ಶಿವಮೊಗ್ಗ(ಆ.02): ನಗರದಲ್ಲಿ ಕರ್ಕಶ ಹಾರನ್‌ ಮಾಡುತ್ತಾ ಸಾಗುವ ಹಾಗೂ ನಿಗದಿತ ಮಿತಿಗಿಂತ ಹೆಚ್ಚಿನ ಶಬ್ಧ ಹೊರಸೂಸುವ ಸೈಲೆನ್ಸರ್‌ ಅಳವಡಿಸಿಕೊಂಡು ಸಂಚರಿಸುತ್ತಿದ್ದ 141ಕ್ಕೂ ಹೆಚ್ಚಿನ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ಎಂ. ಅಶ್ವಿನಿ ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ಕಿರಿಕಿರಿ ಹಾಗೂ ಭಯವನ್ನುಂಟುಮಾಡುವ ಹಾಗೆ ಸಂಚರಿಸುತ್ತಿದ್ದ ಬೈಕುಗಳ ಬಗ್ಗೆ ಹಲವಾರು ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆಂದೇ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

92 ಬೈಕ್‌ಗಳಿಗೆ ಕೋರ್ಟ್ ನೋಟಿಸ್:

ಕರ್ಕಶ ಶಬ್ದ ಮಾಡುವ ಬೈಕುಗಳನ್ನು ಪಶ್ಚಿಮ ಸಂಚಾರಿ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದು, ಇದರಲ್ಲಿ 92 ಬೈಕುಗಳಿಗೆ ಕೋರ್ಟ್‌ ನೋಟಿಸ್‌ ನೀಡಲಾಗಿದೆ. 49 ಬೈಕ್‌ ಸವಾರರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗಿದೆ. ಕರ್ಕಶ ಶಬ್ದ ಮಾಡುತ್ತಿದ್ದ ಬæೖಕ್‌ಗಳ ಸೈಲೆನ್ಸರ್‌ಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ವಾಪಸ್‌ ನೀಡುವುದಿಲ್ಲ ಎಂದರು.

ಕರ್ಕಶ ಸೌಂಡ್ ಮಾಡೋ ಬೈಕ್ ಕಂಡ್ರೆ ವಾಟ್ಸಾಪ್‌ ಮಾಡಿ:

ಇನ್ನು ಮುಂದೆ ಇಂತಹ ಸೈಲೆನ್ಸರ್‌ ಅಳವಡಿಕೆಯನ್ನು ಯಾರೂ ಕೂಡಾ ಮಾಡಬಾರದು. ನಿಯಮ ಮೀರಿದರೆ ಸೈಲೆನ್ಸರ್‌ ಅಳವಡಿಸಿದ ಗ್ಯಾರೇಜ್‌ ಮಾಲೀಕರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರಲ್ಲಿ ಮತ್ತು ವಾಹನ ಚಾಲಕರಲ್ಲಿ ಅರಿವು ಮತ್ತು ಜಾಗೃತಿಯನ್ನು ಮೂಡಿಸಲಾಗುವುದು. ಸಾರ್ವಜನಿಕರು ಕೂಡಾ ಇಂತಹ ಅಪಾಯಕಾರಿ ಬೈಕುಗಳ ಫೋಟೋ ತೆಗೆದು ವಾಟ್ಸ್‌ಪ್‌ ಮೂಲಕ ಸಂಚಾರಿ ಪೊಲೀಸರಿಗೆ ಕಳುಹಿಸಬಹುದಾಗಿದೆ ಎಂದರು.

ವಾಹನ ರಿಜಿಸ್ಟ್ರೇಶನ್ ಶುಲ್ಕ ಏರಿಕೆ; ಕಾರು, ಬೈಕ್ ಈಗ ದುಬಾರಿ!

10ಕಡೆ ಏಕಮುಖ ಸಂಚಾರಿ ಮಾರ್ಗ:

ಸುಗಮ ಸಂಚಾರಿ ವ್ಯವಸ್ಥೆಗೆ ಈಗಾಗಲೇ ಹಲವಾರು ಕ್ರಮ ಕಾಗೊಳ್ಳಲಾಗಿದೆ. 5 ಕಡೆಗಳಲ್ಲಿ ಡಿಜಿಟಲ್‌ ಎಲೆಕ್ಟ್ರಾನಿಕ್‌ ಸೂಚನಾ ಫಲಕ ಅಳವಡಿಸಲಾಗಿದೆ. ಕೆಲವೆಡೆ ಬ್ಯಾರಿಕೇಡ್‌ ನಿರ್ಮಾಣ ಮಾಡಲಾಗಿದೆ. 10 ಕಡೆ ಏಕಮುಖ ಸಂಚಾರಿ ಮಾರ್ಗ ಗುರುತಿಸಿದ್ದು, ನಿಯಮ ಉಲ್ಲಂಘಿಸಿದ ವಾಹನ ಚಾಲಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಚುವರಿ ಜಿಲ್ಲಾ ಪೊಲೀಸ್‌ ರಕ್ಷಣಾಧಿಕಾರಿ ಡಾ. ಶೇಖರ್‌, ಡಿವೈಎಸ್‌ಪಿ ಈಶ್ವರ್‌ನಾಯ್‌್ಕ, ವೃತ್ತ ನಿರೀಕ್ಷಕರಾದ ವಸಂತ್‌ಕುಮಾರ್‌, ಸಂಚಾರಿ ಠಾಣಾ ಪಿಎಸ್‌ಐಗಳಾದ ಮಂಜುನಾಥ್‌, ಸಂತೋಷ್‌ ಕುಮಾರ್‌ ಹಾಗೂ ಸಂಚಾರಿ ಪೊಲೀಸ್‌ ಸಿಬ್ಬಂದಿ ಉಪಸ್ಥಿತರಿದ್ದರು.