ಬೆಂಗಳೂರು [ಆ.13]:  ಕಾಮಗಾರಿ ಆರಂಭವಾಗಿ ಬರೋಬ್ಬರಿ ಎರಡು ವರ್ಷ ಕಳೆದರೂ ಯೋಜನೆಯಲ್ಲಿನ ಬದಲಾವಣೆ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಶಿವಾನಂದ ವೃತ್ತದಲ್ಲಿ ಉಕ್ಕಿನ ಮೇಲ್ಸೇತುವೆ ಸದ್ಯಕ್ಕೆ ಮುಕ್ತಾಯಗೊಳ್ಳುವ ಲಕ್ಷಣ ಕಾಣುತ್ತಿಲ್ಲ.

ಶಿವಾನಂದ ವೃತ್ತ ಮೇಲ್ಸೇತುವೆ ಕಾಮಗಾರಿಗೆ 2017ರ ಜೂನ್‌ನಲ್ಲಿ ಚಾಲನೆ ನೀಡಿ 18 ತಿಂಗಳಲ್ಲಿ ಪೂರ್ಣಗೊಳ್ಳಬೇಕೆಂದು ಕರಾರು ಮಾಡಿಲಾಗಿತ್ತು. ಕಾಮಗಾರಿ ಆರಂಭವಾಗಿ ಬರೋಬ್ಬರಿ 25 ತಿಂಗಳು ಕಳೆದಿವೆ. ಈವರೆಗೆ ಶೇ.40 ಕಾಮಗಾರಿ ಪೂರ್ಣಗೊಂಡಿದ್ದು, ಯೋಜನೆ ಪೂರ್ಣಗೊಳ್ಳಲು ಇನ್ನೂ 6ರಿಂದ 8 ತಿಂಗಳು ಬೇಕಾಗಲಿದೆ. ಅಲ್ಲಿಯವರೆಗೆ ಆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಪರದಾಡಬೇಕಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೇಲ್ಸೇತುವೆ ಉದ್ದ ಹೆಚ್ಚಳ:  ಮೂಲ ಯೋಜನೆಯಲ್ಲಿ ಮೇಲ್ಸೇತುವೆ ಉದ್ದವನ್ನು 326 ಮೀ.ಗೆ ನಿಗದಿ ಮಾಡಲಾಗಿತ್ತು. ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷದ ನಂತರ ಯೋಜನೆಯಲ್ಲಿ ಬದಲಾವಣೆ ತರಲಾಯಿತು. ರೇಸ್‌ಕೋರ್ಸ್‌ ರಸ್ತೆ ಕಡೆಯಲ್ಲಿ ಮೇಲ್ಸೇತುವೆ ಉದ್ದವನ್ನು ಹೆಚ್ಚಳ ಮಾಡಲಾಯಿತು. ಇದರಿಂದ ಮೇಲ್ಸೇತುವೆ ಉದ್ದ 493 ಮೀ.ಗೆ ಏರಿಕೆಯಾಯಿತು. ಪರಿಣಾಮ ಮೇಲ್ಸೇತುವೆ ಕಂಬಗಳ ಸಂಖ್ಯೆ 6ರಿಂದ 16ಕ್ಕೆ ಹೆಚ್ಚಳವಾಗಿ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗುವಂತಾಗಿದೆ.

ಕಂಬಗಳ ನಿರ್ಮಾಣ, ಮೇಲ್ಸೇತುವೆ ಉದ್ದದಲ್ಲಿ ಹೆಚ್ಚಳ ಮಾಡಿದ್ದರಿಂದಾಗಿ ಭೂಸ್ವಾದೀನದ ಮೊತ್ತ ಅಧಿಕಗೊಂಡಿದ್ದರಿಂದ ಯೋಜನೆಯ ವೆಚ್ಚವು .60 ಕೋಟಿಗೆ ಹೆಚ್ಚಳವಾಗಿದೆ.

ಮತ್ತೊಮ್ಮೆ ರಸ್ತೆ ಮಾರ್ಗ ಬಂದ್‌ ಸಾಧ್ಯತೆ:

ಕಾಮಗಾರಿ ರಸ್ತೆಯಲ್ಲಿನ ಜಲಮಂಡಳಿ ಮತ್ತು ವಿದ್ಯುತ್‌ ಸಂಪರ್ಕಗಳನ್ನು ಸ್ಥಳಾಂತರಿಸುವುದು ಗುತ್ತಿಗೆದಾರರಿಗೆ ತಲೆನೋವಾಗಿದೆ. ಮೊದಲ ಹಂತದಲ್ಲಿ ಜಲಮಂಡಳಿಯ 2 ಕೊಳವೆ ಮಾರ್ಗಗಳನ್ನು ಸ್ಥಳಾಂತರಿಸಲಾಗಿದೆ. ಇನ್ನು ಒಂದು ಮಾರ್ಗದ ಕೊಳವೆ ಮಾರ್ಗ ಸ್ಥಳಾಂತರ ಮಾಡಬೇಕಿದೆ. ಹೀಗಾಗಿ ಮತ್ತೊಮ್ಮೆ ಆ ರಸ್ತೆಯನ್ನು ಬಂದ್‌ ಮಾಡಬೇಕಾಗುತ್ತದೆ. ಆಗ ಶಿವಾನಂದ ವೃತ್ತ ಸುತ್ತಲಿನ ಮಾರ್ಗವಷ್ಟೇ ಅಲ್ಲದೆ, ಮಲ್ಲೇಶ್ವರ, ಆನಂದರಾವ್‌ ವೃತ್ತ ಸೇರಿ ಇನ್ನಿತರ ಕಡೆಗಳಲ್ಲೂ ಸಂಚಾರ ದಟ್ಟಣೆ ಹೆಚ್ಚಲಿದೆ.

ಸ್ಟೀಲ್‌ ಬ್ರಿಜ್‌ ಯೋಜನೆ ವಿವರ

*ರೇಸ್‌ಕೋರ್ಸ್‌ರಸ್ತೆ, ಕುಮಾರಕೃಪಾ ರಸ್ತೆ ಹಾಗೂ ಶೇಷಾದ್ರಿಪುರ ಮಾರ್ಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ

*ಯೋಜನಾ ಮೊತ್ತ .60 ಕೋಟಿ

*ಕಾರ್ಯಾದೇಶ ಜೂನ್‌ 30 2017

*ಕಾಮಗಾರಿ ಅವಧಿ 18 ತಿಂಗಳು 2019ರ ಮಾಚ್‌ರ್‍ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿತ್ತು

*493 ಮೀಟರ್‌ ಉದ್ದ, 16 ಮೀಟರ್‌ ಅಗಲದ ಮೇಲ್ಸೇತುವೆ

*ನಾಲ್ಕು ಪಥದ ರಸ್ತೆ ನಿರ್ಮಾಣ