ನನ್ನ ಹೆಸರಲ್ಲಿ ಜಾರ್ಜ್, ರಹೀಮ್ ಅಂತಿಲ್ಲ: ಸಿದ್ದ‘ರಾಮ’ಯ್ಯ!
ಸ್ವಕ್ಷೇತ್ರ ಬಾದಾಮಿ ಪ್ರವಾಸಲ್ಲಿ ಸಿದ್ದರಾಮಯ್ಯ! ಕಾರ್ಯಕರ್ತರ ಜೊತೆ ಸಿದ್ದು ಮಾತುಕತೆ! ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಸಿದ್ಧತೆಗೆ ಕರೆ! ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಬಿಜೆಪಿ! ಬಿಜೆಪಿ ವಿರುದ್ಧ ಹರಿಹಾಯ್ದ ಮಾಜಿ ಮುಖ್ಯಮಂತ್ರಿ
ಬಾಗಲಕೋಟೆ(ಆ.9): ಸ್ವಕ್ಷೇತ್ರ ಬಾದಾಮಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕಾರ್ಯಕರ್ತರ ಮುಂದೆ ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ. ಜನ ಕೆಲಸ ಮಾಡುವವರನ್ನು ಬಿಟ್ಟು ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುವವರಿಗೆ ಮತ ಯಾಕೆ ಹಾಕುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಸರ್ಕಾರ ಇದ್ದಾಗ ಸಮಾಜದ ಎಲ್ಲ ವರ್ಗಕ್ಕೂ ಅನ್ವಯವಾಗುವಂತ ಯೋಜನೆಗಳನ್ನು ಜಾರಿಗೊಳಿಸಿದ್ದಾಗಿ ಹೇಳಿದ ಸಿದ್ದು, ಅದಾಗ್ಯೂ ಜನತೆ ಕೇವಲ ಮನ್ ಕೀ ಬಾತ್ ಆಡುವ ಬಿಜೆಪಿಯವರಿಗೆ ಮತ ಹಾಕಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯವರ ಬಳಿ ಅಭಿವೃದ್ಧಿ ಕುರಿತು ಯಾವುದೇ ಅಜೆಂಡಾ ಇಲ್ಲ. ಕೇವಲ ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುತ್ತಾ ಅಧಿಕಾರಕ್ಕಾಗಿ ಹೊಲಸು ರಾಜಕೀಯ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹರಿಹಾಯ್ದರು. ನಾನು ಹಿಂದೂ ಅಲ್ವಾ?. ನನ್ನ ಹೆಸರಲ್ಲೇನು ಜಾರ್ಜ್ ಅಥವಾ ರಹೀಮ್ ಅಂತಾ ಇದೆಯೇ?. ಪ್ರಭು ಶ್ರೀರಾಮನ ಹೆಸರೇ ಅಲ್ಲವೇ ಇರೋದು ಅಂತಾ ಸಿದ್ದು ಖಾರವಾಗಿ ಪ್ರಶ್ನಿಸಿದರು.
ನಾನು ಕುರುಬ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿರಲಿಲ್ಲ. ಅಲ್ಲದೇ ಆಪತ್ಕಾಲದಲ್ಲಿ ರಕ್ತ ಬೇಕೆಂದಾಗ ಯಾರೂ ರಕ್ತ ಕೊಡುವ ವ್ಯಕ್ತಿಯ ಜಾತಿ, ಧರ್ಮ ಯಾವುದೆಂದು ನೋಡುವುದಿಲ್ಲ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.
ವಿಧಾನಸಭೆಯಲ್ಲಿ ಹಿನ್ನಡೆಯಾದಂತೆ ಪುರಸಭೆ ಚುನಾವಣೆಯಲ್ಲೂ ಪಕ್ಷಕ್ಕೆ ಹಿನ್ನಡೆಯಾಗಬಾರದು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ ಸಿದ್ದರಾಮಯ್ಯ, ಕಾರ್ಯಕರ್ತರು ನನ್ನ ಜೊತೆಗಿದ್ದರೆ ಗೆಲುವು ಕಾಂಗ್ರೆಸ್ ಪಕ್ಷದ್ದಾಗಿರಲಿದೆ ಎಂದು ಭರವಸೆ ನೀಡಿದರು.
ಬಾದಾಮಿ ಕ್ಷೇತ್ರದ ಜನ ತಮ್ಮನ್ನು ಗೆಲ್ಲಿಸಿದ್ದು, ಮುಂದಿನ ಐದು ವಷರ್ಷಗಳ ಕಾಲ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಇದೇ ವೇಳೆ ಸಿದ್ದರಾಮಯ್ಯ ಭಾವುಕರಾಗಿ ನುಡಿದರು.