ಮೆಜೆಸ್ಟಿಕ್‌, ಸಿಟಿ ಮಾರುಕಟ್ಟೆ ಕಡೆ ಸಾಗಬೇಕು.