ಕೆ.ಆರ್‌. ರವಿಕಿರಣ್‌

ದೊಡ್ಡಬಳ್ಳಾಪುರ [ಸೆ.13] :  ಸ್ಥಿತಿವಂತ ಕುಟುಂಬದವರು ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ಒದಗಿಸುವ ಮೂಲಕ ಅನಧಿಕೃತ ಬಿಪಿಎಲ್‌ ಪಡಿತರ ಚೀಟಿಯನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸರ್ಕಾರಕ್ಕೆ ಬಿಪಿಎಲ್‌ ಪಡಿತರ ಚೀಟಿಯನ್ನು ಹಿಂದಿರುಗಿಸುವುದು ಅವಶ್ಯಕವಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳ ಸಾರ್ವಜನಿಕರು ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ದುರ್ಬಲ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸುವ ಹಿತದೃಷ್ಟಿಯಿಂದ ಬಿಪಿಎಲ್‌ ಪಡಿತರ ಚೀಟಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿತರಿಸಿದ್ದು, ಇದನ್ನು ವ್ಯಾಪಕವಾಗಿ ಕೆಲವರು ದುರುಪಯೋಗ ಪಡಿಸಿಕೊಂಡಿರುವುದು ಕಂಡುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕ ಡಾ.ಆರ್‌.ಡಿ. ಸುಬ್ರಹ್ಮಣ್ಯ, ಆದಾಯ ತೆರಿಗೆಯನ್ನು ಪಾವತಿಸುತ್ತಿರುವ ಕುಟುಂಬದವರು, 10 ಚದರ ಅಡಿ ಅಥವಾ ಅದಕ್ಕಿಂತಲೂ ದೊಡ್ಡ ಮನೆ ಹೊಂದಿರುವವರು, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ವಿದ್ಯುತ್‌ಚ್ಛಕ್ತಿ ಇಲಾಖೆ, ರೈಲ್ವೆ ಇಲಾಖೆ, ಪೊಲೀಸ್‌ ಇಲಾಖೆ, ಸಹಕಾರ ಸಂಘಗಳ ಇಲಾಖೆ, ಸ್ವಾಯುತ್ತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರು, ಆರೋಗ್ಯ ಇಲಾಖೆಯ ನೌಕರರು, ವಕೀಲರು, ಉತ್ತಮ ವ್ಯಾಪಾರವನ್ನು ಹೊಂದಿರುವವರು, ಹೋಟೆಲ್‌ ಉದ್ಯಮಿಗಳು, ಸ್ವಂತ ಕಾರು, ಲಾರಿ, ಬಸ್ಸು, ಜೆಸಿಬಿ ಇತ್ಯಾದಿ ವಾಹನಗಳನ್ನು ಹೊಂದಿರುವವರು, ಅನುದಾನಿತ ಶಾಲಾ ಕಾಲೇಜು ನೌಕರರು, ಗುತ್ತಿಗೆದಾರರು, ಕಮೀಷನ್‌ ಏಜೆಂಟ್‌ರು, ಮನೆ - ಮಳಿಗೆ ಕಟ್ಟಡಗಳನ್ನು ಕಟ್ಟಿಬಾಡಿಗೆ ವರಮಾನ ಪಡೆಯುತ್ತಿರುವವರು, ಬಹುರಾಷ್ಟ್ರೀಯ ಕಂಪನಿಯ ನೌಕರರು, ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ಇನ್ನಿತರೆ ಆರ್ಥಿಕವಾಗಿ ಸಬಲವಾಗಿರುವ ಕುಟುಂಬಗಳು ಬಿಪಿಎಲ್‌ ಪಡಿತರ ಚೀಟಿಗಳನ್ನು ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವುದು ಕಂಡುಬಂದಿದೆ. ಸರ್ಕಾರದ ಕಾರ್ಯಕ್ರಮವನ್ನು ದುರುಪಯೋಗ ಪಡಿಸಿಕೊಂಡವರ ವಿರುದ್ಧ ರಾಜ್ಯ ಅನಧಿಕೃತ ಪಡಿತರ ಚೀಟಿ ನಿಯಂತ್ರಣ ಕಾಯ್ದೆ-1977ರ ಅಡಿ ಕ್ರಮ ಜರುಗಿಸಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೆ. 30 ಕೊನೆ ದಿನ:  ಅನಧಿಕೃತ ಬಿಪಿಎಲ್‌ ಪಡಿತರ ಚೀಟಿಯನ್ನು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಸರ್ಕಾರಕ್ಕೆ ಬಿಪಿಎಲ್‌ ಪಡಿತರ ಚೀಟಿಯನ್ನು ಹಿಂದಿರುಗಿಸಲು ಸೆಪ್ಟೆಂಬರ್‌ 30ಕೊನೆಯ ದಿನವಾಗಿರುತ್ತದೆ. ನಿಗದಿತ ಅವಧಿ ಒಳಗೆ ಅನರ್ಹ ಬಿಪಿಎಲ್‌ ಪಡಿತರ ಚೀಟಿ ಹಿಂದಿರುಗಿಸಿದಲ್ಲಿ ಅಂತಹ ಪಡಿತರ ಚೀಟಿ ರದ್ದುಪಡಿಸಿ, ಯಾವುದೇ ಕ್ರಮ ಜರುಗಿಸದೆ ಎಪಿಎಲ್‌ ಪಡಿತರ ಚೀಟಿಯನ್ನು ನೀಡಲಾಗುವುದು.

ಸರ್ಕಾರ ಸಮೀಕ್ಷೆ ನಡೆಸಲಿದೆ:

ನಿಗದಿತ ಅವಧಿ ಮೀರಿದ ನಂತರ ಸರ್ಕಾರವೇ ಮನೆ-ಮನೆ ಸಮೀಕ್ಷೆ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರು ಕಂಡುಬಂದಲ್ಲಿ ಅವರು ಪಡಿತರ ಚೀಟಿಯನ್ನು ಪಡೆದ ದಿನಾಂಕದಿಂದ ಈ ತಿಂಗಳವರೆಗೆ ಪಡೆದಿರುವ ಅಕ್ಕಿ ಹಾಗೂ ಇತರೆ ಅಗತ್ಯ ವಸ್ತುಗಳ ಪ್ರಮಾಣವನ್ನು ಲೆಕ್ಕಾಚಾರ ಮಾಡಿ 1 ಕೆಜಿ ಅಕ್ಕಿಗೆ ರು. 35ರಂತೆ ಹಾಗೂ 1 ಕೆಜಿ ತೊಗರಿ ಬೇಳೆಗೆ ರು.100ರಂತೆ ಲೆಕ್ಕಾಚಾರ ಮಾಡಿ ಪೂರ್ಣ ಮೊತ್ತವನ್ನು ಸರ್ಕಾರಕ್ಕೆ ಸಂದಾಯ ಮಾಡಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಇದನ್ನು ಪಾಲಿಸದೆ ಇದ್ದಲ್ಲಿ ಭೂ ಕಂದಾಯ ಹಾಗೂ ರಾಜ್ಯ ಅನಧಿಕೃತ ಪಡಿತರ ಚೀಟಿ ನಿಯಂತ್ರಣ ಕಾಯ್ದೆ-1977ರಡಿ ಮೊಕದ್ದಮೆ ಹೂಡಲಾಗುವುದು ಎಂದರು.