ಚಿತ್ರದುರ್ಗ:(ಸೆ.22) ಅ.2ರಿಂದ 11 ರವರೆಗೆ ಶರಣ ಸಂಸ್ಕೃತಿ ಉತ್ಸವ ಪ್ರಕೃತಿ ವಿಕೋಪದ ಮಧ್ಯದಲ್ಲೂ ಸಾರ್ವಜನಿಕರಿಗೆ ನಿರ್ದಿಷ್ಟ ಸಂದೇಶ ಸಾರಲು ಉತ್ಸವ ನಡೆಸಲಾಗುವುದು ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶನಿವಾರ ನಗರದ ಮುರುಘಾಮಠದಲ್ಲಿ ಈ ಬಾರಿ ಶರಣ ಸಂಸ್ಕೃತಿಕ ಉತ್ಸವದ ಆಹ್ವಾನ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದ ಶ್ರೀಗಳು, ಮಠವು ಸಮಸ್ಯೆ ಹಾಗೂ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಿಂದ ಉತ್ಸವ ನಡೆಸುತ್ತಿದೆ. ವೈಯಕ್ತಿಕ ಜೀವನದ ತಲ್ಲಣಗಳನ್ನು ನಿವಾರಿಸಿಕೊಳ್ಳುವ ದೃಷ್ಟಿಯಿಂದ ನಿತ್ಯ ಬೆಳಗ್ಗೆ ಸಹಜ ಶಿವಯೋಗ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಚಾರ ಸಂಕಿರಣ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದರು. 

ನಾನಾ ಕ್ರೀಡಾಕೂಟ:

ಅ.2ರಂದು ಸಾಮರಸ್ಯ ಮೂಡಿಸುವ ಸೌಹಾರ್ದ ಕಾಲ್ನಡಿಗೆ ಜಾಥಾ ನಡೆಯಲಿದೆ. ನಗರದ ಹಲವು ಬೀದಿಗಳಲ್ಲಿ ಸಾಗಲಿದೆ. ಮಠದ ಭಕ್ತರು, ಸ್ವಾಮೀಜಿಗಳು, ವಿದ್ಯಾರ್ಥಿಗಳು ಸೇರಿ ಸಾವಿರಾರು ಜನ ಭಾಗವಹಿಸಲಿದ್ದಾರೆ. ಉತ್ಸವದ ಅಂಗವಾಗಿ ಜಮುರಾ ಕಪ್‌ ಕ್ರೀಡಾಕೂಟ ಏರ್ಪಡಿಸಲಾಗಿದೆ. ಹೊನಲು ಬೆಳಕಿನ ಪುರುಷರ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಚಾಲನೆ ನೀಡಲಿದ್ದಾರೆ. ಅ.3ರಂದು ಮಹಿಳಾ ಕ್ರೀಡಾಕೂಟವನ್ನು ಜಿಪಂ ಸಿಇಒ ಸಿ.ಸತ್ಯಭಾಮ ಉದ್ಘಾಟಿಸಲಿದ್ದಾರೆ. ಅ.4ರಂದು ಕವಾಡಿಗರ ಹಟ್ಟಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ. ಶ್ವಾನ ಪ್ರದರ್ಶನ ಹಾಗೂ ಜಮುರಾ ಕಪ್‌ ಬಹುಮಾನ ವಿತರಣಾ ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 

ಸಿಎಂರಿಂದ 20 ಕೃತಿ ಬಿಡುಗಡೆ:

ಅ.5ರಂದು ಮಠದ ಆವರಣದಲ್ಲಿ ಜೋಡೆತ್ತು ಹಾಗೂ ಸಾಕುಪ್ರಾಣಿ ಪ್ರದರ್ಶನ ಆಯೋಜಿಸಲಾಗಿದೆ. ಈ ಬಾರಿ ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕವಿ ಡಾ.ಸಿದ್ದಲಿಂಗಯ್ಯ, ಲಂಡನ್‌ ನಿವಾಸಿ ಎಸ್‌.ಮಹಾದೇವಯ್ಯ, ಉದ್ಯಮಿ ಜೆ.ಎಂ.ಜಯಕುಮಾರ್‌ ಹಾಗೂ ಸಾಮಾಜಿಕ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್‌ ಅವರಿಗೆ ಮುರುಘಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಭರಮಣ್ಣನಾಯಕ ಶೌರ್ಯ ಪ್ರಶಸ್ತಿಗೆ ಯುವ ವಿಜ್ಞಾನಿ ಎನ್‌.ಎಂ.ಪ್ರತಾಪ್‌ ಅವರನ್ನು ಆಯ್ಕೆ ಮಾಡಲಾಗಿದೆ. ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮರುಘಾ ಶರಣರ 20 ಕೃತಿಗಳನ್ನು ಸಿಎಂ ಬಿ.ಎಸ್‌.ಯಡಿಯೂರಪ್ಪ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು. 

ಗಣ್ಯರ ದಂಡು:

ಅ.6 ರಂದು ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಶಾಸಕ ಕೆ.ಆರ್‌.ರಮೇಶಕುಮಾರ್‌, ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಾಲ್ಗೊಳ್ಳಲಿದ್ದಾರೆ. ‘ಗಾಂಧಿವಾದದ ಪ್ರಸ್ತುತತೆ’ ಕುರಿತು ಚರ್ಚೆ ನಡೆಯಲಿದೆ. ರಾಜಕೀಯ ಅಸ್ಥಿರತೆ, ಸಾಂವಿಧಾನಿಕ ಬದ್ಧತೆ ಹಾಗೂ ಪರಿಹಾರ’ ಕುರಿತು ಅ.7ರಂದು ವಿಚಾರಸಂಕಿರಣ ನಡೆಯಲಿದೆ. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಸವತತ್ವ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ.ಸಿದ್ದೇಶ್‌ ಪಾಲ್ಗೊಳ್ಳಲಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅ.8ರಂದು ಶೂನ್ಯ ಪೀಠಾರೋಹಣ ನಡೆಯಲಿದೆ. ಅ.9ರಂದು ಶರಣರು ಶೂನ್ಯಪೀಠಾರೋಹಣ, ಅಲ್ಲಮಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ನಡೆಯಲಿದೆ. ಬಳಿಕ ಜಂಗಿ ಕುಸ್ತಿ, ವಚನ ಕಮ್ಮಟ ಪರೀಕ್ಷೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಸಂಜೆ ನಡೆಯುವ ಯುವಜನ ಮೇಳದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪಾಲ್ಗೊಳ್ಳಲಿದ್ದಾರೆ. ಅ.10ರಂದು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ 28ನೇ ಸ್ಮರಣೋತ್ಸವ ಹೊಳಲ್ಕೆರೆಯಲ್ಲಿ ಜರುಗಲಿದೆ. ಅನುಭವ ಮಂಟಪದಲ್ಲಿ ಮಹಿಳಾ ಗೋಷ್ಠಿ ನಡೆಯಲಿದೆ. ಅ.11ರಂದು ಭಾವೈಕ್ಯ ಸಮಾವೇಶ ನಡೆಯಲಿದೆ.

ಈ ವೇಳೆ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹನುಮಲಿ ಷಣ್ಮುಖಪ್ಪ, ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ತಾಪಂ ಅಧ್ಯಕ್ಷ ಲಿಂಗರಾಜ್‌, ದ್ಯಾಮಣ್ಣ, ಡಿ.ಸಿ.ಮೋಹನ್‌, ಶ್ರೀನಿವಾಸ್‌, ಶಂಕರಮೂರ್ತಿ, ರಾಜಶೇಖರ್‌, ಕೆಇಬಿ ಷಣ್ಮುಖಪ್ಪ, ಎಂ.ಜಿ.ದೊರೆಸ್ವಾಮಿ ಎ.ಜೆ. ಪರಮಶಿವಯ್ಯ ಉಪಸ್ಥಿತರಿದ್ದರು.