ಕೆ.ಆರ್‌. ನಗರ (ನ.13):  ನಿಯಂತ್ರಣ ತಪ್ಪಿದ ಪೊಲೀಸ್‌ ಜೀಪ್‌ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯ ನಿರತರಾಗಿದ್ದ ಪೋಲಿಸರಿಬ್ಬರು ಸ್ಥಳದಲ್ಲಿಯೆ ಮೃತಪಟ್ಟಘಟನೆ ಗುರುವಾರ ಬೆಳಗಿನ ಜಾವ ತಾಲೂಕಿನ ಸಿದ್ದನಕೊಪ್ಪಲು ಗೇಟ್‌ ಬಳಿ ಜರುಗಿದೆ.

ಕೆ.ಆರ್‌. ನಗರ ಠಾಣೆಯ ಎಎಸ್‌ಐ ಮೂರ್ತಿ (57) ಮತ್ತು ಮುಖ್ಯಪೇದೆ ಶಾಂತಕುಮಾರ್‌(44) ಮೃತಪಟ್ಟವರು. ರಾತ್ರಿ ಪಾಳಿ ಕೆಲಸ ಮುಗಿಸಿ ಚುಂಚನಕಟ್ಟೆಯಿಂದ ವಾಪಸಾಗುತ್ತಿದ್ದಾಗ ತಾಲೂಕಿನ ಹೆಬ್ಬಾಳು ಬಳಿಯ ಸಿದ್ದನಕೊಪ್ಪಲು ಗೇಟ್‌ ಬಳಿ ಈ ದುರ್ಘಟನೆ ಸಂಭವಿಸಿದೆ.

ಘಟನೆ ನಡೆದ ಕೂಡಲೇ ಸಾರ್ವಜನಿಕರು ಪೊಲೀಸ್‌ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದ ಕೂಡಲೇ ಸಿಪಿಐ ಪಿ.ಕೆ. ರಾಜು, ಎಸ್‌ಐ ವಿ. ಚೇತನ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದರು. ನಂತರ ಶವಗಳನ್ನು ಕೆ.ಆರ್‌. ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಶವ ಪರೀಕ್ಷೆ ನಡೆಸಿ, ಕೆ.ಆರ್‌. ನಗರದ ಪೊಲೀಸ್‌ ಠಾಣೆಯ ಮುಂದೆ ಸಾರ್ವಜನಿಕ ದರ್ಶನಕ್ಕೆ ಇರಿಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.

ಐಜಿ ವಿಫುಲ್‌ಕುಮಾರ್‌, ಎಸ್ಪಿ ಸಿ.ಬಿ. ರಿಷ್ಯಂತ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶಿಕುಮಾರ್‌, ಡಿವೈಎಸ್‌ಪಿ ಡಾ.ಎ.ಆರ್‌. ಸುಮಿತ್‌ ಆಸ್ಪತ್ರೆ ಮತ್ತು ಪೊಲೀಸ್‌ ಠಾಣೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ದುಬಾರಿ ಬಡ್ಡಿ ಆಸೆ: ಚಿಟ್‌ಫಂಡ್‌ನಿಂದ ನೂರಾರು ಜನರಿಗೆ ಪಂಗನಾಮ..!

ಎಎಸ್‌ಐ ಮೂರ್ತಿ ಚಾಮರಾಜನಗರ ಜಿಲ್ಲೆಯ ನವಿಲೂರು ಗ್ರಾಮದವರಾಗಿದ್ದು, ಅವರ ಪತ್ನಿ ಮೀನಾಕ್ಷಿ ಟಿ. ನರಸೀಪುರ ತಾಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವೈದ್ಯರಾಗಿರುವ ಪುತ್ರ ಡಾ. ಸಚಿನ್‌ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮುಖ್ಯಪೇದೆ ಶಾಂತಕುಮಾರ್‌ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದವರಾಗಿದ್ದು, ಅವರಿಗೆ ಪತ್ನಿ ವಿನುತಾ, ಪುತ್ರ 15 ವರ್ಷದ ಪ್ರೀತಮ್‌ ಮತ್ತು 12 ವರ್ಷದ ಮಗಳು ಕೃತಿಕಾ ಇದ್ದಾರೆ.

ಶಾಸಕರ ಭೇಟಿ: ಕೆ.ಆರ್‌. ನಗರ ಪೊಲೀಸ್‌ ಠಾಣೆಗೆ ಶಾಸಕ ಸಾ.ರಾ. ಮಹೇಶ್‌ ಭೇಟಿ ನೀಡಿ ಅಪಘಾತದಲ್ಲಿ ಮೃತಪಟ್ಟಪೊಲೀಸರ ಅಂತಿಮ ದರ್ಶನ ಪಡೆದು ಕುಟುಂಬವರಿಗೆ ಸಾಂತ್ವನ ಹೇಳಿದರು. ಜತೆಗೆ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಮುಗಿಲು ಮುಟ್ಟಿದ ಆಕ್ರಂದನ- ಸಾರ್ವಜನಿಕ ಆಸ್ಪತ್ರೆ ಮತ್ತು ಪೊಲೀಸ್‌ ಠಾಣೆಯ ಬಳಿ ಎಎಸ್‌ಐ ಮೂರ್ತಿ ಮತ್ತು ಮುಖ್ಯಪೇದೆ ಶಾಂತಕುಮಾರ್‌ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.