ಶಿವಮೊಗ್ಗ [ಅ.02]: ನಗರದ ಜನತೆಗೆ ತೀವ್ರ ಸಂಕಷ್ಟ ತಂದೊಡ್ಡಿದ್ದ ಆಸ್ತಿ ನೊಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ವ್ಯವಸ್ಥೆಯನ್ನು ಸರ್ಕಾರ ಹಿಂತೆಗೆದುಕೊಂಡಿದೆ. ಈ ಸಂಬಂಧ ಸೆ. 30 ರಂದು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕಂದಾಯ ಇಲಾಖೆ ಈ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೂ ಆಸ್ತಿ ನೊಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಲಾಗಿದೆ. ಆದರೆ ಪ್ರಾಪರ್ಟಿ ಮಾಡಿಸಿಕೊಳ್ಳುವ ಪ್ರಕ್ರಿಯೆ ಎಂದಿನಂತೆ ಮುಂದುವರೆಯುತ್ತದೆ ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ.

ಆಸ್ತಿ ನೊಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡಿರುವುದರಿಂದ ಉಂಟಾಗುತ್ತಿದ್ದ ಸಮಸ್ಯೆ, ಪ್ರಾಪರ್ಟಿ ಕಾರ್ಡು ಮಾಡಿಸುವಲ್ಲಿ ಆಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಸಾರ್ವಜನಿಕರು ಸರ್ಕಾರದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು ವ್ಯವಸ್ಥೆಯನ್ನು ಸರಿಪಡಿಸುವವರೆಗೆ ಆಸ್ತಿ ನೊಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವ ವ್ಯವಸ್ಥೆಗೆ ವಿನಾಯಿತಿ ನೀಡಿ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದ್ದರು. ಇದರಂತೆ ಕಂದಾಯ ಇಲಾಖೆ ಈ ಸಂಬಂಧ ಸೆ. 30 ರಂದು ಆದೇಶ ಹೊರಡಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಯೋಜನೆಯಲ್ಲಿನ ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಹಾಗೂ ನಗರದ ಎಲ್ಲಾ ಆಸ್ತಿ ಮಾಲೀಕರಿಗೆ ಪ್ರಾಪರ್ಟಿ ಕಾರ್ಡ್‌ ವಿತರಣೆ ಮಾಡಿದ ನಂತರದಲ್ಲಿ ಈ ಯೋಜನೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಸಂಸದ ರಾಘವೇಂದ್ರ ಅಭಿನಂದನೆ ಹೇಳಿದ್ದಾರೆ.