ಬೆಂಗಳೂರು[ಜು.05] :  ಹಸಿ ಮತ್ತು ಒಣಕಸ ಬೇರ್ಪಡಿಸದ ಮತ್ತು ಎಲ್ಲಂದರಲ್ಲಿ ಕಸ ಎಸೆಯುವ ಸಾರ್ವಜನಿಕರಿಗೆ ಸೆಪ್ಟೆಂಬರ್‌ನಿಂದ 500 ರು.ನಿಂದ 1 ಸಾವಿರ ರು. ವರೆಗೆ ದಂಡ ವಿಧಿಸುವುದಾಗಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಮೇಯರ್ ಹಾಗೂ ಆಯುಕ್ತರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ನಗರದ ಕಸದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪಾಲಿಕೆ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದೆ. ವಾರದ ಎಲ್ಲ ದಿನ ಹಸಿ ಕಸ, ಎರಡು ದಿನ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಸೆಪ್ಟಂಬರ್‌ನಿಂದ ಜಾರಿಗೆ ಬರಲಿದೆ.

ಸಾರ್ವಜನಿಕರು ವಿಂಗಡಿಸಿದ ಕಸವನ್ನೇ ಬಿಬಿಎಂಪಿ ನೇಮಿಸಿದ ಗುತ್ತಿಗೆದಾರರಿಗೆ ನೀಡಬೇಕು. ತಪ್ಪಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮೊದಲ ಬಾರಿ ಮಿಶ್ರ ಕಸ ನೀಡುವವರಿಗೆ 500 ರು. ದಂಡ, ಎರಡು ಅದಕ್ಕಿಂತ ಹೆಚ್ಚಿನ ಬಾರಿ ಮಿಶ್ರಕಸ ನೀಡುವ ಸಾರ್ವಜನಿಕರಿಗೆ 1 ರು. ಸಾವಿರ ದಂಡ  ವಿಧಿಸಲಾಗುವುದು. ಜನರಿಂದ ಮಿಶ್ರ ಕಸ ಸಂಗ್ರಹಿಸಿದರೆ ಗುತ್ತಿಗೆದಾರರಿಗೂ 5  ಸಾವಿರ ರು. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಪ್ರಸ್ತುತವಾಗಿ ಮೊದಲ ಬಾರಿ ತಪ್ಪಿಗೆ 100, ಎರಡನೇ ಬಾರಿ ತಪ್ಪಿಗೆ 200 ರು. ದಂಡ ಜಾರಿಯಲ್ಲಿದೆ. ಅದನ್ನು ಐದು ಹೆಚ್ಚಿಸಲು ಬಿಬಿಎಂಪಿಯು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ಸಿಕ್ಕಿದ್ದು, ಮುಂದಿನ ಪಾಲಿಕೆ ಸಭೆಯಲ್ಲಿ ವಿಷಯ ಮಂಡಿಸಿ ಸೆಪ್ಟಂಬರ್‌ನಿಂದ ಹೊಸ ದಂಡ ಜಾರಿಗೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ದಂಡ ವಿಧಿಸಲು 500 ಸ್ಮಾರ್ಟ್ ಉಪಕರಣ: ಘನತ್ಯಾಜ್ಯ ನಿರ್ವಹಣೆ ಮತ್ತು ಮೇಲುಸ್ತುವಾರಿಗೆ 233 ಮಾರ್ಷಲ್ ನೇಮಿಸಲಾಗುತ್ತಿದೆ. ಇವರು ದಂಡ ವಿಧಿಸುವುದಕ್ಕೆ ಮೊಬೈಲ್ ಮಾದರಿಯಲ್ಲಿರುವ 500 ಉಪಕರಣಗಳನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಪಾಲಿಕೆಗೆ ನೀಡುತ್ತಿದೆ. ದಂಡ ವಿಧಿಸಿದ ಸಮಯ, ಕಾರಣ, ಫೋಟೋವನ್ನು ಈ ಉಪಕರಣದ ಮೂಲಕ ಅಪ್ ಲೋಡ್ ಮಾಡಬಹುದಾಗಿದೆ. ಸಂಪೂರ್ಣ ಪ್ರಕ್ರಿಯೆಯನ್ನು ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ನಡೆಸಬಹುದಾಗಿದೆ ಎಂದು ತಿಳಿಸಿದರು.