ಹುಬ್ಬಳ್ಳಿ(ಡಿ.12):  ಬಿಜೆಪಿ ತಿಪ್ಪರಲಾಗ ಹಾಕಿದರೂ ಗ್ರಾಪಂ ಚುನಾವಣೆಯಲ್ಲಿ ಅವರಿಗೆ ಗೆಲ್ಲಲು ಸಾಧ್ಯವಾಗಲ್ಲ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ನಮ್ಮ ಗ್ರಾಮ ನಮ್ಮ ಶಕ್ತಿ ಸಮಾವೇಶಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರ ವಿರೋಧಿ. ಅದೀಗ ಗ್ರಾಮ ಸ್ವರಾಜ್ಯ ಹೆಸರಲ್ಲಿ ಸಮಾವೇಶ ನಡೆಸುತ್ತಿದೆ. ಆದರೆ ಗ್ರಾಮ ಸ್ವರಾಜ್ಯ ನಮ್ಮ ಕನಸಿನ ಕೂಸು. ಅದನ್ನು ಕದ್ದುಕೊಂಡು ಸಮಾವೇಶ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.  ಬಿಜೆಪಿ ಈ ಗ್ರಾಪಂ ಚುನಾವಣೆಯಲ್ಲಿ ಎಷ್ಟು ಬೇಕಾದರೂ ಹಣ ಖರ್ಚು ಮಾಡಲಿ, ಅಧಿಕಾರ ದುರುಪಯೋಗ ಪಡಿಸಿಕೊಳ್ಳಲಿ ಆದರೂ ಅವರ ಪಕ್ಷ ಬಹುಮತ ಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷವೇ ಗ್ರಾಪಂ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದರು.

ಗ್ರಾಮಸ್ವರಾಜ್ಯ ನಮ್ಮದು:

ಬಿಜೆಪಿ ಮೀಸಲಾತಿ, ಅಧಿಕಾರ ವಿಕೇಂದ್ರೀಕರಣದ ವಿರೋಧಿ ನೀತಿ ಅನುಸರಿಸುತ್ತಿದೆ. ಮೀಸಲಾತಿ ವಿರುದ್ಧ ಬಿಜೆಪಿಯ ರಾಮಾ ಜೋಯಿಸ್‌ ಕೋರ್ಟ್‌ ಮೊರೆ ಹೋಗಿದ್ದರು. ಅದೃಷ್ಟವಶಾತ್‌ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿತು. ಇಲ್ಲದಿದ್ದಲ್ಲಿ ಮೀಸಲಾತಿಗೆ ದೊಡ್ಡ ಕೊಡಲಲಿ ಏಟು ಬೀಳುತ್ತಿತ್ತು. ಹೀಗಾಗಿ ಬಿಜೆಪಿಯವರಿಗೆ ಮೀಸಲಾತಿ ಮೇಲೆ ಹಾಗೂ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬುಗೆ ಇಲ್ಲ ಎಂದರು.

ಈಗ ನೋಡಿದರೆ ಗ್ರಾಮ ಸ್ವರಾಜ್ಯ ಎಂದು ಗ್ರಾಮೀಣ ಪ್ರದೇಶಗಳಲ್ಲಿ ಯಾತ್ರೆಗಳನ್ನು ಮಾಡುತ್ತಿದೆ. ಗ್ರಾಮ ಸ್ವರಾಜ್ಯ ಎಂದು ಹೆಸರು ಕೊಟ್ಟವರು ನಮ್ಮ ಕಾಂಗ್ರೆಸ್‌ನವರು. ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧೀಜಿ ಹಾಗೂ ಕಾಂಗ್ರೆಸ್‌ನ ಕನಸಿನ ಕೂಸು. ಅದನ್ನು ಕದ್ದುಕೊಂಡು ಬಿಜೆಪಿ ಸಮಾವೇಶ ನಡೆಸುತ್ತಿದೆ ಎಂದರು.

‘ಸಿದ್ದು, ಡಿಕೆಶಿಯಿಂದ ರೈತರ ಎತ್ತಿಕಟ್ಟುವ ಕೆಲಸ’

ಪಂಚಾಯತಿ ಸದಸ್ಯರ ಸ್ಥಾನಗಳನ್ನು ಹರಾಜು ಮಾಡುವುದು ಕಾನೂನು ಬಾಹೀರ. ಇದನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ. ಅಲ್ಲಿನ ಇಒ, ತಹಸೀಲ್ದಾರ್‌ ಏನು ಮಾಡುತ್ತಿದ್ದಾರೆ. ಈ ರೀತಿ ಗ್ರಾಪಂ ಸದಸ್ಯರ ಸ್ಥಾನಗಳನ್ನು ಹರಾಜು ಹಾಕಬಾರದು. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ಗ್ರಾಪಂ, ಮೀಸಲಾತಿ, ಮಹಿಳಾ ಮೀಸಲಾತಿ ಎಲ್ಲವೂ ಕಾಂಗ್ರೆಸ್‌ ಕೊಡುಗೆಗಳಾಗಿವೆ. ಜೊತೆಗೆ ತಾವು ಹಿಂದೆ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿರುವ ಶಾದಿಭಾಗ್ಯ, ವಿದ್ಯಾಸಿರಿ, ಕ್ಷೀರಭಾಗ್ಯ, ಕ್ಷೀರಧಾರೆ, ಅನ್ನಭಾಗ್ಯ ಸೇರಿದಂತೆ ಹತ್ತಾರು ಯೋಜನೆಗಳಿಂದಾಗಿ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹು ಸ್ಥಾನಗಳನ್ನು ಗೆಲುವು ಸಾಧಿಸುವುದು ಖಚಿತ. ಬಿಜೆಪಿ ಈ ಚುನಾವಣೆಯಲ್ಲಿ ಏನೇ ಮಾಡಿದರೂ ಗೆಲ್ಲಲು ಸಾಧ್ಯವಾಗಲ್ಲ ಎಂದರು.

ನಂತರ ನಮ್ಮ ಗ್ರಾಮ ನಮ್ಮಶಕ್ತಿ ಎಂಬ ಸಮಾವೇಶದ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಶಾಸಕರಾದ ಕುಸುಮಾವತಿ ಶಿವಳ್ಳಿ, ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ನಾಗರಾಜ ಛಬ್ಬಿ, ವೀರಣ್ಣ ಮತ್ತಿಗಟ್ಟಿ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಅಧ್ಯಕ್ಷ ಅಲ್ತಾಫ್‌ ಹಳ್ಳೂರು, ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಎಫ್‌.ಎಚ್‌. ಜಕ್ಕಪ್ಪನವರ, ನಾಗರಾಜ ಗೌರಿ, ಟಿ. ಈಶ್ವರ, ಸದಾನಂದ ಡಂಗನವರ, ರಾಜಶೇಖರ ಡಂಗನವರ ಸೇರಿದಂತೆ ಹಲವರಿದ್ದರು. ಎಲ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಸಮಾವೇಶವನ್ನು ಉದ್ಘಾಟಿಸಿದರು.

ಮಹಾನಗರದಲ್ಲಿ ಗ್ರಾಪಂ ಪ್ರಚಾರ

ಕಾಂಗ್ರೆಸ್‌ ಪಕ್ಷವು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗ್ರಾಪಂ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿತು. ಇದಕ್ಕೆ ಗ್ರಾಮೀಣ ಘಟಕದ ಕೆಲ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಪಂಗಳಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷರು ಹಳ್ಳಿಗಳಲ್ಲಿ ಸಮಾವೇಶವನ್ನು ಮಾಡುವುದನ್ನು ಬಿಟ್ಟು ನಗರದಲ್ಲಿ ಚಾಲನೆ ನೀಡಿದ್ದಾರೆ. ಇದರ ಬದಲು ಯಾವುದಾದರೂ ಹಳ್ಳಿಯಲ್ಲಿ ಸಮಾವೇಶ ನಡೆಸಿದ್ದರೂ ಹೆಚ್ಚು ಸೂಕ್ತವಾಗುತ್ತಿತ್ತು ಎಂಬ ಮಾತು ಕಾರ್ಯಕರ್ತರಿಂದ ಕೇಳಿ ಬಂದಿತು.