ಶಿವಾನಂದ ಗೊಂಬಿ

ಹುಬ್ಬಳ್ಳಿ [ಸೆ.16]: ರಾಜ್ಯದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಗ್ರ ಮಾಹಿತಿಯುಳ್ಳ ಶಿಲ್ಪವನವೊಂದು ಉತ್ತರ ಕರ್ನಾಟಕದಲ್ಲಿ ಸದ್ದಿಲ್ಲದೇ ಸಿದ್ಧವಾಗುತ್ತಿದೆ. ಅಂದುಕೊಂಡಂತೆಯೇ ಎಲ್ಲವೂ ಮುಗಿದರೆ ಮುಂದಿನ ವರ್ಷ ಲೋಕಾರ್ಪಣೆಗೊಳ್ಳಲಿದೆ.

ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಹುಟ್ಟಿದ ಊರು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ‘ಸಂಗೊಳ್ಳಿ’ಯಲ್ಲಿ ಈ ಶಿಲ್ಪವನ ಸಿದ್ಧವಾಗುತ್ತಿದೆ. 10 ಎಕರೆ ಜಾಗದಲ್ಲಿ ಈ ಶಿಲ್ಪವನ ತಲೆ ಎತ್ತಲಿದ್ದು, ಇದಕ್ಕಾಗಿ ಕಲಾಕೃತಿಗಳು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ‘ಉತ್ಸವ ರಾಕ್‌ ಗಾರ್ಡನ್‌’ನಲ್ಲಿ ಮೂರ್ತರೂಪ ಪಡೆಯುತ್ತಿವೆ.

ಸಂಗೊಳ್ಳಿ ಎಂಬುದು ಪುಟ್ಟಗ್ರಾಮ. ಕಿತ್ತೂರು ಸಂಸ್ಥಾನದ ಆಡಳಿತಕ್ಕೊಳಪಟ್ಟಗ್ರಾಮವಿದು. ವೀರ ಸಂಗೊಳ್ಳಿ ರಾಯಣ್ಣನ ಹುಟ್ಟೂರು ಇದೇ. ಕಿತ್ತೂರು ಚೆನ್ನಮ್ಮನ ಬೆಂಗಾವಲು ಪಡೆಯ ಮುಖ್ಯಸ್ಥನಾಗಿದ್ದವನು ಸಂಗೊಳ್ಳಿ ರಾಯಣ್ಣ. ಕಿತ್ತೂರು ಸಂಸ್ಥಾನದ ಆಡಳಿತ, ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ ಬಗೆ, ಸಂಗೊಳ್ಳಿ ರಾಯಣ್ಣನ ಹುಟ್ಟು, ಬಾಲ್ಯ, ಕಿಶೋರಾವಸ್ಥೆಯಲ್ಲಿ ಆತನ ಆಟ, ಬ್ರಿಟಿಷರ ವಿರುದ್ಧ ಆತನ ಹೋರಾಟ, ಗೆರಿಲ್ಲಾ ಯುದ್ಧ, ಕೊನೆಗೆ ಆತನನ್ನು ಗಲ್ಲಿಗೇರಿಸಿದ್ದು ಸೇರಿದಂತೆ ಕಿತ್ತೂರು ರಾಣಿ ಚೆನ್ನಮ್ಮನ ಸೆರೆ ಹಿಡಿದಿದ್ದು, ಜೈಲಿಗೆ ಕಳುಹಿಸಿದ್ದು... ಹೀಗೆ ಇಲ್ಲಿ ಎಲ್ಲವೂ ಕಲಾಕೃತಿಗಳ ರೂಪದಲ್ಲಿ ಬರಲಿವೆ. ಬರೋಬ್ಬರಿ 1000 ಕಲಾಕೃತಿಗಳು ಇಲ್ಲಿ ಸ್ಥಾಪನೆಯಾಗಲಿವೆ.

ಉತ್ಸವ ರಾಕ್‌ ಗಾರ್ಡನ್‌ ಸಿದ್ಧಪಡಿಸಿರುವ ರಾಜಹರ್ಷ ಸೊಲಬಕ್ಕನವರ ಈ ಕಲಾಕೃತಿಗಳ ತಯಾರಿಕೆಯ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ 600ಕ್ಕೂ ಹೆಚ್ಚು ಕಲಾಕೃತಿಗಳು ಸಿದ್ಧವಾಗಿ ಅಂತಿಮರೂಪ ಪಡೆಯುತ್ತಿದ್ದು, ಇನ್ನು 400 ಕಲಾಕೃತಿಗಳು ಸಿದ್ಧಗೊಂಡರೆ ಮುಗಿಯಿತು.

ಸೈನಿಕ ಸ್ಕೂಲ್‌ ಸ್ಥಾಪನೆ:

ವಿಜಯಪುರದಲ್ಲಿರುವ ಸೈನಿಕ ಸ್ಕೂಲ್‌ನಂತೆ ಸಂಗೊಳ್ಳಿಯಲ್ಲಿ ಸೈನಿಕ ಸ್ಕೂಲ್‌ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಸೈನಿಕ ಸ್ಕೂಲ್‌ ಹಾಗೂ ಸಂಗೊಳ್ಳಿ ರಾಯಣ್ಣ ಶಿಲ್ಪವನಕ್ಕೆ ಮಂಜೂರಾತಿ ನೀಡಲಾಗಿದೆ. ಇದಕ್ಕಾಗಿ 100 ಎಕರೆ ಮೀಸಲಿಟ್ಟಿದೆ. 100 ಎಕರೆಯಲ್ಲಿ 10 ಎಕರೆ ಪ್ರದೇಶದಲ್ಲಿ ಶಿಲ್ಪವನ ಹಾಗೂ 90 ಎಕರೆಯಲ್ಲಿ ಸ್ಕೂಲ್‌ ಸಿದ್ಧವಾಗುತ್ತಿದೆ. ಸೈನಿಕ ಸ್ಕೂಲ್‌ನ ಕೆಲಸವೂ ಭರದಿಂದ ಸಾಗಿದೆ.

ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದಡಿ ಈ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸೈನಿಕ ಸ್ಕೂಲ್‌ಗಾಗಿ 175 ಕೋಟಿ ರು. ರಾಜ್ಯ ಸರ್ಕಾರ ಮಂಜೂರು ಮಾಡಿದ್ದರೆ, ಶಿಲ್ಪವನಕ್ಕಾಗಿ 10 ಕೋಟಿ ರು. ಪ್ರತ್ಯೇಕ ಹಣ ತೆಗೆದಿರಿಸಲಾಗಿದೆ. ಸೈನಿಕ ಸ್ಕೂಲ್‌ಗೆ ಮೂಲಸೌಲಭ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಕೆಲಸವಾದರೆ, ಅದನ್ನು ನಿರ್ವಹಿಸುವುದು ಮಾತ್ರ ಕೇಂದ್ರದ ರಕ್ಷಣಾ ಇಲಾಖೆ. ಆದರೆ ಪಕ್ಕದಲ್ಲೇ ಇರುವ ಶಿಲ್ಪವನದ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಸೈನಿಕ ಸ್ಕೂಲ್‌ 2021ರಲ್ಲಿ ಲೋಕಾರ್ಪಣೆಗೊಂಡರೆ, ಶಿಲ್ಪವನ ಮಾತ್ರ 2020ರಲ್ಲಿ ಉದ್ಘಾಟನೆಗೊಳ್ಳಲಿದೆ.

ಕಿತ್ತೂರು ರಾಣಿ ಚೆನ್ನಮ್ಮನ ಸಂಸ್ಥಾನ ಹಾಗೂ ಆಗಿನ ಕಾಲದ ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಮಾಹಿತಿ ಇಲ್ಲಿರಲಿದೆ. ಸೈನಿಕ ಶಾಲೆಗೆ ಸೇರುವ ಮಕ್ಕಳಲ್ಲಿ ಇದು ದೇಶಪ್ರೇಮ ಹೊರಹೊಮ್ಮಿಸುತ್ತದೆ. ಜತೆಗೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಶೌರ್ಯವನ್ನು ಮಕ್ಕಳಿಗೆ ಮನವರಿಕೆ ಮಾಡಬಹುದು. ಸೈನ್ಯಕ್ಕೆ ಸೇರಲು ಮಕ್ಕಳಲ್ಲಿ ಆಸಕ್ತಿಯನ್ನು ಹುಟ್ಟುಹಾಕುತ್ತದೆ ಈ ಶಿಲ್ಪವನ.

ಸ್ವಾತಂತ್ರ್ಯ ಸಂಗ್ರಾಮದ ಮಾಹಿತಿಯುಳ್ಳ ರಾಜ್ಯದ ಪ್ರಥಮ ಶಿಲ್ಪವನ ಇದಾಗಲಿದೆ. ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಹೋರಾಟ, ಶೌರ್ಯ ಸೇರಿದಂತೆ ವಿವಿಧ 1000 ಕಲಾಕೃತಿಗಳು ಇಲ್ಲಿರಲಿವೆ. ಈ ಶಿಲ್ಪವನಕ್ಕಾಗಿ 10 ಕೋಟಿ ರು. ಮೀಸಲಿಡಲಾಗಿದೆ. 2020ರಲ್ಲಿ ಶಿಲ್ಪವನ ಉದ್ಘಾಟನೆಗೊಳ್ಳಲಿದೆ.

-ಮಲ್ಲೇಶಪ್ಪ ಹೊರಪೇಟೆ, ಆಯುಕ್ತರು, ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ