ಬೆಂಗಳೂರು [ಅ.02]:  ನಗರದಲ್ಲಿ ನಿಧಾನಗತಿ ಸಂಚಾರಕ್ಕೆ ಪರಿಹಾರ ಕಂಡುಕೊಳ್ಳಲು ಅತಿ ಹೆಚ್ಚು ವಾಹನ ಸಂಚಾರವಿರುವ 12 ಮಾರ್ಗಗಳಲ್ಲಿ ಪ್ರತ್ಯೇಕ ಬಸ್‌ ಮಾರ್ಗ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ನವೆಂಬರ್‌ 1ರಂದು ಎಂ.ಜಿ. ರಸ್ತೆಯಿಂದ ಸಿಲ್ಕ್ ಬೋರ್ಡ್‌ವರೆಗೆ ಮೊದಲ ಬಸ್‌ ಪಥಕ್ಕೆ ಚಾಲನೆ ದೊರೆಯಲಿದೆ.

ಬಿಬಿಎಂಪಿ, ಬಿಎಂಟಿಸಿ, ಸಂಚಾರ ಪೊಲೀಸರು ಮತ್ತು ಡಲ್ಟ್‌ ಸಂಸ್ಥೆಗಳು ಒಟ್ಟಾಗಿ ಬಸ್‌ ಪಥ ನಿರ್ಮಿಸುತ್ತಿವೆ. ನವೆಂಬರ್‌ ತಿಂಗಳಿನಿಂದ ಪ್ರತ್ಯೇಕ ಬಸ್‌ ಮಾರ್ಗಗಳು ಸೇವೆಗೆ ಲಭ್ಯವಾಗಲಿದೆ. ನ.1ರಂದು ಎಂಜಿ ರಸ್ತೆಯಿಂದ ವೆಲ್ಲಾರ ಜಂಕ್ಷನ್‌ ಮಾರ್ಗವಾಗಿ ಕೆ.ಆರ್‌.ಪುರ ಮತ್ತು ಸಿಲ್ಕ್ ಬೋರ್ಡ್‌ವರೆಗೆ 30 ಕಿ.ಮೀ. ಉದ್ದದ ಮೊದಲ ಬಸ್‌ ಪಥ ನಿರ್ಮಾಣವಾಗಲಿದೆ. ಅದಕ್ಕೆ ಈಗಾಗಲೆ ಸಿದ್ಧತೆ ನಡೆಸಲಾಗಿದ್ದು, ಬಿಬಿಎಂಪಿಯಿಂದ ನಿರ್ಧರಿಸಿದ ರಸ್ತೆಯಲ್ಲಿ ಬ್ಯಾರಿಕೇಡ್‌ಗಳ ಅಳವಡಿಕೆ ಕಾರ್ಯವನ್ನು ನಡೆಸಲಾಗುತ್ತಿದೆ. ಅದರ ಜತೆಗೆ ಮುಂದಿನ ದಿನಗಳಲ್ಲಿ ಹೊರವರ್ತುಲ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟರಸ್ತೆ, ಹಳೆ ಮದ್ರಾಸ್‌ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಮಾಗಡಿ ರಸ್ತೆ, ಬಳ್ಳಾರಿ ರಸ್ತೆಗಳಲ್ಲೂ ಪಥ ನಿರ್ಮಾಣವಾಗಲಿದೆ.

3.5 ಮೀ. ಅಗಲ :  ಬಸ್‌ ಪಥವು ಪ್ರತಿ ರಸ್ತೆಯಲ್ಲಿ 3.5 ಮೀ. ಅಗಲದ ಜಾಗವನ್ನು ಪಡೆದುಕೊಳ್ಳಲಿದೆ. ಪಥ ನಿರ್ಮಾಣದ ನಂತರ ಬಿಎಂಟಿಸಿ ಬಸ್‌ಗಳು ಆ ಮಾರ್ಗದಲ್ಲಿ ಮಾತ್ರ ಸಂಚರಿಸಬೇಕಿದೆ. ಅದನ್ನು ಹೊರತುಪಡಿಸಿ ಇತರ ವಾಹನ ಸಂಚಾರಕ್ಕಿರುವ ರಸ್ತೆಯಲ್ಲಿ ಸಂಚರಿಸುವುದಿಲ್ಲ. ಅದರಿಂದ ಬಿಎಂಟಿಸಿ ಬಸ್‌ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕದೆ ಇರುವುದಷ್ಟೇ ಅಲ್ಲದೆ, ಇನ್ನಿತರ ವಾಹನಗಳು ಹಾಗೂ ಬಸ್‌ಗಳಿಂದ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಇಲ್ಲದಂತಾಗಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಸಿಎಂ ಪರಿಶೀಲನೆ :  ಬಸ್‌ ಪಥ ನಿರ್ಮಾಣ ಮಾಡುತ್ತಿರುವ ರಸ್ತೆಯನ್ನು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಬುಧವಾರ ಪರಿಶೀಲನೆ ನಡೆಸಲಿದ್ದಾರೆ. ಕೆ.ಆರ್‌.ಪುರ ಟಿನ್‌ಫ್ಯಾಕ್ಟರಿಯಿಂದ ಸೆಂಟ್ರಲ್‌ ಸಿಲ್‌್ಕ ಬೋರ್ಡ್‌ವರೆಗಿನ ರಸ್ತೆಯನ್ನು ವೀಕ್ಷಿಸಲಿದ್ದಾರೆ.