ಪ್ಲಾಸ್ಟಿಕ್ ಬಳಸಿದ್ರೆ ಅಂಗಡಿಗೆ ಬೀಗ ಬೀಳುತ್ತೆ ಹುಷಾರ್..!
ಸರ್ಕಾರದ ನಿಯಮ ಉಲ್ಲಂಘಿಸಿ ಬಳಸಿದರೆ, ಕಾನೂನು ರೀತಿ ಕ್ರಮ ಕೈಗೊಳ್ಳುವ ಜೊತೆಗೆ ದಂಡ ವಿಧಿಸಿ ಅಂತಹ ಅಂಗಡಿಗಳಿಗೆ ಬೀಗ ಜಡಿಯಲಾಗುವುದು ಎಂದು ನಗರಸಭೆ ಪೌರಾಯುಕ್ತ ಎಂ.ಚಂದ್ರಪ್ಪ ಹೇಳಿದರು. ಪ್ಲಾಸ್ಟಿಕ್ ಬದಲು ಬಾಳೆಎಲೆ ಇಲ್ಲವೇ ಅಡಿಕೆ ಬಟ್ಟಲು ಮತ್ತು ತಟ್ಟೆಗಳನ್ನು ಬಳಸಬೇಕು.
ಚಿತ್ರದುರ್ಗ(ಆ.31): ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳು ಯಾರೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಬಳಸುವಂತಿಲ್ಲ. ಎಲ್ಲಿಯಾದರೂ ಸರ್ಕಾರದ ನಿಯಮ ಉಲ್ಲಂಘಿಸಿ ಬಳಸಿದರೆ, ಕಾನೂನು ರೀತಿ ಕ್ರಮ ಕೈಗೊಳ್ಳುವ ಜೊತೆಗೆ ದಂಡ ವಿಧಿಸಿ ಅಂತಹ ಅಂಗಡಿಗಳಿಗೆ ಬೀಗ ಜಡಿಯಲಾಗುವುದು ಎಂದು ನಗರಸಭೆ ಪೌರಾಯುಕ್ತ ಎಂ.ಚಂದ್ರಪ್ಪ ಹೇಳಿದರು.
ನಗರಸಭೆಯಲ್ಲಿ ನಡೆದ ಬೀದಿ ಬದಿ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿ, ಪರಿಸರ ಹಾಗೂ ಎಲ್ಲ ಜೀವರಾಶಿಗಳ ಆರೋಗ್ಯಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವಂತೆ ಸರ್ಕಾರ ಆದೇಶಿಸಿರುವುದರಿಂದ ಎಲ್ಲರೂ ಪ್ಲಾಸ್ಟಿಕ್ ಬಳಕೆ ಬಿಡಬೇಕು ಎಂದರು.
ಗೂಳಿಹಟ್ಟಿ ಶೇಖರ್ ಆಡಿಯೋ ಸ್ಫೋಟ; ಸಿಎಂ ಪುತ್ರನ ವಿರುದ್ಧ ಗಂಭೀರ ಆರೋಪ!
ರಸ್ತೆ ಬದಿಯಲ್ಲಿ ಪಾನಿಪೂರಿ, ಎಗ್‌ರೈಸ್, ಕಬಾಬ್, ಚಿಕನ್ ಬಿರಿಯಾನಿ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿರುವವರು ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಯಥೇಚ್ಚವಾಗಿ ಬಳಸುತ್ತಿರುವುದು ಸರಿಯಲ್ಲ. ಹಾಗೇಯೇ ಕೆಲವು ರಸ್ತೆ ಬದಿ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಶೀಟ್‌ಗಳಲ್ಲಿ ಇಡ್ಲಿ ಬೇಯಿಸುವುದರಿಂದ ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕ ಅಂಶ ಕರಗಿ ಇಡ್ಲಿ ಜೊತೆ ಬೆರೆಯುವುದರಿಂದ ಅದನ್ನು ಸೇವಿಸುವವರು ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳಿವೆ. ಅದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ದೊಡ್ಡ ಆಂದೋಲನ ಆರಂಭಿಸಿದೆ ಎಂದರು.
ಬಾಳೆ ಎಲೆ, ಅಥವಾ ಅಡಿಕೆ ಹಾಳೆ ಬಟ್ಟಲು:
ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳು ಬಾಳೆಎಲೆ ಇಲ್ಲವೇ ಅಡಿಕೆ ಬಟ್ಟಲು ಮತ್ತು ತಟ್ಟೆಗಳನ್ನು ಬಳಸಬೇಕು. ಇಲ್ಲವೇ ಮನೆಯಿಂದಲೇ ಸ್ಟೀಲ್ ಬಾಕ್ಸ್‌ಗಳನ್ನು ತೆಗೆದುಕೊಂಡು ಹೋಗಿ ಅಗತ್ಯವಿರುವ ತಿಂಡಿ ತಿನಿಸುಗಳನ್ನು ತರಬೇಕು ಎಂದು ಸಾರ್ವಜನಿರಲ್ಲೂ ಮನವಿ ಮಾಡಿದರು.
ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು ಸಾವಿರಾರು ವರ್ಷಗಳು ಬೇಕಾಗುತ್ತದೆ. ಬಾಟಲ್ ನೀರನ್ನು ಕುಡಿಯುವುದು ಕೂಡಾ ಆರೋಗ್ಯಕ್ಕೆ ಹಿತವಲ್ಲ. ಬೀದಿ ಬದಿ ವ್ಯಾಪಾರ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವುದರಿಂದ ಸಂಚಾರ ದಟ್ಟಣೆಯಾಗುವುದರ ಜೊತೆಗೆ ಅಪಘಾತಗಳು ಜಾಸ್ತಿಯಾಗುತ್ತಿದೆ. ಕೆಲವೊಂದು ಮಾರ್ಪಾಡುಗಳ ಅವಶ್ಯಕತೆಯಿರುವುದರಿಂದ ದಿನ ವ್ಯಾಪಾರ ಮಾಡಲು ಅಲ್ಲಲ್ಲಿ ವ್ಯಾಪಾರ ವಲಯಗಳನ್ನು ಗುರುತಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳು ನಗರಸಭೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಪರಿಸರ ಎಂಜಿನಿಯರ್ ಜಾಫರ್, ಹೆಲ್ತ್ ಇನ್‌ಸ್ಪೆಕ್ಟರ್‌ಗಳಾದ ಸರಳ, ಭಾರತಿ, ಬಾಬುರೆಡ್ಡಿ, ನಾಗರಾಜ್, ಬಸವರಾಜು, ಕೌಶಲ್ಯಾಭಿವೃದ್ಧಿ ಇಲಾಖೆಯ ಸೌಮ್ಯ, ಸಮುದಾಯ ಸಂಘಟನಾಧಿಕಾರಿ ಬಿ.ಆರ್.ಮಂಜುಳ ಇದ್ದರು.