Asianet Suvarna News Asianet Suvarna News

ಚಿಂದಿ ಆಯುವವರಿಗಾಗಿ ಬೆಂಗಳೂರಲ್ಲಿ ಹಸಿರು ಮನೆ!

ಸೆಲ್ಕೋ ಪೌಂಡೇಶನ್ ಹಾಗೂ ಹಸಿರು ದಳ ಸಂಸ್ಥೆ ಚಿಂದಿ ಆಯುವವರಿಗಾಗಿ ಬೆಂಗಳೂರಿನಲ್ಲಿ ಸೂರಿನ ವ್ಯವಸ್ಥೆ ಕಲ್ಪಿಸುತ್ತಿದೆ. ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. 

Selco Foundation Build House For Rag Pickers in Bengaluru
Author
Bengaluru, First Published Sep 11, 2019, 8:58 AM IST

ಕಾವೇರಿ ಎಸ್‌.ಎಸ್‌.

ಬೆಂಗಳೂರು [ಸೆ.11]:  ಕಸ ಹೆಕ್ಕಿ ಬದುಕುತ್ತಿರುವ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ಮನೆ ನಿರ್ಮಿಸಿಕೊಡುವ ‘ಹಸಿರು ಮನೆ’ ವಸತಿ ಅಭಿವೃದ್ಧಿ ಯೋಜನೆಯನ್ನು ಸ್ವಯಂಸೇವಾ ಸಂಸ್ಥೆಯಾದ ‘ಹಸಿರು ದಳ’ ಅನುಷ್ಠಾನಗೊಳಿಸಿದೆ.

ಚಿಂದಿ ಹಾಯುವವರು, ಗುಜರಿ ವ್ಯಾಪಾರಿಗಳಿಗೆ ಕಡಿಮೆ ವೆಚ್ಚದಲ್ಲಿ ಸೂರು ಕಲ್ಪಿಸುವ ಯೋಜನೆ ‘ಹಸಿರು ಮನೆ’! ಹಸಿರು ದಳ ಸಂಸ್ಥೆ ಸೆಲ್ಕೊ ಫೌಂಡೇಷನ್‌ ಸಹಭಾಗಿತ್ವದಲ್ಲಿ ರೂಪಿಸಿರುವ ‘ಹಸಿರು ಮನೆ’ ಯೋಜನೆಯ ಪ್ರಾಯೋಗಿಕ ಹಂತದಲ್ಲಿ ಈಗಾಗಲೇ ಹೆಬ್ಬಾಳದಲ್ಲಿ ಮನೆ ನಿರ್ಮಿಸಲಾಗಿದೆ. ಸದ್ಯ ಜೆ.ಸಿ. ರಸ್ತೆಯಲ್ಲಿ ನೂತನ ಮನೆ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ. ವರ್ಷಾಂತ್ಯದೊಳಗೆ 16 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಆದರೆ, ಸ್ವಂತ ನಿವೇಶನವುಳ್ಳವರು ಮಾತ್ರ ಇದರ ಫಲಾನುಭವಿಗಳಾಗಬಹುದು.

ತ್ಯಾಜ್ಯದಿಂದ ಪ್ಲಾಸ್ಟಿಕ್‌ ಮತ್ತಿತರ ವಸ್ತುಗಳನ್ನು ಬೇರ್ಪಡಿಸಿ ನಗರವನ್ನು ಸ್ವಚ್ಛವಾಗಿಸಲು ಶ್ರಮಿಸುವ ಕುಟುಂಬಗಳು ಸರಿಯಾದ ಸೂರು ಹೊಂದಿಲ್ಲ. ನಗರದಲ್ಲಿ ಸ್ವಂತ ನಿವೇಶನವುಳ್ಳವರು 3500 ನಿಂದ 4000 ಕುಟುಂಬಗಳಿವೆ. ಕೆಲವೇ ಮಂದಿ ಮಾತ್ರ ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಆ ಮನೆಗಳೂ ಗುಣಮಟ್ಟದಿಂದ ಕೂಡಿಲ್ಲ. ಬಹುತೇಕರ ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುವುದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗಾಗಿ ಹಸಿರು ಮನೆ ಯೋಜನೆ ತರಲಾಗಿದೆ ಎನ್ನುತ್ತಾರೆ ಹಸಿರು ದಳ ಸಂಸ್ಥೆಯ ಸದಸ್ಯರು.

ವರ್ಷದ ಹಿಂದೆ ಶೆಡ್‌ನಲ್ಲಿ ವಾಸಿಸುತ್ತಿದ್ದ ಹೆಬ್ಬಾಳದ ಕುಂತಿಗ್ರಾಮದ ದೇವರಾಜ್‌ ಗೋಸಾಯಿ ಕುಟುಂಬಕ್ಕೆ ಚೊಕ್ಕವಾದ ಮನೆ ಕಟ್ಟಿಕೊಳ್ಳಲು ನೆರವಾಗಿದ್ದೇವೆ. ಇದಕ್ಕೆ ಒಟ್ಟಾರೆ 9.30 ಲಕ್ಷ ರು. ಅಂದಾಜಿಸಲಾಗಿತ್ತು. ದಾನಿಗಳ ಕೊಡುಗೆಯಿಂದ 6.30 ಲಕ್ಷ ರು.ದಲ್ಲೇ ಸೋಲಾರ್‌ ವ್ಯವಸ್ಥೆವುಳ್ಳ ಎರಡು ಅಂತಸ್ತಿನ ಮನೆ ನಿರ್ಮಿಸಲಾಗಿದೆ. ಜೆ.ಸಿ. ರಸ್ತೆಯಲ್ಲಿ .5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲು ಚಿಂತಿಸಲಾಗಿದೆ. ಚಿಂದಿ ಆಯುವ ಕೆಲಸ ಮಾಡುವವರಿಗೆ ಬ್ಯಾಂಕ್‌ಗಳು ಸಾಲ ಸೌಲಭ್ಯ ಕೊಡಲು ಹಿಂಜರಿಯುತ್ತವೆ. ಶೇ.3-4ರಷ್ಟುಬಡ್ಡಿ ದರದಲ್ಲಿ ಸಾಲ ನೀಡಿದ್ದಲ್ಲಿ ಸೂರು ಹೊಂದಲು ಸಾಧ್ಯ. ಮನೆಗಳನ್ನು ಸಾಧ್ಯವಾದಷ್ಟುಸುಸ್ಥಿರ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಸೌರಶಕ್ತಿ ಮೂಲಕ ವಿದ್ಯುತ್‌ ಸೌಲಭ್ಯವಿರಲಿದೆ. ದಾನಿಗಳು ಮರುಬಳಕೆ ವಸ್ತುಗಳನ್ನು ನೀಡುವುದರಿಂದ ಕಸ ವಿಲೇವಾರಿಗೆ ಪರಿಹಾರ ಕಂಡುಕೊಳ್ಳುವುದರೊಂದಿಗೆ ನಿರಾಶ್ರಿತರಿಗೆ ಮನೆ ನಿರ್ಮಿಸಿದಂತಾಗುತ್ತದೆ ಎನ್ನುತ್ತಾರೆ ಹಸಿರು ದಳ ಸಂಸ್ಥಾಪಕಿ ನಳಿನಿ ಶೇಖರ್‌.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ನೀವೂ ದಾನ ಮಾಡಿ!

ಹಳೆ ಕಟ್ಟಡಗಳ ತ್ಯಾಜ್ಯಗಳನ್ನು ಸಂಗ್ರಹಿಸಿ ಅವುಗಳ ಪುನರ್ಬಳಕೆ ಮಾಡಲಾಗುತ್ತದೆ. ಅಂದರೆ ಮನೆ ನಿರ್ಮಿಸಲು ಈ ಹಿಂದೆ ಬಳಸಿರುವ ವಸ್ತುಗಳು ಮರುಬಳಕೆಯಾಗುತ್ತವೆ. ಹಳೆ ಮನೆ ಕೆಡವಿದಾಗ ಉಳಿದ ಕಂಬಿ, ಹೆಂಚು, ಮೆಟ್ಟಿಲಿನ ಸಲಕರಣೆ, ಕಿಟಕಿ, ಬಾಗಿಲು, ಮಂಚ, ಟೈಲ್ಸ್‌, ಪೀಠೋಪಕರಣಗಳು, ಕಬ್ಬಿಣದ ಗ್ರಿಲ್‌ಗಳು, ಮರಮುಟ್ಟುಗಳು ಹೀಗೆ ಬಳಸದೆ ಬಿಟ್ಟಅಥವಾ ಮರು ಬಳಕೆಯಾಗುವ ನಿರ್ಮಾಣ ಸಾಮಾಗ್ರಿಗಳನ್ನು ಪಡೆಯಲಾಗುತ್ತದೆ. ದಾನಿಗಳು ಕೊಟ್ಟಿದ್ದನ್ನು ಸಂಗ್ರಹಿಸಿಡಲು ಸಂಗ್ರಹಾಗಾರ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸ್ಥಳ ಹುಡುಕಾಟವೂ ನಡೆದಿದೆ. ದಾನಿಗಳು ನೀಡಿದ್ದಲ್ಲಿ ನಿರಾಶ್ರಿತರಿಗೆ ಮನೆ ಒದಗಿಸಲು ಸಹಕಾರಿಯಾಗಲಿದೆ.

ಮುಂಬರುವ ಎರಡು ತಿಂಗಳಲ್ಲಿ ಜೆ.ಸಿ.ರಸ್ತೆಯ ಮನೆಯೂ ಪೂರ್ಣಗೊಳ್ಳಲಿದೆ. ಕಿಟಕಿ, ಪೀಠೋಪಕರಣಗಳು, ಟೈಲ್ಸ್‌ ಒಳಗೊಂಡಂತೆ ಪ್ರತಿಯೊಂದನ್ನೂ ದಾನಿಗಳಿಂದ ಸಂಗ್ರಹಿಸಲಾಗುತ್ತಿದೆ. ಸಾಧ್ಯವಾದಷ್ಟುಕಡಿಮೆ ಖರ್ಚಿನಲ್ಲಿ ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಈ ಯೋಜನೆ ಮೂಲಕ ಸ್ವಂತ ಜಾಗ ಹೊಂದಿರುವ ತ್ಯಾಜ್ಯ ಸಂಗ್ರಹಾಕಾರರ ಕುಟುಂಬಗಳಿಗೆ ಅವರದ್ದೇ ಮನೆ ಹೊಂದಲು ಆರ್ಥಿಕ ನೆರವನ್ನು ಒದಗಿಸುವ ಜತೆಗೆ ಮಿತ ವ್ಯಯದ ಮನೆ ನಿರ್ಮಾಣಕ್ಕೆ ಬೇಕಾದ ತಾಂತ್ರಿಕ ನೆರವನ್ನೂ ಒದಗಿಸುತ್ತಿದ್ದೇವೆ. ದಾನಿಗಳು ಮೊ. 9923227049, 80-22355553  ಸಂಪರ್ಕಿಸಬಹುದು ಎಂದು ಹಸಿರು ಮನೆ ಯೋಜನೆಯ ಸಂಯೋಜಕ ಕಾರ್ತಿಕ್‌ ನಟರಾಜನ್‌ ಮಾಹಿತಿ ನೀಡಿದರು.

ನಾವು ಕಸ ಆಯುವವರು. ದಿನಗೂಲಿಗೆ ದುಡಿಯುವ ನಮಗೆ ಸುಂದರ ಮನೆ ಕನಸಿನ ಮಾತು. ಹಸಿರು ದಳ ಸಂಸ್ಥೆ ಮನೆ ನಿರ್ಮಾಣದ ರೂಪುರೇಷೆ ಸಿದ್ಧಪಡಿಸುವ ಜತೆಗೆ ಆರ್ಥಿಕ ನೆರವು ನೀಡಿದೆ. ಉಳ್ಳವರು ಮನೆ ಕೆಡವಿದ ವಸ್ತುಗಳನ್ನು ವ್ಯರ್ಥಗೊಳಿಸದೆ ನಿರಾಶ್ರಿತರಿಗೆ ನೀಡಬೇಕು. ನೂತನ ಮನೆ ಕಾರ್ಯ ನಡೆಯುತ್ತಿದ್ದು, ತುಂಬಾ ಖುಷಿಯಾಗಿದ್ದೇವೆ.

-ಇಂದಿರಾ, ಫಲಾನುಭವಿ.

Follow Us:
Download App:
  • android
  • ios