ಬೆಂಗಳೂರು [ಜೂ.21] : ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳಿಗೂ ಸರ್ಕಾರಿ ನೌಕರರ ಮಾದರಿಯಲ್ಲಿ ಎರಡು ಮತ್ತು ನಾಲ್ಕನೇ ಶನಿವಾರ ರಜೆ ಸಿಗಲಿದೆ.

ಸರ್ಕಾರಿ ನೌಕರರಿಗೆ ಎರಡು ಮತ್ತು ನಾಲ್ಕನೇ ಶನಿವಾರ ರಜೆ ಘೋಷಿಸಿ ಹೊರಡಿಸಿರುವ ಆದೇಶದಲ್ಲಿ ಶಾಲಾ- ಕಾಲೇಜುಗಳಿಗೆ ಎರಡು ಮತ್ತು ನಾಲ್ಕನೇ ಶನಿವಾರ ರಜೆ ನೀಡಿಲ್ಲ. ಆದರೆ ಬೆಂಗಳೂರು ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಕಾಲೇಜುಗಳಿಗೆ ರಜೆ ಘೋಷಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಕಾನೂನು ಕಾಲೇಜು, ವಿವಿ ವ್ಯಾಪ್ತಿಯ ದೈಹಿಕ ಶಿಕ್ಷಣ ಕಾಲೇಜುಗಳು ಹಾಗೂ ರಾಮನಗರ ಸ್ನಾತಕೋತ್ತರ ಕೇಂದ್ರಕ್ಕೆ ಈ ರಜೆ ಅನ್ವಯವಾಗಲಿದೆ. 15 ದಿನಗಳ ಸಾಂದರ್ಭಿಕ ರಜೆಯನ್ನು ಹತ್ತು ದಿನಗಳಿಗೆ ಕಡಿತಗೊಳಿಸಲಾಗಿದೆ ಎಂದು ಕುಲಸಚಿವರು ಆದೇಶ ಹೊರಡಿಸಿದ್ದಾರೆ. ಆದೇಶವು ತಕ್ಷಣದಿಂದಲೇ ಜಾರಿಯಾಗಲಿದ್ದು, ವಿವಿ ವ್ಯಾಪ್ತಿಯಲ್ಲಿ ಎರಡು ಮತ್ತು ನಾಲ್ಕನೇ ಶನಿವಾರ ಕಾಲೇಜುಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ತಿಳಿಸಿದೆ.