ಬಾಗಲಕೋಟೆ(ಫೆ.11): ತಪ್ಪು ತಿಳಕೋಬೇಡಿ ಈ ಸರ್ಕಾರದಲ್ಲಿ ದುಡ್ಡು ಇಲ್ಲವೇ ಇಲ್ಲ, ನಾನು ಸಿಎಂ ಇದ್ದಾಗ ಒಂದು ದಿನ ದುಡ್ಡು ಕಡಿಮೆ ಆಗಿರಲಿಲ್ಲ. ಈಗ ಏನೆ ಕೇಳಿದರೂ ದುಡ್ಡಿಲ್ಲ ಅಂತಾರೆ. ಮಾತೆತ್ತಿದರೆ ಕೊರೋನಾ ಅಂತಾರೆ, ಈ ಬಾರಿ ಹೆಚ್ಚುವರಿ 35 ಸಾವಿರ ಕೋಟಿ ಸಾಲ ಪಡೆಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ಇಂದು(ಗುರುವಾರ) ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ರಸ್ತೆ ಸುಧಾರಣೆಗೆ ಭೂಮಿ ಪೂಜೆ ಬಳಿಕ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಚಿವರಿಗೆ ತಾಲೂಕಿನ ಕೆರೂರು ಪಟ್ಟಣದಲ್ಲಿ ಕಾಲೇಜು ಬಿಲ್ಡಿಂಗ್‌ಗೆ ಹಣ ಕೇಳಿದ್ರೆ, ಆ ಸಚಿವ ಹಣ ಇಲ್ಲ ಅಂತಾರೆ. ಮತ್ತೆ ಯಾಕಪ್ಪಾ ಮಿನಿಸ್ಟರ್ ಆಗಿದ್ದಿಯಾ ಅಂದೆ ನಾನು ಎಂದು ಹೇಳುವ ಮೂಲಕ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ ವಿರುದ್ಧ ಕಿಡಿಕಾರಿದ್ದಾರೆ.
ಈ ಸರ್ಕಾರದ ಪಂಚೇಂದ್ರಿಯಗಳು ಕೆಲಸವನ್ನೇ ಮಾಡುತ್ತಿಲ್ಲ. ನಾನು ಹೀಗೆ ಹೇಳಿದರೆ ಬೈತಿನಿ ಅಂತಾರೆ. ನಾನೇನಾದರೂ ಬೈದೆನಾ ಇವಾಗ?, ಪಂಚೇಂದ್ರಿಯಗಳಿಲ್ಲ ಅಂದೆ ಅಷ್ಟೇ ಎಂದು ಹೇಳಿದ್ದಾರೆ. 

ಮಂತ್ರಿಗಳನ್ನು ನಂಬಿಕೊಂಡ್ರೆ ಮೂರು ಕಾಸಿನದು ಕೆಲಸ ಆಗೋದಿಲ್ಲ, ಏನೇ ಆಗಲಿ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧಿಕಾರಿಗಳನ್ನು ಹಿಡಿದುಕೊಂಡು ಕೆಲಸ ಮಾಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಒಂದೇ ವೇದಿಕೆಯಲ್ಲಿ ಸಿದ್ದು, ಶ್ರೀರಾಮುಲು..!

ಗೋವನಕೊಪ್ಪ ಗ್ರಾಮ ಪಂಚಾಯಿತಿ ಮಾಡಿ ಎಂದು ಕೇಳಿದ ಗ್ರಾಮಸ್ಥರಿಗೆ ಇನ್ನೂ ಎರಡು ವರ್ಷವಾದ ಮೇಲೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನಾವು ಅಧಿಕಾರಕ್ಕೆ ಬಂದ ನಾಳೆಗೇನೆ ಗೋವನಕೊಪ್ಪವನ್ನ ಗ್ರಾಮ ಪಂಚಾಯಿತಿ ಮಾಡಲು ಆದೇಶಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಗೋವನಕೊಪ್ಪ ಗ್ರಾಮ ಪಂಚಾಯಿತಿಯನ್ನಾಗಿ ಮಾಡುತ್ತೇವೆ. ‌ಗ್ರಾಮ ಪಂಚಾಯಿತಿ ಮಾಡೋಕೆ ನಾನು ಪತ್ರ ಬರೆದು ಬರೆದು ಇಂಕು ಖಾಲಿಯಾಗಿದೆ. ಗೋವನಕೊಪ್ಪ ಗ್ರಾಮ ಪಂಚಾಯಿತಿ ಮಾಡೋಕೆ ಪತ್ರ ಬರೆದಿದ್ದೇನೆ. ಗೋವನಕೊಪ್ಪ ಗ್ರಾಮ ಪಂಚಾಯಿತಿ ಆಗಲೇ ಬೇಕು. ದೊಡ್ಡ ಊರು, ಈವರೆಗೆ ಜನಸಂಖ್ಯೆ ಇಲ್ಲ ಅಂತಿದ್ದಾರೆ. ಈಗ ಇನ್ನೊಂದು ಊರು ಸೇರುತ್ತೀವಿ ಅಂದಿದ್ದಾರೆ ಎಂದು ಹೇಳಿದ್ದಾರೆ. 

ಇಲ್ಲಿ ಬಿಜೆಪಿ, ಕಾಂಗ್ರೆಸ್‌ನವರು ಇದ್ದೀರಿ, ಬಿಜೆಪಿಯವರ ತಪ್ಪು ಹೇಳಿದ್ರೆ ಬೈತಿರಿ ಅಂತಾರೆ. ಒಂದೆಡೆ ಸಾಲಾನೂ ಮಾಡುತ್ತಿದ್ದೀರಿ, ಕೆಲಸವನ್ನು ಮಾಡುತ್ತಿಲ್ಲ. ನಿಮಗೆ ಅಧಿಕಾರ ಮಾಡೋಕೆ ಆಗದಿದ್ರೆ ಬಿಟ್ಟು ಹೋಗಿ, ನಾವು ಮಾಡುತ್ತೇವೆ. ಯಜಮಾನಿಕೆ ಮಾಡಲಿಕ್ಕೆ ಆಗದಿದ್ದರೆ ಬೇರೆಯವರು ಮಾಡುತ್ತಾರೆ. ನನ್ನ ಅನೇಕ ಕೆಲಸಗಳನ್ನ ನಿಲ್ಲಿಸಿದ್ದಾರೆ ನನಗೆ ಹೊಟ್ಟೆ ಉರಿಯುತ್ತಿದೆ. ಅನ್ನಭಾಗ್ಯ ಅಕ್ಕಿ 7ಕೆಜೆಯಿಂದ 5 ಕೆಜಿಗೆ ಇಳಿಕೆ ಮಾಡಿದ್ದಾರೆ. ಭಾಗ್ಯಗಳನ್ನು ಪ್ರಸ್ತಾಪಿಸಿ, ನಿಲ್ಲಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.