ಬೆಂಗಳೂರು [.03]:  ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ಮೊದಲ ಹಂತದಲ್ಲಿ ಕೆ.ಆರ್‌.ಪುರಂನ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್‌ ಸಿಲ್‌್ಕ ಬೋರ್ಡ್‌ ಜಂಕ್ಷನ್‌ ವರೆಗೆ ‘ಪ್ರತ್ಯೇಕ ಬಸ್‌ ಪಥ’ ನಿರ್ಮಾಣ ಸಂಬಂಧ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಬುಧವಾರ ಅಧಿಕಾರಿಗಳೊಂದಿಗೆ ಮಾರ್ಗ ಪರಿಶೀಲನೆ ನಡೆಸಿದರು.

ಬೆಳಗ್ಗೆ ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಅಧಿಕಾರಿಗಳೊಂದಿಗೆ ಪ್ರಯಾಣಿಸಿ, ಪರೀಶೀಲಿಸಿದರು. ಮಾರ್ಗದಲ್ಲಿನ ಬಸ್‌ ನಿಲ್ದಾಣ ಹಾಗೂ ಇತರೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. ಪ್ರತ್ಯೇಕ ಪಥ ಬಳಕೆ ಮಾಡುವ ಇತರೆ ವಾಹನಗಳ ವಿರುದ್ಧ ಮೋಟಾರ್‌ ವಾಹನ ಕಾಯ್ದೆ ನಿಯಮದಡಿ ಕ್ರಮ ತೆಗೆದುಕೊಳ್ಳುವಂತೆ ನಗರ ಸಂಚಾರ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಮಾರ್ಗದಲ್ಲಿ 18.5 ಕಿ.ಮೀ ಉದ್ದವಿದ್ದು, ನವೆಂಬರ್‌ 1ರೊಳಗೆ 10 ಕಿ.ಮೀ. ದೂರದ ಪಥ ನಿರ್ಮಾಣ ಪೂರ್ಣಗೊಳ್ಳಲಿದೆ. ಉಳಿದ ಭಾಗವನ್ನು ಡಿಸೆಂಬರ್‌ ವೇಳೆಗೆ ಸಿದ್ಧಪಡಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಅಧಿಕಾರಿಗಳಿಗೆ ತರಾಟೆ

ಮಾರ್ಗ ಪರೀಶೀಲನೆ ವೇಳೆ ಬಿ.ನಾರಾಯಣಪುರದಲ್ಲಿ ಬಸ್‌ ನಿಲ್ಲಿಸಿ, ಬಸ್‌ ನಿಲ್ದಾಣ ಪರಿಶೀಲಿಸಿದ ಸಚಿವರು, ನಿಲ್ದಾಣದಲ್ಲಿ ನಾಮಫಲಕ ಸೇರಿ ಮೂಲಸೌಕರ್ಯ ಕೊರತೆ ಇರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕೆಲ ಪ್ರಯಾಣಿಕರು ಸಚಿವರನ್ನು ಭೇಟಿಯಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ನಿಂತಿದ್ದರೂ ಅತ್ತ ಚಿತ್ತ ಹರಿಸದೆ ನೇರವಾಗಿ ಬಸ್‌ ಸೇರಿ ಸ್ಥಳದಿಂದ ನಿರ್ಗಮಿಸಿದರು. ಇದಕ್ಕೆ ಕೆಲ ಪ್ರಯಾಣಿಕರು ಅಸಮಾಧಾನ ಹೊರಹಾಕಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸದಾ ವಾಹನ ದಟ್ಟಣೆಯಿರುವ ಕೆ.ಆರ್‌.ಪುರ-ಸಿಲ್ಕ್ ಬೋರ್ಡ್‌ ರಸ್ತೆಯಲ್ಲಿ ಸಚಿವರ ಪರೀಶೀಲನೆ ಹಿನ್ನೆಲೆಯಲ್ಲಿ ಝೀರೋ ಟ್ರಾಫಿಕ್‌ ಕಲ್ಪಿಸಿದ್ದರಿಂದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಕೆಲ ಕಾಲ ವಾಹನ ಸವಾರರು ಪರದಾಡಿದರು.

ಸಿಹಿ ತಿನ್ನಲು 5 ಸಾವಿರ ನೀಡಿದ ಸಚಿವ

ಪ್ರತ್ಯೇಕ ಪಥ ಸ್ಥಳ ಪರಿಶೀಲನೆ ವೇಳೆ ಸಾರಿಗೆ ಸಚಿವ ಸವದಿ ಎಚ್‌ಎಸ್‌ಆರ್‌ ಲೇಔಟ್‌ನ ವೋಲ್ವೋ ಬಸ್‌ ಘಟಕಕ್ಕೆ ಭೇಟಿ ನೀಡಿ, ಸಿಬ್ಬಂದಿ ಜತೆಗೆ ಕಾಲ ಮಾತುಕತೆ ನಡೆಸಿದರು. ಸಚಿವರ ಅನಿರೀಕ್ಷಿತ ಭೇಟಿ ಕಂಡು ಸಿಬ್ಬಂದಿ ಸಂತೋಷಪಟ್ಟರು. ಇದೇ ವೇಳೆ ಸಚಿವರು ಗಾಂಧಿ ಜಯಂತಿ ಪ್ರಯುಕ್ತ ಸಿಹಿ ತಿನ್ನುವಂತೆ 5 ಸಾವಿರ ರು. ನೀಡಿದ್ದು ನೌಕರರ ಸಂಭ್ರಮ ಹೆಚ್ಚಿಸಿತು. ಬಳಿಕ ಬಿಟಿಎಂ ಲೇಔಟ್‌ನಲ್ಲಿ ನಿರ್ಮಿಸುತ್ತಿರುವ ಟಿಟಿಎಂಸಿ ಕಟ್ಟಡ ಕಾಮಗಾರಿ ವೀಕ್ಷಿಸಿ, ನಿಗದಿ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಿಸಲು ಹಾಗೂ ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರಕ್ಕೆ ಅನುವು ಮಾಡುವ ಉದ್ದೇಶದಿಂದ ಪ್ರಾಯೋಗಿಕವಾಗಿ ಒಂದು ಮಾರ್ಗದಲ್ಲಿ ‘ಪ್ರತ್ಯೇಕ ಬಸ್‌ ಪಥ’ ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಗ ಪರೀಶೀಲನೆ ಮಾಡಿದ್ದೇವೆ. ಇದರ ಯಶಸ್ಸು ಆಧರಿಸಿ ಉಳಿದ ಮಾರ್ಗಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ.

-ಲಕ್ಷ್ಮಣ ಸವದಿ, ಸಾರಿಗೆ ಸಚಿವ.