ಶಿಕಾರಿಪುರ [ನ.30]:  ಹಿರೇಕೇರೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರಕ್ಕೆ ಧುಮುಕಿದ ನಂತರದಲ್ಲಿ ಕ್ಷೇತ್ರದ ಚಿತ್ರಣ ಬದಲಾಗಿದ್ದು ಸೋಲಿನ ಭೀತಿಯಿಂದ ಮಾಜಿ ಶಾಸಕ ಬಿ.ಸಿ ಪಾಟೀಲ್‌ ಕಂಗೆಟ್ಟು ಸಿದ್ದರಾಮಯ್ಯ ವಿರುದ್ಧ ಸಲ್ಲದ ಆರೋಪದಲ್ಲಿ ನಿರತರಾಗಿದ್ದಾರೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾಲತೇಶ ಗೋಣಿ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಟೀಲ್‌ ಸೋಲಿನ ಭೀತಿಯಿಂದ ಸಿದ್ದ​ರಾ​ಮ​ಯ್ಯ ಕುರಿ​ತು ಅತ್ಯಂತ ಹಗುರ ಮಾತ​ನಾ​ಡು​ತ್ತಿ​ದ್ದಾ​ರೆ. ಸಿದ್ದರಾಮಯ್ಯನವರ ಪ್ರಚಾರಕ್ಕೆ ಮತದಾರರು ಅಭೂತಪೂರ್ವವಾಗಿ ಸ್ಪಂದಿಸುತ್ತಿದ್ದಾರೆ. ಕಂಗೆಟ್ಟಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ, ತಾಲೂಕಿನ ಮಾರವಳ್ಳಿ, ಕಿಟ್ಟದಹಳ್ಳಿ, ಬಗನಕಟ್ಟೆಮತ್ತಿತರ ಕಡೆಗಳಿಂದ ಜನರನ್ನು ಕೂಲಿ ಹಣ ನೀಡಿ ಪ್ರಚಾರಕ್ಕೆ ಕರೆದೊಯ್ಯು​ತ್ತಿ​ದ್ದಾರೆ ಎಂದು ಟೀಕಿ​ಸಿ​ದರು.

ಹಿರೇಕೇರೂರಲ್ಲಿ ಕಾಂಗ್ರೆ​ಸ್‌ ಆರ್ಥಿಕವಾಗಿ ದುರ್ಬಲ ವ್ಯಕ್ತಿಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಸಿದ್ದರಾಮಯ್ಯ ಅಲೆಯಲ್ಲಿ ಬಿ.ಸಿ. ಪಾಟೀಲ್‌ ಕೊಚ್ಚಿಹೋಗಲಿದ್ದಾರೆ. ಶಿಕಾರಿಪುರದಿಂದ ಬಿಜೆಪಿಯ ಪರಾಜಿತ ಗ್ರಾಪಂ, ತಾಪಂ ಸದಸ್ಯರು ಹಣದ ಥೈಲಿ ಜತೆಗೆ ಪ್ರಚಾರಕ್ಕೆ ತೆರಳುತ್ತಿರುವುದು ಹಾಸ್ಯಾಸ್ಪದ. ಅಲ್ಲಿ ಬನ್ನಿಕೋಡ್‌ ಅವ​ರ ಗೆಲವು ಶತಸಿದ್ಧ. ಸಿದ್ದರಾಮಯ್ಯ ವಿರುದ್ಧದ ತೆಗಳಿಕೆಯಿಂದ ಜನತೆ ರೊಚ್ಚಿಗೆದ್ದಿದ್ದಾರೆ ಎಂದು ಹೇಳಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪುರಸಭಾ ಸದಸ್ಯ ಮಹೇಶ್‌ ಹುಲ್ಮಾರ್‌ ಮಾತನಾಡಿ, ಸಂಸದ ರಾಘವೇಂದ್ರ ಹಿರೇಕೇರೂರು ಗೆಲ್ಲುವ ತವಕದಲ್ಲಿ ಲಾಡ್ಜ್‌ನಲ್ಲಿ ತಂಗಿದ್ದು, ಹಣವನ್ನು ಯಥೇಚ್ಛವಾಗಿ ಮಾಸೂರು, ಹಂಸಬಾವಿ, ರಟ್ಟೀಹಳ್ಳಿಯಲ್ಲಿ ಹಂಚುವ ವ್ಯವಸ್ಥೆ ಮಾಡಿ​ದ್ದಾ​ರೆ. ವಾಮಮಾರ್ಗದಲ್ಲಿ ಚುನಾವಣೆ ಎದುರಿಸುವ ಸಕಲ ಕಲೆಯನ್ನು ಬಲ್ಲ ಬಿಜೆಪಿ ಮುಖಂಡರು ಜನಾದೇಶ ದೊರೆಯದಿದ್ದರೂ ಶಾಸಕರ ಖರೀದಿಸಿ ಚುನಾವಣೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅವಧಿಯಲ್ಲಿ ಬಿಸಿ ಪಾಟೀಲ್‌ ಶಾಸಕರಾಗಿದ್ದಲ್ಲಿ ಸಚಿವ ಪದವಿಯನ್ನು ನೀಡುತ್ತಿದ್ದರು. ರಾಜ್ಯ ಹಸಿವು ಮುಕ್ತ ಎಂಬ ಶ್ರೇಯಸ್ಸಿಗೆ ಸಿದ್ದರಾಮಯ್ಯ ಕೊಡುಗೆ ಅಪಾರವಾಗಿದ್ದು ಉಪಚುನಾವಣೆಯಲ್ಲಿ ಕನಿಷ್ಠ 10 ಸ್ಥಾನ ಜಯಿಸಿ ಅಧಿಕಾರ ಉಳಿಸಿಕೊಳ್ಳುವ ಹಪಾಹಪಿಯಲ್ಲಿ ಬಿಜೆಪಿ ಮುಖಂಡರು ಇಲ್ಲಸಲ್ಲದ ಆರೋಪದಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು.

ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ.