ಚಿಕ್ಕಮಗಳೂರು: ಮನೆಯಲ್ಲಿ ಜಿಂಕೆ-ಚಿರತೆ ಚರ್ಮ ಸಿಕ್ಕಿದ್ದ ಶಾಖಾದ್ರಿ ವಿಚಾರಣೆಗೆ ಗೈರು
ಇದೀಗ ಅರಣ್ಯ ಇಲಾಖೆ ನಡೆ ಮೇಲೆ ಜನಸಾಮಾನ್ಯರಿಗೆ ನಾನಾ ರೀತಿ ಅನುಮಾನ ಮೂಡಿದೆ. ಜನಸಾಮಾನ್ಯರು, ಅರ್ಚಕರು, ಅಧಿಕಾರಿಗಳನ್ನ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶಾಖಾದ್ರಿಗೆ ನೋಟೀಸ್ ನೀಡಿದ್ದು ಏಕೆ. ಅವರು ಬರದಿದ್ದರೂ ಸುಮ್ಮನಿರೋದು ಏಕೆ ಎಂದು ಅರಣ್ಯ ಇಲಾಖೆಯನ್ನ ಪ್ರಶ್ನಿಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ನ.04): ಹುಲಿ ಉಗುರು ಧರಿಸಿದ್ದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ರಾತ್ರೋರಾತ್ರಿ ವಯೋವೃದ್ಧ ಅರ್ಚಕರನ್ನ ಬಂಧಿಸ್ತು. ಅರಣ್ಯ ಇಲಾಖೆಯೇ ಅಧಿಕಾರಿಯನ್ನೇ ವಶಕ್ಕೆ ಪಡೆದು ವಿಚಾರಣೆ ನಡೆಸ್ತು. ಆದ್ರೆ, ಎಫ್.ಐ.ಆರ್. ಆದ್ರು ಶಾಖಾದ್ರಿಯನ್ನ ಬಂಧಿಸಲಿಲ್ಲ. ನೋಟೀಸ್ ನೀಡಿದ್ರು ಅವ್ರು ವಿಚಾರಣೆಗೆ ಹಾಜರಾಗಲಿಲ್ಲ. ಯಾರ್ದೋ ಕೈನಲ್ಲಿ ಮನೆ ಕೀ ಕಳಿಸಿದ್ದ ಶಾಖಾದ್ರಿ ನಿನ್ನೆ(ಶುಕ್ರವಾರ) ವೈದ್ಯರ ಸಲಹೆ ಮೇರೆಗೆ ಮೂರು ವಾರ ಬೆಡ್ ರೆಸ್ಟ್ ಅಂತ ಸಬೂಬು ನೀಡಿ ವಿಚಾರಣೆಗೆ ಗೈರಾಗಿದ್ದಾರೆ. ಆದ್ರೆ, ಶಾಖಾದ್ರಿ ಕಡೆಯವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ.
ಸರ್ಕಾರದ ವಿರುದ್ಧ ಎಸ್.ಡಿ.ಪಿ.ಐ. ವಾಗ್ದಾಳಿ :
ಚಿಕ್ಕಮಗಳೂರು ತಾಲೂಕಿನ ದತ್ತಪೀಠದ ಧರ್ಮಗುರು ಗೌಸ್ ಮೊಹಿನುದ್ಧೀನ್ ಶಾಖಾದ್ರಿ ಅವರ ವಂಶಸ್ಥರು ಹುಲಿ ಚರ್ಮದ ಮೇಲೆ ಕೂತಿರೋ ಫೋಟೋ ವೈರಲ್ ಆಗ್ತಿದ್ದಂತೆ ಚಿಕ್ಕಮಗಳೂರು ಅರಣ್ಯ ಅಧಿಕಾರಿಗಳು ಶಾಖಾದ್ರಿ ಅವರ ಮನೆ ಮೇಲೆ ದಾಳಿ ಮಾಡಿ, ಚಿರತೆ-ಚಿಂಕೆ ಚರ್ಮವನ್ನ ವಶಪಡಿಸಿಕೊಂಡಿದ್ರು. ಅರಣ್ಯ ಅಧಿಕಾರಿಗಳು ಅವರ ಮೇಲೆ ಪ್ರಕರಣ ದಾಖಲಿಸಿ ಜಿಂಕೆ-ಚಿರತೆ ಚರ್ಮದ ಬಗ್ಗೆ ದಾಖಲೆ ಸಹಿತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅವರು ಮನೆಯಲ್ಲಿ ಇರದ ಕಾರಣ ಅವರ ಮನೆ ಬಾಗಿಲಿಗೆ ನೋಟೀಸ್ ಅಂಟಿಸಿ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಶಾಖಾದ್ರಿಯವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅವರ ಮನೆ ತಪಾಸಣೆ ಮಾಡುವ ವೇಳೆಯೂ ಮನೆ ಕೀಯನ್ನ ಬೇರೆಯವರ ಕೈನಲ್ಲಿ ಕಳಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು 10 ಗಂಟೆ ಕಾದು ಮನೆ ತಪಾಸಣೆ ನಡೆಸಿದ್ದರು. ಇದೀಗ, ವಿಚಾರಣೆಗೂ ಹಾಜರಾಗದ ಶಾಖಾದ್ರಿ ಆರೋಗ್ಯ ಸರಿ ಇಲ್ಲ ಅಂತ ವೈದ್ಯರ ಸೂಚನೆ ಮೇರೆಗೆ ಮೂರು ವಾರಗಳ ಬೆಡ್ ರೆಸ್ಟ್ ಬೇಕು ಅಂತ ವಿಚಾರಣೆಗೆ ಗೈರಾಗಿದ್ದಾರೆ. ಶಾಖಾದ್ರಿ ಕಡೆಯವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಆದ್ರೆ, ಎಸ್.ಡಿ.ಪಿ.ಐ. ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಅರ್ಚಕರ ಬಂಧನ, ಶಾಖಾದ್ರಿ ಮೇಲೆ ಕೇಸ್ ಹಾಕಿದ್ದು ಎಷ್ಟು ಸರಿ. ಬಡವರಿಗೆ ಮಾತ್ರ ಕಾನೂನು ಇರೋದಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಶ್ರೀ ರಾಮಸೇನೆ ವತಿಯಿಂದ ನಡೆಯುವ ದತ್ತ ಜಯಂತಿಗೆ ಕಾಫಿನಾಡು ಹೈಅಲರ್ಟ್
ಎಫ್.ಐ.ಆರ್. ದಾಖಲಿಸಿ ವಿಚಾರಣೆಗೆ ನೋಟೀಸ್ ನೀಡಿದ್ದ ಅರಣ್ಯ ಇಲಾಖೆ
ರಾಜ್ಯದಲ್ಲಿ ಹುಲಿ ಉಗುರು-ಚರ್ಮದ ಸುದ್ದಿ ಜೋರಾಗ್ತಿದ್ದಂತೆ ಅರಣ್ಯ ಇಲಾಖೆಯವರು ಇಬ್ಬರು ಅರ್ಚಕರನ್ನ ಬಂಧಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಯನ್ನೇ ವಿಚಾರಣೆಗೆ ಒಳಪಡಿಸಿದ್ದರು. ಅವಧೂತ ವಿನಯ್ ಗುರೂಜಿಯನ್ನೂ ಬಿಡಲಿಲ್ಲ. ಈ ಮಧ್ಯೆ ಶಾಖಾದ್ರಿ ಹುಲಿ ಚರ್ಮದ ಮೇಲೆ ಕೂತ ಫೋಟೋ ವೈರಲ್ ಆಗುತ್ತಿದ್ದಂತೆ ಶಾಖಾದ್ರಿ ಮನೆ ಮೇಲೂ ದಾಳಿ ಮಾಡಿದ್ದರು. ಅಲ್ಲಿ ಹುಲಿ ಚರ್ಮ ಸಿಕ್ಕಿರಲಿಲ್ಲ. ಆದರೆ, ಈಗ ಶಾಖಾದ್ರಿ ಕಡೆಯವರು ಆ ಹುಲಿ ಚರ್ಮ ಅರಣ್ಯ ಇಲಾಖೆಯ ಬಳಿಯೇ ಇದೆ ಎಂದಿದ್ದಾರೆ. ಶಾಖಾದ್ರಿ ಮನೆ ಕಳ್ಳತನವಾಗಿತ್ತು. ಆಗ ಪೊಲೀಸರು ಕಳ್ಳರನ್ನ ಹಿಡಿದಾಗ ಆ ಹುಲಿ ಚರ್ಮವನ್ನ ಪೊಲೀಸರು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಿದ್ದರು ಎಂದಿದ್ದಾರೆ. ಆದರೆ, ಈಗ ಜಿಂಕೆ-ಹುಲಿ ಚರ್ಮದ ಬಗ್ಗೆ ನೋಟೀಸ್ ನೀಡಿರುವ ಅರಣ್ಯ ಇಲಾಖೆಯವ್ರು ಶಾಖಾದ್ರಿ ಹೆಸರನ್ನೇ ಹಾಕದೆ ನಿಮ್ಮ ಮನೆ ಎಂದು ಹಾಕಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ, ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರೋ ಎಸ್.ಡಿ.ಪಿ.ಐ. ಕೆಲವರಿಗೆ ಕಾನೂನಿನ ಅರಿವು ಕಡಿಮೆ ಇದ್ದು ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಅರಣ್ಯ ಇಲಾಖೆ ವಸ್ತುಗಳನ್ನ ಸೀಜ್ ಮಾಡಬಹುದಿತ್ತು. ಬಂಧನ ಸರಿಯಲ್ಲ. ಇಲ್ಲವಾದರೆ, ಅರಣ್ಯ ಇಲಾಖೆಗೆ ಒಪ್ಪಿಸಲು ಸಮಯ ನೀಡಬೇಕಿತ್ತು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಾರೆ, ಇದೀಗ ಅರಣ್ಯ ಇಲಾಖೆ ನಡೆ ಮೇಲೆ ಜನಸಾಮಾನ್ಯರಿಗೆ ನಾನಾ ರೀತಿ ಅನುಮಾನ ಮೂಡಿದೆ. ಜನಸಾಮಾನ್ಯರು, ಅರ್ಚಕರು, ಅಧಿಕಾರಿಗಳನ್ನ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶಾಖಾದ್ರಿಗೆ ನೋಟೀಸ್ ನೀಡಿದ್ದು ಏಕೆ. ಅವರು ಬರದಿದ್ದರೂ ಸುಮ್ಮನಿರೋದು ಏಕೆ ಎಂದು ಅರಣ್ಯ ಇಲಾಖೆಯನ್ನ ಪ್ರಶ್ನಿಸಿದ್ದಾರೆ. ಶಾಖಾದ್ರಿಗೆ ದಾಖಲೆ ತರುವಂತೆ ನೋಟೀಸ್ ನೀಡಿದ ಅಧಿಕಾರಿಗಳು ಅರ್ಚಕರನ್ನ ಏಕೆ ಬಂಧಿಸಿ ಕೇಸ್ ದಾಖಲಿಸಿ ಜೈಲಿಗಟ್ಟಿದ್ರಿ ಎಂದು ಪ್ರಶ್ನಿಸಿದ್ದಾರೆ.