ಮಧ್ಯವರ್ತಿಗಳಿಲ್ಲದೇ ರಾಗಿ ಮಾರಾಟ ಮಾಡಿ : ಕೆ. ಷಡಕ್ಷರಿ
ತಾಲೂಕಿನ ರೈತರು ತಾವು ಕಷ್ಟಪಟ್ಟು ಬೆಳೆದಿರುವ ರಾಗಿಯನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡದೆ ಅಥವಾ ದಲ್ಲಾಳಿಗಳ ಪಾಲಾಗದಂತೆ ಸರ್ಕಾರದ ರಾಗಿ ಖರೀದಿ ಕೇಂದ್ರಕ್ಕೆ ತಂದು ನೇರವಾಗಿ ತಮ್ಮ ದಾಖಲಾತಿಗಳೊಂದಿಗೆ ಮಾರಾಟ ಮಾಡುವ ಮೂಲಕ ಅದರ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಳ್ಳಬೇಕೆಂದು ಶಾಸಕ ಕೆ. ಷಡಕ್ಷರಿ ರೈತರಲ್ಲಿ ಮನವಿ ಮಾಡಿದರು.
ತಿಪಟೂರು : ತಾಲೂಕಿನ ರೈತರು ತಾವು ಕಷ್ಟಪಟ್ಟು ಬೆಳೆದಿರುವ ರಾಗಿಯನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡದೆ ಅಥವಾ ದಲ್ಲಾಳಿಗಳ ಪಾಲಾಗದಂತೆ ಸರ್ಕಾರದ ರಾಗಿ ಖರೀದಿ ಕೇಂದ್ರಕ್ಕೆ ತಂದು ನೇರವಾಗಿ ತಮ್ಮ ದಾಖಲಾತಿಗಳೊಂದಿಗೆ ಮಾರಾಟ ಮಾಡುವ ಮೂಲಕ ಅದರ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಳ್ಳಬೇಕೆಂದು ಶಾಸಕ ಕೆ. ಷಡಕ್ಷರಿ ರೈತರಲ್ಲಿ ಮನವಿ ಮಾಡಿದರು.
ನಗರದ ಎಪಿಎಂಸಿ ಆವರಣದಲ್ಲಿ ಶನಿವಾರ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ವತಿಯಿಂದ 2023 24 ನೇ ಸಾಲಿನ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ರಾಗಿ ಖರೀದಿ ಮಾಡಲು ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಮಳೆ ಇಲ್ಲದೆ ರಾಗಿ ಸೇರಿದಂತೆ ಬೆಳೆಗಳ ಇಳುವರಿ ಕಡಿಮೆಯಾಗಿದ್ದು ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಸರ್ಕಾರ ರೈತರೊಂದಿಗೆ ಸದಾ ಇರಲಿದೆ. ಜನವರಿ ೧ರಿಂದ ರಾಗಿ ಖರೀದಿ ಪ್ರಾರಂಭವಾಗಲಿದ್ದು ಕ್ವಿಂಟಲ್ ರಾಗಿಗೆ 3846 ರು. ನಂತೆ ಖರೀದಿಸಲಾಗುವುದು. ರಾಗಿ ಮಾರಾಟ ಮಾಡುವ ರೈತರು ಯಾವುದೇ ಅಧಿಕಾರಿಗಳಿಗೆ ಲಂಚ ನೀಡದೆ ಮಾರಾಟ ಮಾಡಿ. ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕವಾದಂತಹ ಬೆಲೆ ನಿಗದಿ ಪಡಿಸಲು ಇಂತಹ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಉಪವಿಭಾಗಾಧಿಕಾರಿ ಸಪ್ತಾಶ್ರೀ ಮಾತನಾಡಿ, ರೈತರು ಬೆಳೆದ ರಾಗಿಗೆ ವೈಜ್ಞಾನಿಕ ಬೆಲೆ ಸಿಗಲೆಂಬ ಕಾರಣಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು, ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಿದ್ದು, ಕಷ್ಟಪಟ್ಟು ಬೆಳದಂತಹ ರೈತರಿಗೆ ಉತ್ತಮ ಬೆಲೆ ಸಿಗುವಂತಾಗಬೇಕು ಎಂದರು.
ತಹಸೀಲ್ದಾರ್ ಪವನ್‌ಕುಮಾರ್ ಮಾತನಾಡಿ, ರೈತರು ಸರ್ಕಾರದ ಯಾವುದೇ ಸೌಲಭ್ಯ ಅಥವಾ ಪರಿಹಾರದ ಅನದಾನ ಪಡೆಯಲು ಮೊದಲು ಫ್ರೂಟ್ ಐಡಿಯನ್ನು ಮಾಡಿಸಿಕೊಳ್ಳಬೇಕು. ತಾಲೂಕಿನಲ್ಲಿ ಶೇ.೪೦ರಷ್ಟು ಮಾತ್ರ ರೈತರು ಐಡಿ ಮಾಡಿಸಿಕೊಂಡಿದ್ದು, ಈ ಬಗ್ಗೆ ರೈತರಿಗೆ ಮಾಹಿತಿ ನೀಡಿದ್ದರೂ ಗಮನಹರಿಸುತ್ತಿಲ್ಲ. ತಾಲೂಕು ಬರಗಾಲ ಪೀಡಿತವೆಂದು ಘೋಷಣೆಯಾಗಿದ್ದು ಬರ ಪರಿಹಾರ ಬೇಕೆಂದರೆ ರೈತರು ಕಡ್ಡಾಯವಾಗಿ ಫ್ರೂಟ್ ಐಡಿ ಮಾಡಿಸಿಕೊಳ್ಳಬೇಕು ಇಲ್ಲದಿದ್ದರೆ ಪರಿಹಾರ ನಿಮಗೆ ಸಿಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಕಾರ್ಯದರ್ಶಿ ಸಿದ್ದುನ್ಯಾಮನಗೌಡ, ಬ್ಲಾಕ್ ಕಾಂಗ್ರೆಸ್ ತಾ. ಅಧ್ಯಕ್ಷ ಕಾಂತರಾಜು ಮತ್ತಿತರರಿದ್ದರು.