ಬ್ಯಾಡಗಿ(ಮೇ.15): ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ಉಂಟಾಗಿದ್ದ ಆಕ್ಸಿಜನ್‌ ಸಿಲಿಂಡರ್‌ಗಳ ಸಮಸ್ಯೆಗೆ ಸ್ಪಂದಿಸಿರುವ ಸಿರಿಗೆರೆ ತರಳಬಾಳು ಮಠದ ಶ್ರೀಗಳು 36 ಆಕ್ಸಿಜನ್‌ ಜಂಬೋ ಸಿಲಿಂಡರ್‌ಗಳನ್ನು ದಾವಣಗೆರೆಯಿಂದ ಬ್ಯಾಡಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಮಾನವೀಯ ಕಳಕಳಿ ಮೆರೆದಿದ್ದಾರೆ.

ಬ್ಯಾಡಗಿಯ ತಾಲೂಕಾಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಲಿಂಡರ್‌ ಕೊರತೆ ಬಗ್ಗೆ ಸ್ಥಳೀಯ ಭಕ್ತರಿಂದ ಮಾಹಿತಿ ಪಡೆದುಕೊಂಡ ಸಿರಿಗೆರೆಯ ಶ್ರೀಗಳು, ವೈದ್ಯಾಧಿಕಾರಿ ಡಾ. ಪುಟ್ಟರಾಜ್‌ ಅವರೊಂದಿಗೆ ಮೊಬೈಲ್‌ನಲ್ಲಿ ಚರ್ಚಿಸಿದ್ದಾರೆ. ಬಳಿಕ ದಾವಣಗೆರೆಯಿಂದ ತಕ್ಷಣವೇ 36 ಜಂಬೋ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಬ್ಯಾಡಗಿ ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ಶ್ರೀಗಳು ಮಾರ್ಗದರ್ಶನ ಮಾಡಿದ್ದಾರೆ. ಇದರಿಂದ ತಾಲೂಕಾಸ್ಪತ್ರೆಯಲ್ಲಿ ಉಂಟಾಗಿದ್ದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದ ಶ್ರೀಗಳು, ಮುಂದೆಯೂ ಸಮಸ್ಯೆ ಉಂಟಾದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸ್ಥಳೀಯ ಭಕ್ತರಿಗೆ ಸೂಚನೆ ನೀಡಿದ್ದಾಗಿ ತಿಳಿದು ಬಂದಿದೆ.

"

ಬ್ಯಾಡಗಿ: ಕಳಪೆ ಆಹಾರ ಪೂರೈಕೆ ಖಂಡಿಸಿ ಸೋಂಕಿತರ ಪ್ರತಿಭಟನೆ

ಕೋವಿಡ್‌ ಸಾರ್ವತ್ರಿಕ ಸಮಸ್ಯೆಯಾಗಿದೆ. ಇದರ ನಿಯಂತ್ರಣಕ್ಕೆ ಯಾರೇ ಸ್ಪಂದಿಸಲು ಮುಂದಾದರೂ ಇಲ್ಲವೆನ್ನಲಾಗದು. ಹೀಗಾಗಿ ಶ್ರೀಗಳೇ ಖುದ್ದಾಗಿ ದೂರವಾಣಿಯಲ್ಲಿ ಸಮಸ್ಯೆ ಆಲಿಸಿ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವರಿಗೆ ಸರ್ಕಾರವೂ ಸೇರಿದಂತೆ ಆರೋಗ್ಯ ಇಲಾಖೆ ಪರವಾಗಿ ಅಭಿನಂದಿಸುತ್ತೇನೆ ಎಂದು  ಬ್ಯಾಡಗಿ ವೈದ್ಯಾಧಿಕಾರಿ ಡಾ. ಪುಟ್ಟರಾಜ್‌ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona