Asianet Suvarna News Asianet Suvarna News

ಸಿದ್ಧೇಶ್ವರ ಶ್ರೀಗಳ ಪ್ರವಚನಕ್ಕೆ ವಿಧ್ಯುಕ್ತ ಚಾಲನೆ: ಭಕ್ತರಿಗೆ ದರ್ಶನ ನೀಡಿದ ನಡೆದಾಡುವ ದೇವರು

ಸಿದ್ಧೇಶ್ವರ ಸ್ವಾಮೀಜಿಗಳ ಒಂದು ತಿಂಗಳ ಪ್ರವಚನಕ್ಕೆ ಚಾಲನೆ| ಹುಬ್ಬಳ್ಳಿ ತಾಲೂಕಿನ ಗೋಕುಲ ಗ್ರಾಮದಲ್ಲಿನಡೆಯುವ ಕಾರ್ಯಕ್ರಮ| ಧೂಪ ಹಾಕುವ ಮೂಲಕ ಉದ್ಘಾಟನೆ| ವಿವಿಧ ಪೀಠಾಧೀಶರು ಭಾಗಿ| ನಸುಕಿಗೆ ಗೋಕುಲದತ್ತ ಸಾವಿರಾರು ಭಕ್ತರ ಹೆಜ್ಜೆ|

Siddeshwara Shri Preach Start in Gokul in Hubballi
Author
Bengaluru, First Published Mar 2, 2020, 8:11 AM IST

ಹುಬ್ಬಳ್ಳಿ[ಮಾ.02]: ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯಿಂದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಗಳ ಒಂದು ತಿಂಗಳ ಪ್ರವಚನ ಕಾರ್ಯಕ್ರಮ ತಾಲೂಕಿನ ಗೋಕುಲ ಗ್ರಾಮದಲ್ಲಿ ಭಾನುವಾರದಿಂದ ಆರಂಭವಾಯಿತು. ನಸುಕಿನ ಜಾವಕ್ಕೆ ಎದ್ದು ಬಂದ ಸಾವಿರಾರು ಜನರು ಮೊದಲ ದಿನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಗ್ರಾಮದ ಬಸವಂತಪ್ಪ ಬ. ಹೊಸಮನಿ ಹಾಗೂ ಬಂಧುಗಳ ಹೊಲದಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಧೂಪದ ಗುಗ್ಗವ್ವೆಯನ್ನು ನೆನೆದು ಧೂಪ ಹಾಕುವ ಮೂಲಕ ವಿವಿಧ ಮಠಾಧೀಶರು ಪ್ರವಚನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಉದ್ಘಾಟನೆಯ ಮೊದಲ ದಿನ ಸಂಪ್ರದಾಯದಂತೆ ಸಿದ್ಧೇಶ್ವರ ಶ್ರೀಗಳು ದರ್ಶನ ಮಾತ್ರ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗದಗ ಶಿವಾನಂದ ಬೃಹನ್ಮಠದ ಅಭಿನವ ಶಿವಾನಂದ ಸ್ವಾಮೀಜಿ, ನೂತನ ಪೀಠಾಧಿಪತಿ ಸದಾಶಿವಾನಂದ ಸ್ವಾಮೀಜಿ, ಅಕ್ಕಿಹೊಂಡ ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ, ಗೋಕುಲದ ದಯಾನಂದ ಆಶ್ರಮದ ಚಿದ್ರುಪಾನಂದ ಸ್ವಾಮೀಜಿ, ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ, ಹುಲ್ಯಾಳದ ಮಲ್ಲಿಕಾರ್ಜುನ ಗುರುದೇವ ತಪೋವನದ ಮಲ್ಲಯ್ಯ ಸ್ವಾಮೀಜಿಗಳು ಒಂದು ತಿಂಗಳು ನಡೆವ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನದ ಮಹತ್ವದ ಕುರಿತು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.

ಇನ್ನು, ಪ್ರವಚನಕ್ಕಾಗಿ ನಗರದ ಹತ್ತಾರು ಕಡೆಗಳಿಂದ ಬಸ್‌, ವಾಹನ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರಿಂದ ಗೋಕುಲ ಗ್ರಾಮ ತುಂಬಿಹೋಗಿತ್ತು. ಎಲ್ಲರ ಮನೆಯೆದುರು ರಂಗೋಲಿ ಚಿತ್ತಾರ ಮೂಡಿತ್ತು.

ನಾವು ಬಡಿದಾಡುತ್ತೇವೆ, ನಾಚಿಕೆ ಎನಿಸುತ್ತದೆ

ಈ ವೇಳೆ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಮಾತು ಬೇರೆಡೆ ಹೊರಳಿತು. ಶ್ರೀಗಳು ಮಾತನಾಡುತ್ತ ನಮ್ಮದೂ ವಿರಕ್ತ ಮಠ, ನಾವು ಕಾಂಪ್ಲೆಕ್ಸ್‌ ಕಟ್ಟಿದ್ದೇವೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತೇವೆ. ನಮಗೂ ಸಿಂಹಾಸನವಿದೆ. ಇದಕ್ಕೆ ಬಡಿದಾಟಗಳು ನಡೆಯುತ್ತವೆ. ನಮ್ಮದು ವಿರಕ್ತಮಠ. ಇವುಗಳಿಂದ ನಮಗೆ ನಾಚಿಕೆ ಆಗುತ್ತಿದೆ ಎನ್ನುತ್ತ ಮೂರುಸಾವಿರ ಮಠದ ಈಗಿನ ಬೆಳೆವಣಿಗೆಗಳ ಕುರಿತು ಪರೋಕ್ಷವಾಗಿ ವ್ಯಂಗ್ಯವಾಡಿದರು.

ವೇದಿಕೆ ಕೆಳಗಿದ್ದ ಶ್ರೀಗಳು

ಉದ್ಘಾಟನೆ ದಿನವಾದ ಭಾನುವಾರ ಸಿದ್ಧೇಶ್ವರ ಶ್ರೀಗಳು ವೇದಿಕೆ ಏರಲಿಲ್ಲ. ವೇದಿಕೆ ಬಳಿಯೆ ಕುಳಿತು ಭಕ್ತರಿಗೆ ದರ್ಶನ ನೀಡಿದರು. ಸಂಪ್ರದಾಯದಂತೆ ಮೊದಲ ದಿನ ಶ್ರೀಗಳು ಪ್ರವಚನ ನೀಡಲಿಲ್ಲ. ಇಂದಿನಿಂದ ಬೆಳಗ್ಗೆ 6.30ರಿಂದ 7.30ರವರೆಗೆ ಪ್ರವಚನ ನಡೆಯಲಿದೆ.

ಭಾರತದ ಆತ್ಮ ಅಧ್ಯಾತ್ಮ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅಧ್ಯಾತ್ಮ ಭಾರತದ ಆತ್ಮವಾಗಿದ್ದು, ಲೌಖಿಕ ಚಿಂತನೆ ವಿನಾಶದತ್ತ ಕೊಂಡೊಯ್ದರೆ, ಪಾರಮಾರ್ಥಿಕ ಚಿಂತನೆ ಪರಮಾತ್ಮನತ್ತ ಕೊಂಡೊಯ್ಯುತ್ತದೆ ಎಂಬುದನ್ನು ನಮ್ಮ ರಾಷ್ಟ್ರದಲ್ಲಿ ಮಾತ್ರ ಸಹಜವಾಗಿ ಬೋಧಿಸಲಾಗುತ್ತದೆ ಎಂದರು.

ಶ್ರೇಷ್ಠ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ ನಮ್ಮ ಸಂಪತ್ತಾಗಿದೆ. ಇದೇ ಧಾರ್ಮಿಕ ಪದ್ಧತಿಯೇ ನಮ್ಮ ಭಾರತವನ್ನು ಉಳಿಸಿಕೊಂಡು ಬಂದಿದೆ. ಧರ್ಮ ಎನ್ನುವುದು ಒಂದು ಜೀವನ ಪದ್ಧತಿ. ಪೂಜಾ ಪದ್ಧತಿಗಳು ಭಿನ್ನವಾದರೂ ಅಂತಿಮವಾಗಿ ಎಲ್ಲರ ಪದ್ಧತಿಯೂ ಒಳ್ಳೆಯದನ್ನೇ ಹೇಳುತ್ತದೆ. ಉತ್ತಮ ಬದುಕಿಗಾಗಿ ಧರ್ಮವನ್ನು ಪಾಲಿಸಬೇಕು ಎಂಬುದನ್ನು ಇಲ್ಲಿ ಚಿಕ್ಕಂದಿನಿಂದಲೆ ಸಹಜವಾಗಿ ಕಲಿಸಲಾಗುತ್ತದೆ. ಆದರೆ, ಪಾಶ್ಚಿಮಾತ್ಯದಲ್ಲಿ ಎಲ್ಲ ಭೋಗಗಳನ್ನು ಸವಿದ ಬಳಿಕ ಅದರಿಂದ ಜಿಗುಪ್ಸೆ ಉಂಟಾಗಿ ಧರ್ಮದತ್ತ ಜನತೆ ವಾಲುತ್ತಾರೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು.

ಒಂದು ತಿಂಗಳ ಕಾಲ ಹುಬ್ಬಳ್ಳಿಯಲ್ಲಿ ಬೆಳಕು ನೀಡುವ ಸೂರ್ಯ ಹಾಗೂ ಅಧ್ಯಾತ್ಮಿಕ ಸೂರ್ಯ ಪ್ರಜ್ವಲಿಸಲಿದ್ದಾರೆ. ಮಾತು ಮತ್ತು ಕೃತಿಯಲ್ಲಿ ಅಂತರ ಕಡಿಮೆಯಾದಂತೆ ಮಾನವ ಮಹಾದೇವ ಎನಿಸಿಕೊಳ್ಳುತ್ತಾನೆ. ಅಂತಹ ಸತ್ಪುರುಷ ಸಿದ್ದೇಶ್ವರರು ಒಂದು ತಿಂಗಳ ಕಾಲ ಇಲ್ಲಿ ಉಪಸ್ಥಿತರಿದ್ದು, ಉಪದೇಶ ನೀಡುವುದು ಸೌಭಾಗ್ಯದ ವಿಚಾರ ಎಂದರು.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ಸಿದ್ಧೇಶ್ವರ ಶ್ರೀಗಳು ಸರಳ ನಡೆ ನುಡಿಯಿಂದ, ತಮ್ಮ ವಿದ್ವತ್ತಿನಿಂದ ಸಕಲವನ್ನೂ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಹಿಂದೊಮ್ಮೆ ಸರ್ಕಾರಿ ಬಜೆಟ್‌ನಲ್ಲಿ ಅವರ ಮಠಕ್ಕೆ 10 ಕೋಟಿ ಅನುದಾನ ಮೀಸಲಾಗಿದ್ದನ್ನು ತಿಳಿದ ಶ್ರೀಗಳು ಅದನ್ನು ನೀಡದಂತೆ ತಾಕೀತು ಮಾಡಿದ್ದರು. ಇಂತಹ ಸ್ವಾಮೀಜಿಗಳು ನಮಗೆ ಕಾಣುವುದು ಅಪರೂಪ ಎಂದರು.

ವಿಪ ಸದಸ್ಯ ಬಸವರಾಜ ಹೊರಟ್ಟಿ, ಶ್ರೀಗಳ ಉಪನ್ಯಾಸವನ್ನು ಕೇಳಿ ಹಾಗೇಯೇ ಹೋದರೆ ಏನೂ ಬದಲಾವಣೆ ಆಗಲಾರದು. ಆದರೆ, ನಾವು ಅವರ ಉಪನ್ಯಾಸದ ಅರ್ಧದಷ್ಟಾದರೂ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೀಗಾದಲ್ಲಿ ಮಾತ್ರ ವೃದ್ಧ ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸುವ ಪರಿಪಾಠ ನಿಲ್ಲಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೇವಲ ವೇದಿಕೆ ಮೇಲಿದ್ದವರಿಗೆ ನಮಸ್ಕರಿಸಿ ತಮ್ಮ ಮಾತು ಮುಗಿಸಿದರು. ಆದರೆ ಶ್ರೀಗಳ ಅಪ್ಪಣೆ ಮೇರೆಗೆ ಪುನಃ ಎದ್ದು ಮಾತನಾಡಿ, ಭಾಷೆಗೆ ಭಾವನೆ ಸೇರಿದರೆ ಬದುಕು ಆಗುತ್ತದೆ. ಆದರೆ ನಾವಿಲ್ಲಿಗೆ ಭಕ್ತರಾಗಿ ಆಗಮಿಸಿದ್ದೇವೆ. ಶ್ರೀಗಳ ಮಾತನ್ನು ಆಲಿಸಲು ಆಗಮಿಸಿದ್ದೇವೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು. ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ ಉಪಸ್ಥಿತರಿದ್ದರು. ಶಾಸಕರಾದ ಅರವಿಂದ ಬೆಲ್ಲದ ಸ್ವಾಗತಿಸಿದರು. ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ವಂದಿಸಿದರು.
 

Follow Us:
Download App:
  • android
  • ios