ಬೆಂಗಳೂರು [ಅ.01]:  ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರ ಫೋಟೋ ತೆಗೆದು ಸಾರ್ವಜನಿಕರು ಕಳುಹಿಸಿದರೆ ತಪ್ಪಿತಸ್ಥರಿಗೆ ಇನ್ಮುಂದೆ ದಂಡ ವಿಧಿಸಲಾಗುತ್ತದೆ.

ಹೌದು, ಈ ಬಗ್ಗೆ ಖುದ್ದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರೇ ಟ್ವಿಟ್‌ ಮಾಡಿದ್ದಾರೆ.

ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ನಿಗಾ ಇರಿಸಲು ‘ಪಬ್ಲಿಕ್‌ ಐ’ ಜಾಲತಾಣ, ಆ್ಯಪ್‌ ರೂಪಿಸಿರುವ ಇಲಾಖೆ, ಉಲ್ಲಂಘನೆ ಬಗ್ಗೆ ಮಾಹಿತಿ ನೀಡುವಂತೆ ಜನರನ್ನು ಮನವಿ ಮಾಡಿದೆ. ಸಂಚಾರ ನಿಯಮಗಳನ್ನು ಯಾರಾದರೂ ಉಲ್ಲಂಘಿಸುವುದು ಕಂಡರೆ ಫೋಟೋ ತೆಗೆದು ಕಳುಹಿಸಿ, ತಪ್ಪಿಸ್ಥರಿಗೆ ದಂಡ ವಿಧಿಸಲಾಗುವುದು ಎಂದಿದ್ದಾರೆ. ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ‘ಪಬ್ಲಿಕ್‌ ಐ’ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.

 

ಅದರಲ್ಲೇ ಫೋಟೋ ಅಪ್‌ಲೋಡ್‌ ಮಾಡಿ. ನೀವು ಕಳುಹಿಸಿದ ಫೋಟೋವನ್ನು ಪರಿಶೀಲಿಸಿ ತಪ್ಪಿಸ್ಥರಿಗೆ ದಂಡದ ಇ-ಚಲನ್‌ ಕಳುಹಿಸ ಲಾಗುವುದು. ಫೋಟೋ ಕಳುಹಿಸಿದ ವ್ಯಕ್ತಿಯ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುವುದು. ಇಂದೇ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡು ನೀವು ನಾಗರಿಕ ಪೊಲೀಸ್‌ ಆಗಿ ಎಂದು ಟ್ವೀಟರ್‌ನಲ್ಲಿ ಭಾಸ್ಕರ್‌ ರಾವ್‌ ಅವರು ಮನವಿ ಮಾಡಿದ್ದಾರೆ.