ಬುದ್ದಿ ಇಲ್ಲದ ಈಶ್ವರಪ್ಪ, ಪ್ರತಿಕ್ರಿಯೆ ಬೇಡಪ್ಪ: ಸಿದ್ದು ಲೇವಡಿ!
ಈಶ್ವರಪ್ಪ ಹೇಳಿಕೆಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ! ಸಿದ್ದರಾಮಯ್ಯ ಪಾಕಿಸ್ತಾನಿ ಎಂದಿದ್ದ ಈಶ್ವರಪ್ಪ! ಈಶ್ವರಪ್ಪಗೆ ಬುದ್ದಿ ಇಲ್ಲ ಎಂದು ಕಟುಕಿದ ಸಿದ್ದು! ಬಿಜೆಪಿ ನಾಯಕರಿಗೆ ಸಂವಿಧಾನ, ಕಾನೂನಿನ ಅರಿವಿಲ್ಲ
ಗುಳೇದಗುಡ್ಡ(ಆ.9): ಮಾಜಿ ಸಿಎಂ ಸಿದ್ದರಾಮಯ್ಯ ಓರ್ವ ಪಾಕಿಸ್ತಾನಿ ಎಂಬ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ದಾರೆ. ಈಶ್ವರಪ್ಪ ಅವರಿಗೆ ದೇಶದ ಸಂವಿಧಾನದ ಅರಿವಿಲ್ಲ ಎಂದು ಸಿದ್ದು ಗುಡುಗಿದ್ದಾರೆ.
ಗುಳೇದಗುಡ್ಡದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪ ಅವರಿಗೆ ಸಂವಿಧಾನ ಮತ್ತು ಕಾನೂನಿನ ಅರಿವಿಲ್ಲ, ಅವರಿಗೇನಿದ್ದರೂ ಬೆಂಕಿ ಹಚ್ಚುವುದಷ್ಟೇ ಗೊತ್ತು ಎಂದು ಲೇವಡಿ ಮಾಡಿದರು.
ಬಿಜೆಪಿ ನಾಯಕರಿಗೆ ಈ ದೇಶದ ಸಂವಿಧಾನ ಮತ್ತು ಕಾನೂನಿನ ಕನಿಷ್ಠ ಜ್ಞಾನವೂ ಇಲ್ಲ ಎಂದು ಹರಿಹಾಯ್ದ ಸಿದ್ದು, ಇಂತಹವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಂವಿಧಾನದ ಪ್ರಕಾರ ನಾನು ಈ ದೇಶದ ನಾಗರಿಕ, ನನಗೆ ಭಾರತದಲ್ಲಿ ಮತ ಹಾಕುವ ಅಧಿಕಾರವಿದೆ ಎಂದು ಸಿದ್ದರಾಮಯ್ಯ ಹೇಳಿದರು.
"
ಇದೇ ವೇಳೆ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಯಿಸಿದ ಸಿದ್ದು, ಬಿಜೆಪಿ ಶಾಸಕರೇ ಕಾಂಗ್ರೆಸ್ ಸಂಪರ್ಕದಲ್ಲಿದ್ದು, ಅಧಿಕಾರ ದಾಹಕ್ಕೆ ಕೇವಲ ಮೂರು ದಿನಗಳ ಕಾಲ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಮುಖಭಂಗವಾಗಲಿದೆ ಎಂದು ಭವಿಷ್ಯ ನುಡಿದರು.
ಇನ್ನು ಸಚಿವ ಡಿ.ಕೆ. ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವುದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡುವ ಅಧಿಕಾರ ಸಿಎಂ ಅವರಿಗಿದ್ದು, ಈ ಕುರಿತು ಅವರನ್ನೇ ಕೇಳುವುದು ಉತ್ತಮ ಎಂದು ತಿಳಿಸಿದರು.