ಬೆಂಗಳೂರು[ಮಾ.02]: ಮೂರು ಕಾರುಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಆರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ವೆಂಕಟಾಲ ಮೇಲ್ಸೇತುವೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಯಲಹಂಕ ಸಂಚಾರ ಠಾಣೆ ಪೊಲೀಸರು ತಿಳಿಸಿದರು. ಭಾನುವಾರ ರಾತ್ರಿ ಕಾರೊಂದು ವೆಂಕಟಾಲ ಮೇಲ್ಸೇತುವೆ ಮೇಲೆ ಹೋಗುತ್ತಿದ್ದ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಗುದ್ದಿದೆ. ಬಳಿಕ ಹಿಂಬದಿ ಬರುತ್ತಿದ್ದ ಮತ್ತೊಂದು ಕಾರು ಮುಂಭಾಗದಲ್ಲಿ ಅಪಘಾತಕ್ಕೀಡಾಗಿದ್ದ ಕಾರಿಗೆ ಗುದ್ದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೂರು ಕಾರಿನಲ್ಲಿದ್ದವರಿಗೂ ಗಾಯವಾಗಿದೆ. ಅಪಘಾತದ ತೀವ್ರತೆಗೆ ಮೂರು ಕಾರುಗಳು ಸಂಪೂರ್ಣ ಜಖಂಗೊಂಡಿದ್ದವು ಎಂದು ಯಲಹಂಕ ಸಂಚಾರ ಠಾಣೆ ಪೊಲೀಸರು ತಿಳಿಸಿದರು.