ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಸೋಲು ಕಟ್ಟಿಟ್ಟಬುತ್ತಿಯಾಗಿದ್ದು, ರಾಜಕೀಯದಿಂದ ನಿವೃತ್ತರಾಗಲಿದ್ದಾರೆ. ಕಾಂಗ್ರೆಸ್‌ ಪಕ್ಷವು ಚುನಾವಣೆಯಲ್ಲಿ ಹೀನಾಯವಾಗಿ ಸೋತು ಕರ್ನಾಟಕವು ಕಾಂಗ್ರೆಸ್‌ ಮುಕ್ತವಾಗಲಿದೆ ಎಂದು ರಾಜ್ಯ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಕೋಲಾರ (ಡಿ.16):ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಸೋಲು ಕಟ್ಟಿಟ್ಟಬುತ್ತಿಯಾಗಿದ್ದು, ರಾಜಕೀಯದಿಂದ ನಿವೃತ್ತರಾಗಲಿದ್ದಾರೆ. ಕಾಂಗ್ರೆಸ್‌ ಪಕ್ಷವು ಚುನಾವಣೆಯಲ್ಲಿ ಹೀನಾಯವಾಗಿ ಸೋತು ಕರ್ನಾಟಕವು ಕಾಂಗ್ರೆಸ್‌ ಮುಕ್ತವಾಗಲಿದೆ ಎಂದು ರಾಜ್ಯ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ನಗರದ ಹೊರವಲಯದ ಕೋಗಿಲಹಳ್ಳಿಯಲ್ಲಿ ಭಾರತೀಯ ಜನತಾ ಪಕ್ಷದ (BJP) ಕಚೇರಿ ಉದ್ಘಾಟಿಸಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪಕ್ಷದ ಕಚೇರಿಗಳು ಅಗತ್ಯವಿತ್ತು. ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ನೂತನ ಕಚೇರಿ ನಿರ್ಮಾಣದಿಂದ ಕಾರ್ಯಕರ್ತರಲ್ಲಿ ಹುರುಪು ಕಂಡು ಬಂದಿದೆ. ಸ್ವಂತ ಕಟ್ಟಡದಿಂದಾಗಿ ಬಿಜೆಪಿ ಕಚೇರಿ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಗಲಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) , ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಪಕ್ಷವು ರಾಜ್ಯದಲ್ಲಿ ಸದೃಢವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಹುಮತದಿಂದ ಜಯಭೇರಿ ಬಾರಿಸಿ ಅಡಳಿತದ ಚುಕ್ಕಣಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ಪಕ್ಷದಲ್ಲಿ ಪಕ್ಷಕ್ಕಿಂತ ಅಧಿಕಾರಕ್ಕೆ ಹೆಚ್ಚು ಮಾನ್ಯತೆ ನೀಡುತ್ತಾರೆ. ಆದರೆ ಬಿಜೆಪಿ ಪಕ್ಷದಲ್ಲಿ ಮೊದಲು ಪಕ್ಷ ನಂತರ ಅಧಿಕಾರ ಎಂಬ ತತ್ವ ಸಿದ್ದಾಂತಗಳು ನಮ್ಮದಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಯಾವುದೇ ವಿರೋಧವಿಲ್ಲ, ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಜಿಲ್ಲೆಯಿಂದ ಆಯ್ಕೆಯಾಗಬೇಕು. ಜನರ ಮನಸ್ಸಿನಲ್ಲಿ ಪ್ರಧಾನಿ ನರೇಂದ್ರ ಅಳವಾಗಿ ಬೇರೂರಿದ್ದಾರೆ, ಮೋದಿಯೇ ಇಲ್ಲದೇ ಹೋಗಿದ್ದರೆ, ಪಾಕಿಸ್ತಾನ, ಚೀನಾ ದೇಶಗಳನ್ನು ಹಿಡಿಯಲು ಆಗುತ್ತಿರಲಿಲ್ಲ. ಚೀನಾದಲ್ಲಿಂದು ಟೀ ಕುಡಿಯಲು ಕಾಸಿಲ್ಲದಷ್ಟುಆರ್ಥಿಕ ಪರಿಸ್ಥಿತಿ ಎಕ್ಕುಟ್ಟು ಹೋಗಿದೆ. ನಮಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಡಬಲ್‌ ಇಂಜಿನ್‌ ಇದ್ದು ಸಾಕಷ್ಟುಅಭಿವೃದ್ಧಿಗೊಳ್ಳುತ್ತಿದೆ ಎಂದು ತಿಳಿಸಿದರು.

ಇದೇ ನಮ್ಮ ನರೇಂದ್ರ ಮೋದಿ ಅಧಿಕಾರಕ್ಕೆ ಬಾರದಿದ್ದರೆ ಕಾಂಗ್ರೆಸ್‌ ಪಕ್ಷದಿಂದ ವ್ಯಾಕ್ಸಿನ್‌ ಹಾಕಿಸುತ್ತಿರಲಿಲ್ಲ. ಅದೆಷ್ಟುಜನರನ್ನು ಬಲಿ ನೀಡುತ್ತಿದ್ದರೋ. ಮೋದಿ ಅಡಳಿತದಲ್ಲಿ ರಾಷ್ಟ್ರದಲ್ಲಿ ಹಲವಾರು ಏರ್‌ಪೋರ್ಚ್‌ಗಳು, ರೈಲ್ವೆ ಮಾರ್ಗಗಳು, ಹೆದ್ದಾರಿಗಳು ಅಭಿವೃದ್ಧಿ ಕಂಡಿದೆ. ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಕಂಪನಿಗಳು ಹೆಚ್ಚಾಗುತ್ತಿದ್ದು ಲಕ್ಷಾಂತರ ಮಂದಿಗೆ ಉದ್ಯೋಗ ಸೃಷ್ಠಿಯಾಗಲಿದೆ. ಭಾರತವು ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್‌.ಮುನಿಸ್ವಾಮಿ, ಸರ್ಕಾರದ ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ, ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಬಿ.ಪಿ.ಮುನಿವೆಂಕಟಪ್ಪ, ಮಂಜುನಾಥ್‌ಗೌಡ, ವೈ.ಸಂಪಂಗಿ, ವರ್ತೂರು ಪ್ರಕಾಶ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್‌, ಕೆ.ಯು.ಡಿ.ಎ. ಅಧ್ಯಕ್ಷ ವಿಜಯಕುಮಾರ್‌, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾವು ಅಭಿವೃದ್ಧಿ ಮಂಡಳಿ ವಾಸುದೇವ್‌, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್‌ ಸಿಂಗ್‌, ವಕ್ತಾರ ಎಸ್‌.ಬಿ.ಮುನಿವೆಂಕಟಪ್ಪ, ಪಿ.ಎಸ್‌.ಸತ್ಯನಾರಾಯಣರಾಜ್‌ ಇದ್ದರು.

ಸಿದ್ದು - ಡಿಕೆಶಿ ಕಾದಾಟ

ಕಾಂಗ್ರೆಸ್‌ ಪಕ್ಷದಲ್ಲಿ ಖರ್ಗೆಗೆ ವಯಸ್ಸಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಭಿನ್ನಮತ ದೆಹಲಿಯ ಕದ ತಟ್ಟಿದ್ದು ಮೊನ್ನೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರರನ್ನು ಕರೆಸಿ ಛೀಮಾರಿ ಹಾಕಿ ಒಗ್ಗಟ್ಟು ಕಾಪಾಡಲು ಕಿವಿ ಹಿಂಡಿ ಕಳುಹಿಸಿದ್ದರು. ಸಿದ್ದರಾಮಯ್ಯ ರಾಜ್ಯಕ್ಕೆ ಕಾಲಿಡುತ್ತಲೆ ಡಿ.ಕೆ.ಶಿವಕುಮಾರ್‌ ವಿರುದ್ದ ಜಂಡಾ ಎತ್ತಿ ಕಾಲೆಳೆದಿದ್ದಾರೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್‌ ಷಾ ರಾಜ್ಯಕ್ಕೆ ಬರುತ್ತಿದ್ದಾರೆಂಬ ಮಾಹಿತಿ ತಿಳಿದು ಕಾಂಗ್ರೆಸ್‌ ಪಕ್ಷದವರಿಗೆ ಚಳಿಗಿಂತ ಹೆಚ್ಚಿನ ಭೀತಿಯ ನಡುಕ ಕಂಡು ಬರುತ್ತಿದೆ ಎಂದು ಆರ್‌.ಅಶೋಕ್‌ ವ್ಯಂಗವಾಡಿದರು.