ಚುನಾವಣೆಗೆ ಅನರ್ಹರಿಗೆ ಸ್ಪರ್ಧಿಸಲು ಅವಕಾಶ : ನ್ಯಾಯಾಲಯ ಆದೇಶ
ಸೆ.28ರಂದು 7ವಾರ್ಡ್‌ಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಚುನಾವಣಾ ಅಯೋಗ ಆದೇಶ ಹೊರಡಿಸಿದ್ದ ಬೆನ್ನಲ್ಲೆ ಅನರ್ಹಗೊಂಡ ಏಳು ಮಂದಿ ಸದಸ್ಯರಿಗೂ ಹೈಕೋರ್ಚ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ.
ಎನ್. ನಾಗೇಂದ್ರಸ್ವಾಮಿ
ಕೊಳ್ಳೇಗಾಲ: (ಅ.14) : ಸೆ.28ರಂದು 7ವಾರ್ಡ್‌ಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಚುನಾವಣಾ ಅಯೋಗ ಆದೇಶ ಹೊರಡಿಸಿದ್ದ ಬೆನ್ನಲ್ಲೆ ಅನರ್ಹಗೊಂಡ ಏಳು ಮಂದಿ ಸದಸ್ಯರಿಗೂ ಹೈಕೋರ್ಟ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ.
ಈ ಕುರಿತು ಗುರುವಾರ ಸಂಜೆ ಹೈಕೋರ್ಟ್ ಆದೇಶ ಹೊರಡಿಸಿದ್ದು, ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ 7ಮಂದಿಗೂ ಸ್ಪರ್ಧೆಗೆ (ನಾಮಪತ್ರ ಸಲ್ಲಿಸಲು) ಅವಕಾಶ ನೀಡಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ.
ಹೈಕೋರ್ಟ್ ಆದೇಶದಿಂದ ಸ್ಪರ್ಧಿಸಲು ಅವಕಾಶ ಇಲ್ಲ ಎಂದು ನಿರಾಸೆಗೊಂಡಿದ್ದ ನಾಗಸುಂದ್ರಮ್ಮ ಜಗದೀಶ್, ಶಂಕನಪುರ ಪ್ರಕಾಶ್, ರಾಮಕೃಷ್ಣ, ನಾಸೀರ್ ಪಾಶಾ, ನಾಗಮಣಿ, ಗಂಗಮ್ಮ ವರದರಾಜು, ಪವಿತ್ರ ರಮೇಶ್ ಸೇರಿದಂತೆ 7ಮಂದಿಗೂ ಹೆಚ್ಚಿನ ಉತ್ಸಾಹ ದೊರೆತಿದ್ದು ಸಂತಸ ತಂದಿದೆ.
ಈಗಾಗಲೇ 10ರಂದು ಜಿಲ್ಲಾಧಿಕಾರಿಗಳು 2, 6,7,13, 21, 25 ಹಾಗೂ 26ವಾರ್ಡ್‌ಗಳಿಗೆ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದು ನಾಮಪತ್ರ ಸಲ್ಲಿಸಲು 17 ಕೊನೆ ದಿನ ಎಂದು ಘೋಷಿಸಿದೆ. ಈ ಬೆನ್ನಲೆ ಆಯೋಗ ಅನರ್ಹಗೊಂಡ ಸದಸ್ಯರು ಸ್ಪರ್ಧಿಸುವಂತಿಲ್ಲ ಎಂಬ ಆದೇಶವನ್ನು ಶನಿವಾರ ಹೊರಡಿಸಿತ್ತು. ಈ ಕುರಿತು ಕನ್ನಡಪ್ರಭ ಅ.9ರಂದು ಆಯೋಗದ ಆದೇಶ ಪ್ರಶ್ನಿಸಿ ಅನರ್ಹ ಸದಸ್ಯರು ಸೋಮವಾರ ನ್ಯಾಯಾಲಯದ ಮೊರೆ ತೆರಳಿದ್ದಾರೆ ಎಂಬ ಕುರಿತು ವಾಸ್ತವ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
ಸೋಮವಾರ 10ರಂದು 7ಮಂದಿ ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈಹಿನ್ನೆಲೆ ನ್ಯಾಯಾಲಯ ಇಂದು ವಿಚಾರಣೆ ನಡೆಸಿ 7ಮಂದಿಗೂ ಸ್ಪರ್ಧೆಗೆ ಅವಕಾಶ ನೀಡುವಂತೆ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೆಶನ ನೀಡಿದೆ. ಇದರಿಂದ ನಿರಾಶರಾಗಿದ್ದ 7ಮಂದಿಗೂ ಉತ್ಸಾಹ ಮೂಡಿದ್ದು, ಬಿಜೆಪಿಯಿಂದ ಸ್ಪರ್ಧಿಸಲು ಉತ್ಸುಕರಾಗಿದ್ದು, ಶಾಸಕ ಮಹೇಶ್ ಸಹಕಾರ ಪಡೆದು ಟಿಕೆಟ್ ಗಿಟ್ಟಿಸುವ ಕಸರತ್ತು ಪ್ರಾರಂಭಿಸಿದ್ದಾರೆ. ಈಗಾಗಲೇ ಶಾಸಕರು ಸಹ ಬಿಜೆಪಿ ವರಿಷ್ಠರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಬಹುತೇಕ 7ಮಂದಿಗೂ ಟಿಕೆಟ್ ಅಂತಿಮ ಎನ್ನಲಾಗುತ್ತಿದೆ.
ಈ ಕುರಿತು ಚುನಾವಣಾ ಅಯೋಗ ಹಾಗೂ ಜಿಲ್ಲಾಡಳಿತ ಯಾವ ರೀತಿ ಕ್ರಮಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
ಚುನಾವಣಾ ಅಯೋಗ ಏಳು ಮಂದಿ ಸ್ಪರ್ಧಿಸುವಂತಿಲ್ಲ ಎಂಬ ಆದೇಶ ನೀಡಿತ್ತು. ಈ ಹಿನ್ನೆಲೆ ಹೈಕೋರ್ಚ್‌ಗೆ ಮೊರೆ ತೆರಳಿದ್ದೆವೆ. ನ್ಯಾಯಾಲಯದ ನಮ್ಮ ಪರ ತೀರ್ಪು ನೀಡಿದ್ದು, ಇದರಿಂದ ನಮಗೆ ಸಂತಸವಾಗಿದೆ. ಬಿಜೆಪಿ ಎಲ್ಲಾ ಹಿರಿಯರು, ಗಣ್ಯರ ಸಹಕಾರ ಪಡೆದು ಶಾಸಕರ ಜೊತೆ ಚರ್ಚಿಸಿ ಬಿಜೆಪಿಯಿಂದ ಅವಕಾಶ ಕಲ್ಪಿಸಿ, ಮತ್ತೊಮ್ಮೆ ಸೇವೆಗೆ ಅನುವು ಮಾಡಿ ಎಂದು ಮನವಿ ಮಾಡುತ್ತೇವೆ
- 7 ಮಂದಿಗೂ ಪಕ್ಷ ಬಿಜೆಪಿ ಟಿಕೆಟ್ ನೀಡುವ ವಿಶ್ವಾಸವಿದೆ.
- -ರಾಮಕೃಷ್ಣ, ನಾಗಸುಂದ್ರಮ್ಮ ಜಗದೀಶ್, ಟಿಕೆಟ್ ಆಕಾಂಕ್ಷಿಗಳು
- ಸೆ.28ರಂದು 7ವಾರ್ಡ್‌ಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಚುನಾವಣಾ ಅಯೋಗ
- ಚುನಾವಣಾ ಅಯೋಗ ಆದೇಶ ಹೊರಡಿಸಿದ್ದ ಬೆನ್ನಲ್ಲೆ ಅನರ್ಹಗೊಂಡ ಏಳು ಮಂದಿ ಸದಸ್ಯರಿಗೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ
- 7ಮಂದಿಗೂ ಹೆಚ್ಚಿನ ಉತ್ಸಾಹ ದೊರೆತಿದ್ದು ಸಂತಸ ತಂದಿದೆ.
-
ಏನಿದು ಪ್ರಕರಣ?:
ಕೊಳ್ಳೇಗಾಲ ನಗರಸಭೆಯ 2,6,7,13,21,25, ಹಾಗೂ 26 ನೇ ವಾರ್ಡ್‌ಗಳಲ್ಲಿ ಚುನಾವಣೆ ನಿಗಯಾಗಿದೆ. ಈ ವಾರ್ಡ್‌ಗಳಿಂದ ನಾಗಮಣಿ, ಗಂಗಮ್ಮ ವರದರಾಜು, ಪವಿತ್ರ, ರಾಮಕೃಷ್ಣ, ನಾಸೀರ್ ಷರೀಫ್, ನಾಗಸುಂದ್ರಮ್ಮ, ಶಂಕನಪುರ ಪ್ರಕಾಶ್ ಆಯ್ಕೆಯಾಗಿದ್ದರು. ಜೊತೆಗೆ ಜಯರಾಜು, ಜಯಮೇರಿ ಸೇರಿ 9ಮಂದಿ ಬಿಎಸ್ಪಿಯಿಂದ ಗೆಲುವು ಸಾಧಿಸಿ ಶಾಸಕರ ಜೊತೆ ಗುರುತಿಸಿಕೊಂಡಿದ್ದರು. ಅಂದು 9 ಮಂದಿ ಸಹ ಶಾಸಕ ಮಹೇಶ್ ಅವರ ಬಣದಲ್ಲಿದ್ದರು, ಬದಲಾದ ರಾಜಕೀಯ ಸನ್ನಿವೇಶದಿಂದ 9ಮಂದಿಯಲ್ಲಿ ಜಯರಾಜು ಮತ್ತು ಜಯಮೇರಿ ಮೂಲ ಬಿಎಸ್ಪಿಯಲ್ಲಿ ಉಳಿದರೆ, ಉಳಿದ 7ಮಂದಿ ಶಾಸಕರ ಜೊತೆ ಗುರುತಿಸಿಕೊಂಡರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ 2020ರ ಅ.29ರಲ್ಲಿ ವ್ಹಿಪ್ ಉಲ್ಲಂಘಿಸಿದ್ದರು ಎಂದು ಜಯಮೇರಿ ನೀಡಿದ ದೂರಿನ ಹಿನ್ನೆಲೆ ಅಂದಿನ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಸದಸ್ಯತ್ವ ಅನರ್ಹಗೊಳಿಸಿದ್ದರು, ಈ ಬೆಳವಣಿಗೆ ಪ್ರಶ್ನಿಸಿ 7ಮಂದಿ ಹೈಕೋರ್ಚ್ ಮೆಟ್ಟಿಲೆರಿದ್ದರು, ಬಳಿಕ ನಡೆದ ವಿಚಾರಣೆಯಲ್ಲಿ ಪ್ರಸ್ತುತ ಚುನಾವಣಾ ಆಯೋಗ ಚುನಾವಣೆ ನಡೆಸಲು 7ವಾರ್ಡ್‌ಗಳಿಗೂ ಸೂಚಿಸಿದೆ. ಪುನಃ ಉಪಚುನಾವಣೆಯಲ್ಲಿ ಅನರ್ಹ 7ಮಂದಿ ಸ್ಪರ್ಧಿಸುವಂತಿಲ್ಲ ಎಂದು ಸೂಚಿಸಿದೆ. ಜಿಲ್ಲಾಡಳಿತ, ತಾ.ಆಡಳಿತ ಚುನಾವಣೆಗೆ ಸಜ್ಜಾಗಿದ್ದು, ಅಗತ್ಯ ಕ್ರಮಕೈಗೊಂಡಿದೆ.
ಉಪ ಚುನಾವಣೆ : ಸ್ಥಾನ ಉಳಿವಿಗೆ ಶಾಸಕರ ಕಸರತ್ತು
ಶಾಸಕರ ಜೊತೆ ಚರ್ಚಿಸುವ ಸಾಧ್ಯತೆ?:
ಶಾಸಕ ಮಹೇಶ್ ಆಪ್ತರಾಗಿರುವ 7ಮಂದಿಯೂ ಶಾಸಕ ಮಹೇಶ್ ಅವರ ಜೊತೆ ಅಂತಿಮವಾಗಿ ಚರ್ಚಿಸಿ ನಂತರ ತಮ್ಮ ತೀರ್ಮಾನವನ್ನು ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸಕರು ಉಪಚುನಾವಣೆಗೆ ಅವಕಾಶ ಕಲ್ಪಿಸುತ್ತಾರೆ? ಇಲ್ಲವೇ ಕಾನೂನು ತಜ್ಞರ ಸಲಹೆ ಪಡೆದು ಯಾವ ತೀರ್ಮಾನ ಪ್ರಕಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ನಾಮಪತ್ರ ಸಲ್ಲಿಕೆಗೆ 17ಕಡೆ ದಿನ
ಕೊಳ್ಳೇಗಾಲ ನಗರಸಭೆ 7 ವಾರ್ಡ್‌ಗಳಿಗೆ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಸಲು 17 ಕಡೆಯ ದಿನವಾಗಿದೆ. 18 ರಂದು ನಾಮಪತ್ರಗಳ ಪರಿಶೀಲನೆ, ನಾಮಪತ್ರ ಹಿಂತೆಗೆದುಕೊಳ್ಳಲು 20 ಕಡೆ ದಿನವಾಗಿದೆ. 28 ರಂದು ಬೆಳಗ್ಗೆ 7 ರಿಂದ ಸಂಜೆ 5 ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅಗತ್ಯವಿದ್ದಲ್ಲಿ 30 ರಂದು ಮರುಮತದಾನ ನಡೆಯಲಿದೆ. 31ರಂದು ಎಣಿಕಾ ಕಾರ್ಯ ಜರುಗಲಿದೆ.