ಬೆಂಗಳೂರು [ಸೆ.20]: ನಗರದ ಗೊರಗುಂಟೆ ಪಾಳ್ಯದ ಮೇಲುಸೇತುವೆಗೆ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣ ಮಾಡುವ ಕಾರ್ಯಕ್ರಮ ಸೆ.21ರಂದು ನಡೆಯಲಿದೆ. ಬೆಂಗಳೂರು ಉತ್ತರ ಹೆಬ್ಬಾಗಿಲು ಎಂದೇ ಹೇಳಲಾಗುವ ನಗರದ ಗೊರಗುಂಟೆ ಪಾಳ್ಯದಿಂದ ಕೆನ್ನಮೆಟಲ್‌ ಕಾರ್ಖಾನೆ ವರೆಗಿನ ಮೇಲು ಸೇತುವೆಗೆ ಶ್ರೀ ಡಾ.ಶಿವಕುಮಾರಸ್ವಾಮೀಜಿ ಹೆಸರು ನಾಮಕರಣ ಮಾಡಲಾಗುತ್ತಿದೆ.

ಅಂದು ಸಂಜೆ 5.30ಕ್ಕೆ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಡಿ.ವಿ.ಸದಾನಂದಗೌಡ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಭಾಗವಹಿಸಿದ್ದಾರೆ.

ಬೆಂಗಳೂರಿನಲ್ಲಿ ಮೇಲುಸೇತುವೆಗೆ ಶ್ರೀ ಶಿವಕುಮಾರಸ್ವಾಮೀಜಿ ಅವರ ಹೆಸರು ನಾಮಕರಣ ಮಾಡುತ್ತಿರುವುದು ಇದೇ ಮೊದಲು. ರಾಜಧಾನಿ ಬೆಂಗಳೂರಿಗೆ ಆಗಮಿಸುವ ಉತ್ತರ ಭಾಗದ ಜನಕ್ಕೆ ಗೊರಗುಂಟೆ ಪಾಳ್ಯದ ಮೇಲು ಸೇತುವೆಯೇ ಹೆಬ್ಬಾಗಿಲು. ಹೀಗಾಗಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಈ ಮೇಲು ಸೇತುವೆಗೆ ಶ್ರೀಗಳ ಹೆಸರು ನಾಮಕರಣ ಮಾಡಲು ಪ್ರಸ್ತಾಪಿಸಿ, ಕೌನ್ಸಿಲ್‌ನಲ್ಲಿ ನಿರ್ಣಯವನ್ನೂ ಮಾಡಿಸಿದರು. ಹಾಗೆಯೇ ಸರ್ಕಾರದಿಂದ ಒಪ್ಪಿಗೆಯನ್ನೂ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮಧ್ಯೆ, ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳ ಸಂಘ ಈ ಸೇತುವೆ ಬಳಿ ಬೃಹತ್‌ ಕಮಾನು ದ್ವಾರ ನಿರ್ಮಿಸಲು ಮುಂದಾಗಿದೆ. ರಾಜ್ಯ ಸರ್ಕಾರ ಅನುಮತಿ ನೀಡಿದರೆ ಇದೇ ಸ್ಥಳದಲ್ಲಿ ದ್ವಾರ ನಿರ್ಮಿಸಲು ಸಿದ್ಧರಿದ್ದೇವೆ ಎಂದು ಹಳೇ ವಿದ್ಯಾರ್ಥಿಗಳ ಮುಖಂಡರಾದ ಮಲ್ಲಿಕಾರ್ಜುನ್‌ ಹಾಗೂ ಮಾಜಿ ಉಪ ಮೇಯರ್‌ ಪುಟ್ಟರಾಜು ಹೇಳಿದ್ದಾರೆ. ‘ಈ ವಿಚಾರವಾಗಿ ನಾವು ಸದ್ಯದಲ್ಲೇ ಸರ್ಕಾರಕ್ಕೆ ಮನವಿ ಸಲ್ಲಿಸಿ ಕಮಾನು ದ್ವಾರದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುತ್ತೇವೆ’ ಎಂದು ಅವರು ತಿಳಿಸಿದ್ದಾರೆ.