ಶಿವಮೊಗ್ಗ(ಜು.30): ಹೀರಾ ಗೋಲ್ಡ್‌ ಹಗರಣದ ಆರೋಪಿಯಾಗಿರುವ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ ಸಂಸ್ಥಾಪಕಿ ನೌಹೇರಾ ಶೇಖ್‌ ಅವರನ್ನು ಇಲ್ಲಿನ ಪ್ರಧಾನ ಹಿರಿಯ ವ್ಯವಹಾರಗಳ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಐದು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ್ದಾರೆ.

5 ದಿನ ಪೊಲೀಸ್ ಕಸ್ಟಡಿ:

ಇವರನ್ನು ಬಂಧಿಸಿದ ತೆಲಂಗಾಣ ಪೊಲೀಸರಿಂದ ಶಿವಮೊಗ್ಗ ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾನುವಾರ ತಮ್ಮ ವಶಕ್ಕೆ ಪಡೆದಿದ್ದರು. ಸೋಮವಾರ ನ್ಯಾಯಾಲಯದ ಎದುರು ಹಾಜರುಪಡಿಸಿ ಒಂದು ವಾರ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಐದು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.

ಆನ್‌ಲೈನ್‌ ಮೂಲಕ ಹೀರಾ ಗೋಲ್ಡ್‌ ಸಂಸ್ಥೆಯಲ್ಲಿ ಶಿವಮೊಗ್ಗದ ಮಂದಿಯೂ ಹಣ ಹೂಡಿಕೆ ಮಾಡಿದ್ದರು. ಮೂಲತಃ ಮಂಜುನಾಥ ಬಡಾವಣೆಯ, ಸದ್ಯ ದುಬೈನಲ್ಲಿ ನೆಲೆಸಿರುವ ಶೇಖ್‌ ಅತೀಕ್‌ ಕೂಡ 25 ಲಕ್ಷ ರು. ಹಣವನ್ನು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು. ಕೆಲ ತಿಂಗಳಿಂದ ಸರಿಯಾಗಿ ಬಡ್ಡಿ ಬಾರದ ಕಾರಣ ಇಲ್ಲಿನ ಸಿಇಎನ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ನೌಹೇರಾ ಶೇಖ್‌ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದರು.

ಹೀರಾ ಗ್ರೂಪ್ ವಂಚನೆ: ಶಿವಮೊಗ್ಗ ಜೈಲಿಗೆ ನೌಹೆರಾ ಶೇಖ್

ನೌಹೇರಾ ಶೇಖ್‌ ಪರವಾಗಿ ನಯಾಜ್‌ ಖಾನ್‌ ವಾದ ಮಂಡಿಸಿ ನೌಹೇರಾ ಶೇಖ್‌ ಅವರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು, ದೇಶದ ಅನೇಕ ಕಡೆ ಇವರ ಮೇಲೆ ಪ್ರಕರಣ ಇರುವುದರಿಂದ ಕ್ರಿಮಿನಲ್‌ ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಬಾರದು. ಬದಲಾಗಿ ಸೆಕ್ಷನ್‌ 406ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಸಿವಿಲ್‌ ಪ್ರಕರಣವೆಂದು ಪರಿಗಣಿಸಬೇಕು ಎಂದು ಹೇಳಿದರು. ಪ್ರಾಸಿಕ್ಯೂಶನ್‌ ಪರವಾಗಿ ವಾದ ಮಂಡಿಸಿದ ವಕೀಲರು ಒಂದು ವಾರ ಕಾಲ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಬೇಕೆಂದು ಮನವಿ ಮಾಡಿದರು.

ವಿಚಾರಣೆ ಸೋಮವಾರಕ್ಕೆ  ಮುಂದೂಡಿಕೆ:

ವಾದ-ಪ್ರತಿವಾದ ಆಲಿಸಿದ ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಲಕ್ಷ್ಮೀನಾರಾಯಣ ಭಟ್‌ ಕೆ. ಅವರು ಆರೋಪಿ ನೌಹೇರಾ ಶೇಕ್‌ ಅವರನ್ನು ಐದು ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು. ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗದ ಇನ್ನೂ ಕೆಲವರು ಈ ಸಂಸ್ಥೆಯಿಂದ ವಂಚನೆಗೆ ಒಳಗಾಗಿರುವ ಸಾಧ್ಯತೆಯಿದ್ದು, ಈ ಸಂಬಂಧ ಬರುವ ಎಲ್ಲ ದೂರುಗಳನ್ನು ಒಂದೇ ದೂರಿನಲ್ಲಿ ಸೇರಿಸಿ ದಾಖಲಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.