*   3ನೇ ಅಲೆ ಬರದಂತೆ ಮುನ್ನೆಚ್ಚರಿಕೆ: ಗೌರವ್‌ ಗುಪ್ತಾ*   ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಪ್ರಕರಣಗಳ ಬಗ್ಗೆ ನಿಗಾ*   ಸೆರೋ ಸರ್ವೇ, ಚರಂಡಿಯಲ್ಲಿ ವೈರಸ್‌ ಪತ್ತೆಗೆ ಪ್ರಯೋಗ 

ಬೆಂಗಳೂರು(ಅ. 23):  ಮುಂದಿನ ದಿನಗಳಲ್ಲಿ ಯಾರಾರ‍ಯರು ಮೊದಲ ಲಸಿಕೆ(Vaccine) ಪಡೆದಿದ್ದಾರೋ ಅವರಿಗೆ 12 ವಾರಗಳ ಬಳಿಕ ಎರಡನೇ ಡೋಸ್‌ ಕೊಡುವಂತೆ ವ್ಯವಸ್ಥೆ ಮಾಡಿದ್ದೇವೆ. ನಮ್ಮಲ್ಲಿ ಲಸಿಕೆ ಮತ್ತು ಮಾಸ್ಕ್‌(Mask) ಧರಿಸುವ ಪ್ರಕ್ರಿಯೆ ಇರುವುದರಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gourav Gupta) ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಲಸಿಕಾಕರಣದ ಪರಿಸ್ಥಿತಿ ಉತ್ತಮವಾಗಿದೆ. ಶೇ.86ರಷ್ಟು ಮೊದಲ ಡೋಸ್‌, ಶೇ.55ಕ್ಕಿಂತ ಹೆಚ್ಚು ದ್ವಿತೀಯ ಡೋಸ್‌ ಪಡೆದಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಎಷ್ಟು ಹೊಸ ಪ್ರಕರಣ ಬರುತ್ತಿವೆ ಮತ್ತು ಎಷ್ಟು ಜನ ಆಸ್ಪತ್ರೆಗೆ(Hosital) ದಾಖಲಾಗುತ್ತಿದ್ದಾರೆ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ದಿನಕ್ಕೆ 10 ಜನರು ಹೊಸದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸೋಂಕಿತ(Infected) ಪ್ರಕರಣಗಳಲ್ಲೂ ಇಳಿಕೆಯಾಗಿದೆ. ಸೆರೋ ಸರ್ವೆ, ಜಿನೊಮ್‌ ಸಿಕ್ವೆನ್ಸಿಂಗ್‌(ಪ್ರಬೇಧ ಪತ್ತೆ) ಮಾಡುವ ಮತ್ತು ಚರಂಡಿಯಲ್ಲಿ ವೈರಸ್‌(Virus) ಪತ್ತೆ ಮಾಡುವ ಹೊಸ ಪ್ರಯೋಗ ಕಾರ್ಯ ನಡೆದಿದೆ. ಈ ಎಲ್ಲ ಕೆಲಸವನ್ನು ವಾರ್‌ ರೂಮ್‌ ಮೂಲಕ ಪರಿಶೀಲಿಸುತ್ತಿದ್ದು, ಯಾವುದೇ ರೀತಿಯಲ್ಲಿ ಮೂರನೇ ಅಲೆ ಬರದಂತೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಬೆಂಗ್ಳೂರಲ್ಲಿ 2ನೇ ಡೋಸ್‌ ಪಡೆಯುವವರ ಸಂಖ್ಯೆ ಹೆಚ್ಚಳ

ಮಕ್ಕಳಿಗೆ ಲಸಿಕೆ: 

ಮಕ್ಕಳಿಗೆ ಲಸಿಕೆ ಕೊಡುವ ವಿಷಯದಲ್ಲಿ ಎರಡು ಲಸಿಕೆಗಳಿಗೆ ಕೇಂದ್ರ ಅನುಮೋದನೆ ನೀಡಿದೆ. ಆದರೆ, ಸರಬರಾಜು ಮತ್ತು ವಿತರಣೆ ಎಷ್ಟು ಪ್ರಮಾಣದಲ್ಲಿ ಆಗುತ್ತದೆ ಹಾಗೂ ಎಷ್ಟು ಡೋಸ್‌ ಕೊಡಬೇಕೆಂಬುದು ಇನ್ನೂ ಸ್ಪಷ್ಟವಾಗಿ ಆದೇಶ ಬರಬೇಕಿದೆ. ಕೇಂದ್ರ ಸರ್ಕಾರ(Central Government) ಈ ಬಗ್ಗೆ ತೀರ್ಮಾನಕ್ಕೆ ಬಂದ ನಂತರ ಮೊದಲ ಹಂತವಾಗಿ 12ರಿಂದ 17 ವರ್ಷದ ಮಕ್ಕಳಿಗೆ(Children) ಲಸಿಕೆ ಕೊಡುತ್ತೇವೆ. ಆ ನಂತರ ಅದಕ್ಕಿಂತ ಚಿಕ್ಕವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದರು.