ಶಿರೂರು ಗುಡ್ಡ ಕುಸಿತ ದುರಂತ: ಮನೆಗೆ ಬರದ ಮಗನಿಗಾಗಿ ಊರೂರು ಅಲೆಯುತ್ತಾ ಗೋಗರೆಯುತ್ತಿರುವ ತಾಯಿ!
ಶಿರೂರು ಗುಡ್ಡ ದುರಂತದ ಬಳಿಕ ತಾಯಿಯೊಬ್ಬಳು ಊರೂರು ಸುತ್ತುತ್ತಾ ಅಂಗಡಿಗೆ ತೆರಳಿ, ಇಲ್ಲವೆ ರಸ್ತೆಯ ಮೇಲೆ ಹೋಗುತ್ತಿರುವವರನ್ನು ತಡೆದು, ಮಗನ ಫೋಟೊ ತೋರಿಸುತ್ತ ಈತನನ್ನು ಎಲ್ಲಾದರೂ ಕಂಡಿದ್ದೀರಾ ಎಂದು ಕೇಳುತ್ತಾ ಗೋಗೆರೆಯುತ್ತಿದ್ದಾರೆ.
ರಾಘು ಕಾಕರಮಠ
ಅಂಕೋಲಾ: ಮಗನ ಫೋಟೊ ಹಿಡಿದು ಕಣ್ಣೀರಿಡುತ್ತಲೇ ಈತನನ್ನು ಎಲ್ಲಾದರೂ ಕಂಡಿದ್ದಿರಾ? ಎಂದು ಊರೂರು ಸುತ್ತುತ್ತಿರುವ ತಾಯಿ, ಕಂಡ ಕಂಡ ದೇವಸ್ಥಾನಕ್ಕೆ ತೆರಳಿ ಮಗ ವಾಪಸ್ ಬಂದರೆ ಸಾಕು ಎಂದು ಬೇಡಿಕೊಳ್ಳುತ್ತಿರುವ ಕರುಳಿನ ಕೂಗು ಮನ ಕಲಕುವಂತಿದೆ.
ಇಂತಹ ಮನಕಲಕುವ ಸನ್ನಿವೇಶಕ್ಕೆ ಕಾರಣವಾಗಿರುವುದು ಶಿರೂರಿನ ಗುಡ್ಡ ಕುಸಿತದ ಕರಾಳ ದುರಂತ. ಗೋಕರ್ಣ ಸಮೀಪದ ಗಂಗೆಕೊಳ್ಳದ 30ರ ಪ್ರಾಯದ ಲೋಕೇಶ ವಿಷ್ಣು ನಾಯ್ಕ ನಾಪತ್ತೆಯಾಗಿ 9 ದಿನ ಕಳೆದಿವೆ. ಮಗ ನಾಪತ್ತೆಯಾಗಿದ್ದರಿಂದ ತಾಯಿ ಮಾದೇವಿ ನಾಯ್ಕ ಅತಂತ್ರರಾಗಿದ್ದು, ಗೋಕರ್ಣ, ಅಡಿಗೋಣ, ನಾಡುಮಾಸ್ಕೇರಿ, ಗಂಗಾವಳಿ, ಮಾದನಗೇರಿ ಹೀಗೆ ಹಲವಾರು ಊರುಗಳಿಗೆ ಭೇಟಿ ನೀಡಿ ಮಗನ ಪತ್ತೆಗಾಗಿ ಹುಡುಕುತ್ತಾ ಕಣ್ಣೀರು ಹಾಕುತ್ತಿದ್ದಾರೆ. ಊರೂರು ಸುತ್ತುತ್ತ ಅಂಗಡಿಗೆ ತೆರಳಿ, ಇಲ್ಲವೆ ರಸ್ತೆಯ ಮೇಲೆ ಹೋಗುತ್ತಿರುವವರನ್ನು ತಡೆದು, ಮಗನ ಫೋಟೊ ತೋರಿಸುತ್ತ ಈತನನ್ನು ಎಲ್ಲಾದರೂ ಕಂಡಿದ್ದೀರಾ ಎಂದು ಕೇಳುತ್ತಾ ಗೋಗೆರೆಯುತ್ತಿದ್ದಾರೆ.
ಸಂತ್ರಸ್ತೆಗೆ ಅರ್ಧ ಎಕರೆ ಕೊಟ್ಟ ಅತ್ಯಾಚಾರಿ, ಪುತ್ರನಿಗೆ 6.5 ಲಕ್ಷ ರು. ಪರಿಹಾರ, ಶಿಕ್ಷೆ ಇಳಿಸಿದ ಹೈಕೋರ್ಟ್
ಆಸರೆಯಾಗಿದ್ದ ಮಗ: 65ರ ಪ್ರಾಯದ ಮಾದೇವಿ ನಾಯ್ಕಗೆ ನಾಲ್ವರು ಪುತ್ರರು ಇದ್ದಾರೆ. ಅವರಲ್ಲಿ ಮೂರನೇ ಮಗ ಲೋಕೇಶ ಗೋವಾದ ಮೊಬ್ರಾದಲ್ಲಿ ಬೋಟ್‌ನ ಫೈಬರ್ ಕಟ್ಟುವ ಕೆಲಸ ಮಾಡಿಕೊಂಡು ಮನೆಯ ಸಂಸಾರ ನಿರ್ವಹಿಸುತ್ತಿದ್ದ. ಲೋಕೇಶ ಊರಿನಲ್ಲಿಯೂ ಎಲ್ಲರೊಂದಿಗೆ ಸ್ನೇಹಜೀವಿಯಾಗಿದ್ದ ಎಂದು ಗ್ರಾಪಂ ಸದಸ್ಯ ಚಂದ್ರಶೇಖರ ನಾಯ್ಕ ಅಭಿಪ್ರಾಯ ಪಡುತ್ತಾರೆ.
ಜು. 14ರಂದು ಲೋಕೇಶ ಕೆಲಸಕ್ಕೆಂದು ಅಂಕೋಲಾದಿಂದ ಗೋವಾಕ್ಕೆ ತೆರಳಿದ್ದ. ಅಲ್ಲಿ ವಿಪರೀತ ಮಳೆಯಿದ್ದಿದ್ದರಿಂದ ಶೃಂಗೇರಿಯಲ್ಲಿರುವ ಅಣ್ಣ ಮಂಜುನಾಥನ ಮನೆಗೆ ಹೋಗಲು ತೀರ್ಮಾನಿಸಿ ಜು. 15ರಂದು ಬೆಳಗ್ಗೆ 9 ಗಂಟೆಗೆ ಗೋವಾದಿಂದ ಶೃಂಗೇರಿಗೆ ಹೊರಟಿದ್ದ. ಮೊಬೈಲ್ ನೀರಿಗೆ ಬಿದ್ದು ಹಾಳಾಗಿದ್ದರಿಂದ ಲೋಕೇಶ ಮೊಬೈಲನ್ನು ಮನೆಯಲ್ಲಿಯೆ ಬಿಟ್ಟು ತೆರಳಿದ್ದ.
ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದುಗೊಳಿಸುವಂತೆ ಸಹಪಾಲುದಾರರಿಂದ ಕೋರ್ಟ್‌ಗೆ ಮೊರೆ
ಜು. 16ರಂದು ಶಿರೂರಿನ ಗುಡ್ಡ ಕುಸಿತವಾದ ದಿನ ಗೋಕರ್ಣದಿಂದ ಅಂಕೋಲಾಕ್ಕೆ ಬೆಳಗ್ಗೆ 8.40ರ ವೇಳೆಗೆ ಸಾರಿಗೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದ ಗಂಗೆಕೊಳ್ಳದವರೇ ಆದ ಚಾಲಕ ವಿನೋದ ರಾಮಚಂದ್ರ ನಾಯ್ಕ ಲೋಕೇಶ ಅವರನ್ನು ಕಂಡಿದ್ದಾರೆ. ಬ್ಯಾಗನ್ನು ಹೆಗಲೇರಿಸಿಕೊಂಡು ಗುಡ್ಡ ಕುಸಿತದ ಸ್ಥಳದ ಬಳಿ ನಿಂತಿದ್ದ ಲೋಕೇಶ ಅವರಿಗೆ ಕೈ ಮಾಡಿ ಅಂಕೋಲಾದತ್ತ ಸಾಗಿದ್ದಾರೆ. ಇದನ್ನು ಬಿಟ್ಟರೆ ಲೋಕೇಶ ಅವರನ್ನು ಯಾರೂ ಕಂಡಿಲ್ಲ.
ಅಂದು ಬೆಳಗ್ಗೆ ಸುಮಾರು 9 ಗಂಟೆಯ ವೇಳೆ ಗುಡ್ಡ ಕುಸಿತ ದುರ್ಘಟನೆ ನಡೆದಿದೆ. ಹೀಗಾಗಿ ಲೋಕೇಶ ನಾಪತ್ತೆಯಾಗಿರುವ ಘಟನೆಯು ಹಾಗೆ ಆತ ಶಿರೂರಿನ ಲಕ್ಷ್ಮಣ ನಾಯ್ಕ ಚಹಾದ ಅಂಗಡಿ ಬಳಿ ಕಂಡ ಘಟನೆಗೂ ತಾಳೆ ಹಾಕಿದರೆ ಇದರಲ್ಲಿ ಲೋಕೇಶ ಕೂಡ ಮಣ್ಣು ಪಾಲಾಗಿರಬಹುದು ಎಂದು ಗ್ರಾಮಸ್ಥರು ಅಂದಾಜಿಸಿದ್ದಾರೆ. ಆದರೆ ತಾಯಿ ಕರುಳು ಮಾತ್ರ ಆತ ಮಣ್ಣಿನೊಳಕ್ಕೆ ಸೇರಿಲ್ಲ. ಇಲ್ಲೆ ಎಲ್ಲೋ ಇದ್ದಾನೆ ಎಂಬ ಅತ್ಮಸಾಕ್ಷಿಯೊಂದಿಗೆ ತಾಯಿ ಮಾತ್ರ ಮಗನ ಫೋಟೊ ಹಿಡಿದು ಊರೂರು ಸುತ್ತುತ್ತಿದ್ದಾಳೆ.
ಇದೇ ಶಿರೂರಿನಲ್ಲಿ ಅಂಗಡಿ ಇಟ್ಟುಕೊಂಡಿದ್ದು ಭೂಕುಸಿತದಲ್ಲಿ ಮೃತರಾದ ಶಾಂತಿ ನಾಯ್ಕ ಅವರ ತವರು ಮನೆ ಗಂಗೆಕೊಳ್ಳವೇ ಆಗಿತ್ತು. ಲೋಕೇಶ ನಾಯ್ಕ್‌ಗೂ ಶಾಂತಿ ನಾಯ್ಕ ಕುಟುಂಬಕ್ಕೂ ಅನ್ಯೋನ್ಯತೆ ಇತ್ತು. ಆ ಮಾರ್ಗದಲ್ಲಿ ಸಾಗಿದರೆ ಅದೇ ಅಂಗಡಿಯಲ್ಲಿ ಸಹಾ ಸೇವಿಸಿ ಸಾಗುವುದು ರೂಢಿ ಎಂದು ಲೋಕೇಶ ಅವರ ಅಣ್ಣ ವಿನೋದ ನೊಂದು ನುಡಿಯುತ್ತಾರೆ.
ನಂಬಿಕೆ: ನನಗೆ ಪರಿಹಾರ ಏನೂ ಬೇಡ. ನನ್ನ ಮಗ ಜೀವಂತ ಇದ್ದರೆ ಅಷ್ಟೇ ಸಾಕು. ಅದೇ ನನಗೆ ಕೋಟಿ ರುಪಾಯಿ ಇದ್ದಂತೆ. ಆತ ಮಣ್ಣು ಕುಸಿತದ ದುರಂತಕ್ಕೆ ಸಿಲುಕಿಲ್ಲ. ಎಲ್ಲೊ, ಯಾವುದೋ ಪರಿಸ್ಥಿತಿಗೆ ಸಿಲುಕಿರಬಹುದು. ಬಂದೇ ಬರುತ್ತಾನೆ ಎಂಬ ನಂಬಿಕೆ ಇದೆ. ದೇವರು ನನ್ನ ಕೈಬಿಡುವುದಿಲ್ಲ ಎಂದು ಲೋಕೇಶನ ತಾಯಿ ಮಾದೇವಿ ನಾಯ್ಕ ತಿಳಿಸಿದರು.