ಕೊಟ್ಟಮಾತು ಮರೆತಿರುವ ಸಿದ್ದರಾಮಯ್ಯ ಅಧಿಕಾರ ದಾಹಿ : ಅಶ್ವತ್ಥನಾರಾಯಣ್
70ನೇ ವರ್ಷಕ್ಕೆ ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ತಪ್ಪುವ ಅಧಿಕಾರ ದಾಹಿ ಆಗಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಸಾಲದ ಹೊರೆ ಹೆಚ್ಚಿಸುತ್ತಾರೆಯೇ ವಿನಾ ಜನರಿಗೆ ಒಳಿತನ್ನು ಮಾಡುವುದಿಲ್ಲ ಎಂದು ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನದ ಸಂಚಾಲಕರಾದ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ್ ಟೀಕಿಸಿದರು.
ಮೈಸೂರು : 70ನೇ ವರ್ಷಕ್ಕೆ ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ತಪ್ಪುವ ಅಧಿಕಾರ ದಾಹಿ ಆಗಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಸಾಲದ ಹೊರೆ ಹೆಚ್ಚಿಸುತ್ತಾರೆಯೇ ವಿನಾ ಜನರಿಗೆ ಒಳಿತನ್ನು ಮಾಡುವುದಿಲ್ಲ ಎಂದು ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನದ ಸಂಚಾಲಕರಾದ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ್ ಟೀಕಿಸಿದರು.
ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.48ರ ಜಯನಗರದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇದ್ದಾಗ ಮೈಸೂರು ಜಿಲ್ಲೆಗೆ ಒಂದೇ ಒಂದು ಒಳ್ಳೆಯ ಯೋಜನೆಯನ್ನೂ ಕೊಡಲಿಲ್ಲ. ಬದಲಿಗೆ ಕೋವಿಡ್ ಸಮಯದಲ್ಲಿ ಲಸಿಕೆ ತೆಗೆದುಕೊಳ್ಳದಂತೆ ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿದ್ದರು ಎಂದರು.
ಕಾಂಗ್ರೆಸ್ ದಶಕಗಳ ಕಾಲ ಆಳ್ವಿಕೆ ನಡೆಸಿದರೂ ಜನರಿಗೆ ಕುಡಿಯುವ ನೀರು, ಆಸ್ಪತ್ರೆ, ಗುಣಮಟ್ಟದ ಶಿಕ್ಷಣ, ರಸ್ತೆ ಸೇರಿದಂತೆ ಏನನ್ನೂ ಒದಗಿಸಲಿಲ್ಲ. ಈಗ ಹತಾಶೆಯಲ್ಲಿ 200 ಯೂನಿಟ್ ವಿದ್ಯುತ್ ಸೇರಿದಂತೆ ಈಡೇರಿಸಲು ಸಾಧ್ಯವಿಲ್ಲದ ಭರವಸೆಗಳನ್ನು ಕೊಡುತ್ತಿದ್ದಾರೆ ಎಂದು ಅವರು ದೂರಿದರು.
ಜನಪರ ಕೆಲಸಗಳನ್ನು ಮಾಡುತ್ತಿರುವ ಬಿಜೆಪಿಯ ಬಲವರ್ಧನೆಗೆ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಜನರ ಮನೆ ಮನೆಯನ್ನು ತಲುಪಲಾಗುವುದು ಎಂದರು.
ಕೆ.ಆರ್. ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಎಸ್.ಎ. ರಾಮದಾಸ್, ಮೇಯರ್ ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಯುವ ಮುಖಂಡ ಕವೀಶ್ ಗೌಡ ಮೊದಲಾದವರು ಇದ್ದರು.
ಸಿದ್ದರಾಮಯ್ಯ ಮೋಸ
ಬಾಗಲಕೋಟೆ (ಜ.29): ಬಾದಾಮಿ ಕ್ಷೇತ್ರ ದೂರವಾಗುತ್ತದೆ ಎಂಬ ಕಾರಣಕ್ಕೆ ಕೋಲಾರಕ್ಕೆ ಹೋಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಜನತೆಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಕಿಡಿಕಾರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದುಗೆ ಬಾದಾಮಿ ದೂರಾದರೆ ಅವರು ಆರು ಬಾರಿ ಗೆದ್ದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಾದರೂ ನಿಲ್ಲಬಹುದಿತ್ತಲ್ಲ? ಎಂದು ಪ್ರಶ್ನಿಸಿದರಲ್ಲದೆ, ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರೆ ದೊಡ್ಡವರಾಗುತ್ತೇವೆ ಎನ್ನುವ ಭ್ರಮೆ ಕಾಂಗ್ರೆಸ್‌ನವರಲ್ಲಿ ಎಂದು ಸಿದ್ದು ಟೀಕೆಗೆ ಈಶ್ವರಪ್ಪ ತಿರುಗೇಟು ನೀಡಿದರು.
ಇನ್ನು, ಜೆಡಿಎಸ್‌ನ ಭವಾನಿ ರೇವಣ್ಣ ನಾನೇ ಅಭ್ಯರ್ಥಿ ಅನ್ನುತ್ತಾರೆ. ಮತ್ತೊಂದೆಡೆ ಅನಿತಾ ಕುಮಾರಸ್ವಾಮಿ ತನ್ನ ಮಗನನ್ನು ಅಭ್ಯರ್ಥಿಯಾಗಿ ಘೋಷಿಸುತ್ತಾರೆ. ಹೀಗೆ ತಮ್ಮ ಮೊಮ್ಮಕ್ಕಳು, ಮಕ್ಕಳನ್ನೇ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದರೆ ಒಂದು ಪಕ್ಷ ಅಂತ ಯಾಕಿರಬೇಕು? ಚುನಾವಣಾ ಸಮಿತಿ ಏತಕ್ಕೆ ಎಂದು ಪ್ರಶ್ನಿಸಿದ ಅವರು, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಕಾಂಗ್ರೆಸ್‌ನದು ಪ್ರಜಾ ಗೋವಿಂದ ಯಾತ್ರೆ: ಸಚಿವ ಅಶ್ವತ್ಥ ನಾರಾಯಣ್
ರಾಜ್ಯದಲ್ಲಿ ಮತ್ತೆ ಬಿಜೆಪಿ ಬಹುಮತ ಖಚಿತ: ಬಿಜೆಪಿ ಸರ್ಕಾರ ಜನಪರ ಕಾರ್ಯಕ್ರಮಗಳ ಮೂಲಕ ರಾಜ್ಯದ ಜನತೆಯ ವಿಶ್ವಾಸ ಗಳಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದಾಗ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಬಿಜೆಪಿ ಒಂದು ಸಿದ್ಧಾಂತದ ಪಕ್ಷ. ತಳಹಂತದ ಕಾರ್ಯಕರ್ತರಿಂದ ಸಂಘಟಿತವಾಗಿರುವ ಪಕ್ಷವಾಗಿರುವುದರಿಂದ ಇಲ್ಲಿ ಶಿಸ್ತು ಮತ್ತು ಸಿದ್ಧಾಂತದಿಂದ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಮೂಲ ಕಾಂಗ್ರೆಸ್ ಪಕ್ಷವಾಗಿದೆ. ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಭ್ರಷ್ಟಾಚಾರಗಳು ತನಿಖೆ ಆಗಬಾರದು ಎಂಬ ಉದ್ದೇಶದಿಂದ ಇದೇ ಸಿದ್ದರಾಮಯ್ಯನವರು ಲೋಕಾಯುಕ್ತ ಸಂಸ್ಥೆಯನ್ನು ತೆಗೆದು ಹಾಕಿದ್ದರು. ಲೋಕಾಯುಕ್ತ ಸಂಸ್ಥೆಗೆ ನಮ್ಮ ಸರ್ಕಾರ ಮತ್ತೆ ಶಕ್ತಿ ತುಂಬಿದೆ. ಸಿದ್ದರಾಮಯ್ಯನವರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಅನೇಕ ದೂರುಗಳು ಬಂದಿವೆ. ಮೊದಲು ಅವರು ಆ ದೂರುಗಳಿಗೆ ಉತ್ತರವನ್ನು ನೀಡಲಿ ಎಂದು ತಿರುಗೇಟು ನೀಡಿದರು.