ಬೀದರ್(ಮಾ.05): ಜಿಲ್ಲೆಯ ಬಸವ ಕಲ್ಯಾಣದ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ‌ ನೀಡಿರುವ ಯಡಿಯೂರಪ್ಪ ಅವರ ಸರ್ಕಾರ‌ ನುಡಿದಂತೆ‌ ನಡೆದಿದೆ. ಅವರಿಗೆ ದೇವರು ಆಯಷ್ಯ, ಆರೋಗ್ಯ ಕೊಡಲಿ. ಹಿಂದಿನ ಸರ್ಕಾರಗಳು ಕೇವಲ ಭರವಸೆಗಳು ಕೊಟ್ಟು ಘೋಷಣೆ ಮಾಡಿದ್ದರೇ ವಿನಃ ಆಚರಣೆಗೆ ತಂದಿರಲಿಲ್ಲ, ಘೋಷಣೆ ಮಾಡಿ ಆಚರಣೆಗೆ ತಂದಿರುವ ಶ್ರೇಯಸ್ಸು ಯಡಿಯೂರಪ್ಪಗೆ ಸಲ್ಲುತ್ತದೆ ಎಂದು ಅನುಭವ ಮಂಟಪ‌ ಅಧ್ಯಕ್ಷ ಶ್ರೀ‌ ಬಸವಲಿಂಗ ಪಟ್ಟದೇವರು ಹರ್ಷ ವ್ಯಕ್ತಪಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಲ್ಯಾಣ ನಾಡಿಗೆ ಬಂದಾಗ ಘೋಷಣೆ ಮಾಡಿ‌ದ್ದು ಬಹಳಷ್ಟು ಖುಷಿ ತಂದಿತ್ತು. ಸಾಸಿವೆ ಮೇಲೆ ಸಾಗರ ಹರಿದಷ್ಟು ಖುಷಿಯಾಗಿದೆ. ಗೋರೂರು ಚನ್ನಬಸಪ್ಪ ಅವರ ವರದಿ ಪ್ರಕಾರ ಸಮಿತಿ‌ ರಚನೆಯಾಗಿತ್ತು. ಹಿಂದಿನ ಸರ್ಕಾರಗಳು ಅನುಭವ ಮಂಟಪಕ್ಕೆ ನಿರ್ಲಕ್ಷ್ಯ ತೋರಿದ್ದರು. ಪ್ರಾಧಿಕಾರ ಆದ ಮೇಲೆ ಯಡಿಯೂರಪ್ಪ ಪ್ರಥಮ ಮುಖ್ಯಮಂತ್ರಿ ಇದ್ದಾಗ ಕೂಡ‌ ಅವರೇ ಹಣ ಬಿಡುಗಡೆ ‌ಮಾಡಿದ್ದರು. ಅವರು 40 ಕೋಟಿ ಬಿಡುಗಡೆ ಮಾಡಿ ಶರಣರ ಸ್ಮಾರಕಗಳು ಉಳಿಸಿರುವಂತ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

ಗೋರೂರು ಚನ್ನಬಸಪ್ಪ ವರದಿ ರಚನೆಯಾದ ಬಳಿಕ ಬಹಳಷ್ಟು ಬಾರಿ ವಿಧಾನಸೌಧಕ್ಕೆ ಹೋದರೂ ನಿರ್ಲಕ್ಷ್ಯ ತೋರಿದ್ದರು. ಆದರೆ ಯಡಿಯೂರಪ್ಪ ಮಾತ್ರ ನುಡಿದಂತೆ ನಡೆದು ಅನುಭವ ಮಂಟಪದ ನಿರ್ಮಾಣಕ್ಕೆ 500 ಕೋಟಿ ಘೋಷಿಸಿದ್ದಾರೆ. ಹೀಗಾಗಿ ಅವರಿಗೆ ನಾಡಿನ ಬಸವ ಭಕ್ತರ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ನುಡಿದಿದ್ದಾರೆ.