ಶ್ರೀ ಕೃಷ್ಣ ದೇವರಾಯ ಕಾಲವಾದ ದಿನವನ್ನು ತಿಳಿಸುವ ಸ್ಪಷ್ಟವಾದ ಶಾಸನ ಪತ್ತೆಯಾಗಿದೆ. ಕ್ರಿಸ್ತಶಕ 1529ರ ಅಕ್ಟೋಬರ್‌ 17ರಂದು ಶ್ರೀಕೃಷ್ಣದೇವರಾಯ ಕಾಲ​ವಾ​ದರು ಎಂಬ ಉಲ್ಲೇಖ ಈ ಶಾಸ​ನ​ದ​ಲ್ಲಿ​ದೆ.

ತುಮಕೂರು (ಫೆ.25): ಸಮೀಪದ ಹೊನ್ನೇನಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಕಾಲಮಾನ​ವನ್ನು ನಿಖರವಾಗಿ ಸ್ಪಷ್ಟಪಡಿಸುವ ಶಾಸನವೊಂದು ಪತ್ತೆಯಾಗಿದೆ. ಕ್ರಿಸ್ತಶಕ 1529ರ ಅಕ್ಟೋಬರ್‌ 17ರಂದು ಶ್ರೀಕೃಷ್ಣದೇವರಾಯ ಕಾಲ​ವಾ​ದರು ಎಂಬ ಉಲ್ಲೇಖ ಈ ಶಾಸ​ನ​ದ​ಲ್ಲಿ​ದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ರಿಸ್ತ ಶಕ 1336ರಲ್ಲಿ ಹಕ್ಕ, ಬುಕ್ಕರಿಂದ ಆರಂಭವಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ಸಾವಿನ ಕುರಿತಾದ ನಿಖರತೆ ಈವರೆಗೂ ಇತಿಹಾಸಕಾರರಿಗೆ ಲಭ್ಯವಾಗಿರಲಿಲ್ಲ. ಈವರೆಗೆ ಕೃಷ್ಣದೇವರಾಯ ಮರಣ ಕಾಲವನ್ನು 1529ರ ಅಕ್ಟೋಬರ್‌ ಅಥವಾ ನವೆಂಬರ್‌ ಎಂದು ಅಂದಾಜಿಸಲಾಗಿತ್ತು.

ಆದರೆ ಹೊನ್ನೇ​ನ​ಹ​ಳ್ಳಿ​ಯಲ್ಲಿ ಸಿಕ್ಕಿ​ರುವ ಶಾಸನದಲ್ಲಿ ಶಾಲಿವಾಹನ ಶಕ ವಿರೋಧಿ ನಾಮ ಸಂವತ್ಸರ 1452ರ ಕಾರ್ತಿಕ ಶುದ್ದ15 ಎಂದರೆ ಕ್ರಿಸ್ತಶಕ 1529ರ ಅಕ್ಟೋಬರ್‌ 17ರಂದು ಶ್ರೀಕೃಷ್ಣದೇವರಾಯ ಅಸ್ತಂಗ​ತ​ರಾ​ಗಿ​ದ್ದಾರೆ ಎಂದು ನಮೂದಿಸಿದೆ. 

ಮಂಗಳೂರು: ಅಪೂರ್ವ ತುಳು ಶಾಸನ ಪತ್ತೆ

ಈ ಸಂಬಂಧ ಈ ಶಾಸ​ನ​ವ​ನ್ನು ತುಮಕೂರು ಸೀಮೆಯ ತಿಮ್ಮಣ್ಣ ನಾಯಕರು ಗ್ರಾಮ​ವೊಂದನ್ನು ತುಮಕೂರು ವೀರಪ್ರಸನ್ನ ಹನುಮಂತ ದೇವರ ಪೂಜೆಗಾಗಿ ಧಾರೆ ಎರೆದು ಕೊಟ್ಟಿರುವ ಉಲ್ಲೇ​ಖ​ವಿ​ದೆ. 15 ಸಾಲುಗಳನ್ನು ಒಳಗೊಂಡಿರುವ ಶಾಸನದಲ್ಲಿ 12 ಸಾಲು​ಗ​ಳನ್ನು ಸ್ಪಷ್ಟ​ವಾಗಿ ಓದ​ಬ​ಹು​ದಾ​ಗಿ​ದೆ. ಶಾಸನದ ಮೇಲ್ಭಾಗದಲ್ಲಿ ಶಂಖ, ಚಕ್ರಗಳ ನಡುವೆ ಆಂಜನೇಯನ ಉಬ್ಬು ಚಿತ್ರವಿದ್ದು, ಸೂರ್ಯ, ಚಂದ್ರರ ಗುರುತುಗಳು ಇವೆ. ಶಿಲೆಯ ಹಿಂಭಾಗದಲ್ಲಿ ಮಾರುತಿಯ ಚಿತ್ರವಿದೆ. ಬಾಲದಲ್ಲಿ ಗಂಟೆಯಿದೆ.