ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನಾರಚನೆ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಚಿಕ್ಕಮಗಳೂರು (ಏ.13): ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನಾರಚನೆ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಎನ್.ಆರ್.ಪುರ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಆಕಾಂಕ್ಷಿ ಶಾಸಕರು ದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ.
ಸಂಪುಟ ಪುನಾರಚನೆ ಕಾರ್ಯ ಬಾಕಿಯಿದೆ. ಐದು ರಾಜ್ಯಗಳ ಚುನಾವಣೆ, ಬಜೆಟ್ ಅಧಿವೇಶನ ಸಂಪುಟ ಪುನಾರಚನೆ ವಿಳಂಬಕ್ಕೆ ಕಾರಣವಿರಬಹುದು ಎಂದರು. ನಸೀರ್ ಅಹ್ಮದ್ ರಾಜೀನಾಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇದುವರೆಗೆ ರಾಜಿನಾಮೆ ನೀಡಿಲ್ಲ. ನೀಡಬಹುದೇನೋ ಎಂದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನ್ನು ಒಪ್ಪಿಕೊಂಡಿಲ್ಲ. ಕಾಂಗ್ರೆಸ್ ಗೆಲುವು ಸಾಧಿಸುವುದು ಖಂಡಿತ.
ತಲೆದಂಡಕ್ಕೆ ಚುನಾವಣೆಯ ಸೋಲು-ಗೆಲುವು ಕಾರಣವಲ್ಲ. ಸಲೀಂ ಅಹ್ಮದ್ ಅವರು ಪಕ್ಷದ ಮುಖಂಡರು. ಅವರು ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕೆಲವರ ಪಕ್ಷ ವಿರೋಧಿ ಕಾರ್ಯಗಳ ಬಗ್ಗೆ ಹೇಳಿಕೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಹೊರತು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರಾಜಿತವಾಗಲಿದೆ ಎಂದು ಹೇಳಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳ ನಡುವೆಯೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅರಣ್ಯ ಹಕ್ಕುಪತ್ರಕ್ಕೆ ಸಭೆ: ಮಲೆನಾಡಿನಲ್ಲಿ ರೆಸಾರ್ಟ್‌ಗಳಿಗೆ ಬೇಕಾಬಿಟ್ಟಿಯಾಗಿ ಅನುಮತಿ ನೀಡುತ್ತಿರುವ ಸರ್ಕಾರ, ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅರಣ್ಯ ಇಲಾಖೆಯಿಂದ ಹಕ್ಕು ಪತ್ರ ನೀಡುವುದೂ ಸೇರಿದಂತೆ ಹಲವು ವಿಷಯದ ಬಗ್ಗೆ ಸದ್ಯದಲ್ಲಿಯೇ ಸಭೆ ನಡೆಸಲಾಗುವುದು ಎಂದರು.
ಪ್ರವಾಸಿಗರಿಗೆ ಕರ್ನಾಟಕ ಸುರಕ್ಷಿತ
ಪ್ರವಾಸಕ್ಕೆ ಬಂದ ಕೇರಳದ ಬಾಲಕಿ ಸಾವಿಗೆ ಸಂಬಂಧಿಸಿದಂತೆ ಪ್ರವಾಸಿಗರಿಗೆ ‘ಕರ್ನಾಟಕ ಸುರಕ್ಷಿತ ತಾಣವಲ್ಲ’ ಎಂದು ಕೇರಳ ರಾಜ್ಯದಿಂದ ಟೀಕೆಗಳು ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇರಳ ರಾಜ್ಯದ ಬಾಲಕಿ ಚಿಕ್ಕಮಗಳೂರಿಗೆ ಬಂದು ಮೃತಪಟ್ಟಿರುವ ವಿಷಯ ತನಿಖೆಯಾಗಲಿದೆ. ಆದರೆ, ಕರ್ನಾಟಕ ರಾಜ್ಯ ಪ್ರವಾಸಿಗರಿಗೆ ಸುರಕ್ಷಿತವಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸಿದ್ದರಾಮಯ್ಯ ಹೇಳಿದರು.


