ಮಂಡ್ಯ [ಸೆ.16]:  ರಾಜ್ಯದಲ್ಲಿ ಮತ್ತೆ ಅಹಿಂದ ಸಂಘಟನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಾದಂತಾಗಿದೆ. ರಾಜಕೀಯ ಮರು ಜೀವಕೊಟ್ಟಅಹಿಂದ ಸಂಘಟನೆಯತ್ತ ಮಾಜಿ ಸಿಎಂ ಚಿತ್ತ ಹರಿಸಿದ್ದಾರೆ. ಮಂಡ್ಯದಲ್ಲಿ ಅಹಿಂದ ಸಭೆ ಮಾಡಲು ನಿರ್ಧರಿಸಿ ಕೊನೆಯ ಕ್ಷಣದಲ್ಲಿ ಸಭೆ ರದ್ದು ಮಾಡಿದರು.

ಮಂಡ್ಯದ ಕನಕ ಭವನದಲ್ಲಿ ಅಹಿಂದ ಸಂಘಟನೆ ಮುಖಂಡರ ಜೊತೆ ಸಭೆ ಆಯೋಜನೆ ಮಾಡಿದ್ದರು. ಸಭೆಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಮಾತುಕತೆ ನಡೆಸಿ ಮತ್ತೆ ಸಂಘಟನೆಯ ರೂಪರೇಷೆ ತಯಾರಿಸುವ ಚಿಂತನೆಯಿತ್ತು ಎನ್ನಲಾಗಿದೆ.

ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಹಿಂದ ಶಕ್ತಿ ಪ್ರದರ್ಶನ ಸಿದ್ದರಾಮಯ್ಯನವರಿಗೆ ತೀರಾ ಅನಿವಾರ್ಯವಾಗಿದೆ. ಮೊನ್ನೆ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಿದ್ದ ವೇಳೆ ಸೋನಿಯಾ ಗಾಂಧಿ ಅವರೊಡನೆ ಮಾತನಾಡಲು ಅವಕಾಶವೇ ಸಿಕ್ಕಿರಲಿಲ್ಲ. ಪ್ರಬಲ ನಾಯಕರಾಗಿರುವ ತಮ್ಮನ್ನು ಕಾಂಗ್ರೆಸ್‌ನಲ್ಲಿ ಕಡೆಗಣಿಸುತ್ತಿದ್ದಾರೆಂಬ ಕಾರಣಕ್ಕೆ ಮತ್ತೆ ಅಹಿಂದ ಸಂಘಟನೆಗೆ ಚಾಲನೆ ನೀಡಲು ತಯಾರಿ ಸಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ನಡೆಸು ಉದ್ದೇಶಿಸಿದ್ದ ಸಭೆಯೂ ಊಹಾಪೋಹಕ್ಕೆ ಪುಷ್ಟಿನೀಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಭೆಯನ್ನೇ ರದ್ದು ಮಾಡಿದರು.

ಮತ್ತೊಮ್ಮೆ ಚರ್ಚೆ ಮಾಡೋಣ:

ನಗರದ ಕುರುಬರ ಸಂಘದ ಆವರಣದಲ್ಲಿ ನಡೆಯಬೇಕಿದ್ದ ಅಹಿಂದ ಸಭೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದರು. ನಗರದ ಕನಕಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಳಿಕ ಅಹಿಂದ ಮುಖಂಡರ ಸಭೆ ನಡೆಯಬೇಕಿತ್ತು. ಅದಕ್ಕಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕಾದು ಕುಳಿತಿದ್ದರು. ಆದರೆ ಸಭೆ ಮುಗಿದ ತಕ್ಷಣ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಅಹಿಂದ ನಾಯಕರ ಸಭೆ ಆಯೋಜಿಸೋಣ. ಕೆಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಮುಂದೆ ಸಭೆ ಆಯೋಜಿಸಿ ಚರ್ಚಿಸೋಣ ಎಂದು ಸಭೆಯಿಂದ ನಿರ್ಗಮಿಸಿದರು. ಕಾದು ಕುಳಿತ ಅಹಿಂದ ನಾಯಕರಿಗೆ ನಿರಾಸೆ ಕಾದಿತ್ತು.

‘ಸಿಎಂ’ ಆಸೆ ಬಗ್ಗೆ ಸೂಚ್ಯವಾಗಿ ಹೇಳಿಕೊಂಡ ಸಿದ್ದು

ನಾನು ಮತ್ತೆ ಸಿಎಂ ಆಗುತ್ತೇನೆ ಎಂದು ಹೇಳಿ ಕೆಲವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಮನಸ್ಸಿನ ಆಳದಲ್ಲಿ ಮತ್ತೆ ಸಿಎಂ ಆಗುವ ಆಸೆ ಇದೆ ಎಂಬುದನ್ನು ಸೂಚ್ಯವಾಗಿ ಹೇಳಿದರು. ಮಂಡ್ಯದಲ್ಲಿ ನಡೆದ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಜನ ಪರ ಯೋಜನೆಗಳನ್ನು ಜಾರಿಗೆ ತಂದೆ. ಅವುಗಳಿಂದ ಜನರಿಗೆ ಸಾಕಷ್ಟುಉಪಯೋಗವಾಗುತ್ತಿವೆ. ಹೀಗಾಗಿ ಜನರು ಮತ್ತೊಮ್ಮೆ ಆಶೀರ್ವಾದ ಮಾಡುತ್ತಾರೆ ಅಂದುಕೊಂಡಿದ್ದೆ. ಆದ್ರೆ ಕಳೆದ ಚುನಾವಣೆಯಲ್ಲಿ ಜನರನ್ನು ಕೆಲವರು ದಾರಿ ತಪ್ಪಿಸಿದರು. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದಾನೆ, ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾನೆ ಎಂದು ಕೆಲವರು ಅಪಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸಿದರು. ದಯವಿಟ್ಟು ಇನ್ನೊಮ್ಮೆ ದಾರಿ ತಪ್ಪಬೇಡಿ ಎನ್ನುವ ಮೂಲಕ ತಾವು ಮತ್ತೆ ಮುಖ್ಯಮಂತ್ರಿಯಾಗುವ ಬಯಕೆಯನ್ನು ಸಿದ್ದರಾಮಯ್ಯ ಸೂಚ್ಯವಾಗಿ ಹೇಳಿಕೊಂಡರು.