ಬಸವರಾಜ ಹಿರೇಮಠ

ಧಾರವಾಡ[ಜ.13]: ಇಷ್ಟು ದಿನಗಳ ಕಾಲ ಸಾಮಾನ್ಯ ಮೀನುಗಳ ಕೃಷಿ ಮಾಡುತ್ತಿದ್ದ ಒಳನಾಡು ಹಾಗೂ ಹಿನ್ನೀರು ಜಲಸಂಪನ್ಮೂಲಗಳ ಮೀನು ಕೃಷಿಕರಿಗೆ ಇದೀಗ ಮೀನುಗಾರಿಕೆ ಇಲಾಖೆಯು ಹೆಚ್ಚಿನ ಆದಾಯ ತಂದುಕೊಡುವ ನಿಟ್ಟಿನಲ್ಲಿ ಸಿಹಿ ನೀರು ಸಿಗಡಿ ಮೀನು ಕೃಷಿ ಯೋಜನೆ ಜಾರಿ ಮಾಡಿದೆ.

ಈ ಮೊದಲು ಅರೆ ತೀವ್ರ ಮೀನು ಕೃಷಿಯಡಿ ಕಾಟ್ಲ, ರೋಹು, ಮೃಗಾಲ್‌ ಮತ್ತು ಸಾಮಾನ್ಯ ಗೆಂಡೆ ಮೀನಿನ ತಳಿಗಳನ್ನು ಮಾತ್ರ ಧಾರವಾಡ ಜಿಲ್ಲೆ ಸೇರಿದಂತೆ ಒಳನಾಡು ಹಾಗೂ ಹಿನ್ನೀರು ಜಲಸಂಪನ್ಮೂಲಗಳಲ್ಲಿ ಕೃಷಿ ಮಾಡಲಾಗುತ್ತಿತ್ತು. 2019-20ನೇ ಸಾಲಿನ ಆಯವ್ಯಯದಲ್ಲಿ ಮೀನು ಕೃಷಿಗೆ ಉತ್ತೇಜನ ನೀಡಲು ಸಿಹಿ ನೀರು ಸಿಗಡಿ ಮೀನು ಸಹ ಸಾಕಲು ತೀರ್ಮಾನಿಸಲಾಗಿದ್ದು, ಇದೀಗ ಈ ಯೋಜನೆ ಜಾರಿಗೆ ತರಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಸಕ್ತ ಸಾಲಿನಲ್ಲಿ ರಾಜ್ಯದ 400 ಘಟಕಗಳಿಗೆ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು 2 ಕೋಟಿ ಅನುದಾನ ಸಹ ಒದಗಿಸಲಾಗಿದೆ. ಈ ಪೈಕಿ ಧಾರವಾಡ ಜಿಲ್ಲೆಗೆ ಆರು ಘಟಕಗಳಿಗೆ  3 ಲಕ್ಷ ಅನುದಾನ ನೀಡಲಾಗಿದೆ ಎಂದು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ. 50 ರಷ್ಟು ಸಹಾಯಧನ

ಒಳನಾಡು ಹಾಗೂ ಹಿನ್ನೀರಿನಲ್ಲಿ ಮೀನು ಕೃಷಿಗೆ ಅವಕಾಶವಿದೆ. ಆದರೆ, ಇಷ್ಟು ದಿನಗಳ ಕಾಲ ಈ ಸಂಪನ್ಮೂಲದಲ್ಲಿ ಸಿಗಡಿ ಮೀನು ಮರಿ ಹಾಗೂ ಆಹಾರಕ್ಕೆ ಹೆಚ್ಚಿನ ಬಂಡವಾಳ ಬೇಕಾದ ಕಾರಣ ಈ ಕೃಷಿಯನ್ನು ಕೈಗೊಳ್ಳಲು ಕೃಷಿಕರು ಮುಂದೆ ಬಂದಿರಲಿಲ್ಲ. ಆದ್ದರಿಂದ ಈ ಕೃಷಿ ಕೈಗೊಳ್ಳಲು ಪ್ರೋತ್ಸಾಹಿಸಲು ನೂತನ ಯೋಜನೆ ಜಾರಿಗೆ ಮಾಡಲಾಗಿದೆ. ಸ್ವಂತ ಕೊಳಗಳು ಸೇರಿದಂತೆ ವಿವಿಧ ಇಲಾಖೆ, ಗ್ರಾಮ ಪಂಚಾಯ್ತಿ ಕೆರೆಗಳು, ಹಿನ್ನೀರು ಪ್ರದೇಶಗಳಲ್ಲಿ ಈ ಕೃಷಿ ಮಾಡಬಹುದು ಎಂದು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಆಧೀನ ಕಾರ್ಯದರ್ಶಿ ರಶ್ಮಿ ಶ್ರೀಕಾಂತ ಗಜರೆ ಆದೇಶ ಹೊರಡಿಸಿದ್ದಾರೆ.

ಈ ಯೋಜನೆಯಂತೆ ಕನಿಷ್ಠ ಒಂದು ಎಕರೆ ಕೆರೆ ಹೊಂದಿರುವ ರೈತರೂ ಸಿಗಡಿ ಮೀನು ಸಾಕಲು ಅವಕಾಶವಿದೆ. 10 ಸಾವಿರ ಸಿಗಡಿ ಮೀನುಗಳನ್ನು ಹಾಗೂ ಒಂದು ಟನ್‌ ಕೃತಕ ಆಹಾರ ಉಪಯೋಗಿಸಲು ಅವಕಾಶ ಮಾಡಿಕೊಡಲಾಗಿದೆ. 10 ಸಾವಿರ ಬಲಿತ ಸಿಗಡಿ ಮೀನುಗಳಿಗೆ . 4ರಂತೆ ಒಟ್ಟು . 40 ಸಾವಿರ ಹಾಗೂ ಒಂದು ಟನ್‌ ಆಹಾರಕ್ಕೆ . 60 ಸಾವಿರ ವೆಚ್ಚವಾಗುತ್ತದೆ. ಒಟ್ಟು 1 ಲಕ್ಷ ವೆಚ್ಚದಲ್ಲಿ ಶೇ. 50ರಷ್ಟು ಸಹಾಯಧನ ಒದಗಿಸಲಾಗುವುದು. ಸಿಗಡಿ ಮೀನು ಕೃಷಿಯನ್ನು ಸಣ್ಣ ಮತ್ತು ಮಧ್ಯಮ ವರ್ಗದ ಕೆರೆಗಳಲ್ಲಿ ಯಶಸ್ವಿಯಾಗಿ ಕೃಷಿ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಹಿನ್ನೀರಿನಲ್ಲಿ ಪಂಜರ, ತೀವ್ರ ಮೀನು ಕೃಷಿಗೆ ಪ್ರೋತ್ಸಾಹ

ಹಿನ್ನೀರಿನಲ್ಲಿ ಸಿಗಡಿ ಮೀನು ಕೃಷಿ ಅಲ್ಲದೇ ಪಂಜರ ಕೃಷಿ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಪಂಜರದಲ್ಲಿ 2500 ದೊಡ್ಡ ಗಾತ್ರದ ಮೀನುಮರಿಗಳ ಬಿತ್ತನೆಗೆ ಅವಕಾಶ ಕಲ್ಪಿಸಿದ್ದು, ಈ ಮೀನುಗಳಿಗೆ  40 ರಂತೆ 1 ಲಕ್ಷ  ವೆಚ್ಚವಾಗುತ್ತದೆ. ಪ್ರತಿ ಫಲಾನುಭವಿಗೆ 2 ಪಂಜರಗಳಲ್ಲಿ ಮೀನು ಕೃಷಿ ಕೈಗೊಳ್ಳಲು ಗರಿಷ್ಠ  1 ಲಕ್ಷ ಸಹಾಯಧನ ಒದಗಿಸಲಾಗುವುದು. ಇದೇ ರೀತಿ ಹಿನ್ನೀರಿನಲ್ಲಿ ತೀವ್ರ ಮೀನು ಕೃಷಿ ಕೈಗೊಳ್ಳಲು ಸಹ ಅವಕಾಶ ಒದಗಿಸಲಾಗಿದ್ದು ಇಲ್ಲೂ ಸಹ ಶೇ. 50 ರಷ್ಟು ಸಹಾಯಧನವಿರುತ್ತದೆ.

ಒಟ್ಟಾರೆ ಪ್ರಸಕ್ತ ವರ್ಷ ರಾಜ್ಯದಲ್ಲಿ ಅದರಲ್ಲೂ ಧಾರವಾಡ ಸೇರಿದಂತೆ ಹೆಚ್ಚು ಒಳನಾಡು ಹಾಗೂ ಹಿನ್ನೀರು ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು ಕೆರೆಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಸಿಹಿನೀರು ಸಿಗಡಿ ಮೀನಿಗೆ ದೇಶಿಯ ಮಾರುಕಟ್ಟೆ ಜತೆಗೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ ಇರುವ ಕಾರಣ ಮೀನು ಕೃಷಿಕರು ಉತ್ತಮ ಲಾಭ ಮಾಡಿಕೊಳ್ಳಬಹುದು ಎಂಬ ಅಂದಾಜು ಹೊಂದಲಾಗಿದೆ.

ಬಹಳ ದಿನಗಳಿಂದ ಮೀನು ಕೃಷಿಕರು ನಿರೀಕ್ಷೆ ಇಟ್ಟಂತೆ ಇದೀಗ ಒಳನಾಡುಗಳಲ್ಲಿ ಸಿಗಡಿ ಮೀನು ಕೃಷಿ ಮಾಡಲು ಶೇ. 50ರಷ್ಟುಸಹಾಯಧನ ನೀಡಲು ಅನುದಾನ ಬಿಡುಗಡೆ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಆರು ಘಟಕಗಳಿಗೆ ಅವಕಾಶವಿದ್ದು, ಅರ್ಜಿ ಆಹ್ವಾನಿಸಿದ್ದು ಆಸಕ್ತ ರೈತರು ಅರ್ಜಿ ಸಲ್ಲಿಸಿ ಸಿಗಡಿ ಮೀನು ಕೃಷಿ ಮಾಡಬಹುದು ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಇ.ಎಸ್‌. ಪಠಾಣ್‌ ಅವರು ತಿಳಿಸಿದ್ದಾರೆ.